Advertisement

ಮೈಸೂರು ದಸರಾಕ್ಕೆ ಮುನ್ನುಡಿ : ಸಾಂಪ್ರದಾಯಿಕ ಪೂಜೆ ಮೂಲಕ ಅರಮನೆ ಪ್ರವೇಶಿಸಿದ ಗಜಪಡೆ

10:52 AM Aug 10, 2022 | Team Udayavani |

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯ ರೂವಾರಿಗಳಾದ ಗಜಪಡೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಅರಮನೆ ಅಂಗಳಕ್ಕೆ ಸ್ವಾಗತಿಸಲಾಯಿತು. ಈ ಮೂಲಕ ಅರಮನೆ ಅಂಗಳದಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿತು.

Advertisement

ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದು ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದ ಅಭಿಮನ್ಯು ನೇತೃತ್ವದ ಗಜಪಡೆಗೆ  9.20 ರಿಂದ 10 ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ  ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಪುಷ್ಪವೃಷ್ಟಿ ಗೈಯ್ದು, ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಅರಮನೆಗೆ ಬರಮಾಡಿಕೊಳ್ಳಲಾಯಿತು. ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಹಾಗೂ ಲಕ್ಷ್ಮೀ ಆನೆಗಳಿಗೆ ಪುರೋಹಿತರಾದ ಪ್ರಹ್ಲಾದ್‌ರಾವ್ ಗಜಪಡೆಯ ಪಾದ ತೊಳೆದು ಅರಿಶಿಣ, ಕುಂಕುಮ ಇಟ್ಟು ಮಂಗಳಾರತಿ ಮಾಡಿ ಇಡುಗಾಯಿ ಹೊಡೆದರು. ನಂತರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಸಚಿವರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ದ್ವಾರದ ಕಟ್ಟಡದಲ್ಲಿ ನಿಂತಿದ್ದ ಸಿಬ್ಬಂದಿ ಪುಷ್ಪ ಮಳೆ ಸುರಿಸಿದರು. ಬೆಲ್ಲ, ಕಬ್ಬು, ತೆಂಗಿನಕಾಯಿ ಸೇರಿ ಇನ್ನಿತರ ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿದರು.  ಬಳಿಕ, ನಗರ ಪೊಲೀಸ್ ವಾದ್ಯದವರು ಸಂಗೀತ ನುಡಿಸಿದ ಬಳಿಕ ಇನ್ಸ್ಪೆಕ್ಟರ್ ಅವರು ಆನೆಗಳು ಮತ್ತು ಗಣ್ಯರಿಗೆ ಗೌರವ ವಂದನೆ ಸಲ್ಲಿಸುತ್ತಿದ್ದಂತೆ ಅರಮನೆ ಪ್ರವೇಶ ಮಾಡಿದವು.

ಇದನ್ನೂ ಓದಿ : ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು

ಅರಮನೆ ಮಂಡಳಿಯಿಂದ ಪೂಜೆ: ದ್ವಾರದ ಬಳಿ ಸ್ವಾಗತಿಸಿದ ಬಳಿಕ ಪೂರ್ಣಕುಂಭ ಸ್ವಾಗತ, ಮಂಗಳವಾದ್ಯ, ನಾದಸ್ವರದೊಂದಿಗೆ ಅರಮನೆಯತ್ತ ಆನೆಗಳು ಹೆಜ್ಜೆ ಹಾಕಿದವು. ಗಜಪಡೆಗೆ ಅಶ್ವರೋಹಿ ಪಡೆ ಸಾಥ್ ನೀಡಿತು. ಬಳಿಕ ಸಂಪ್ರದಾಯದಂತೆ ಅರಮನೆ ಮಂಡಳಿಯಿಂದ ಪೂಜೆ ಸಲ್ಲಿಸಲಾಯಿತು. ದಸರಾ ಮಹೋತ್ಸವದ ಚಟುವಟಿಕೆಯಲ್ಲಿ ತೊಡಗುವ ಅಧಿಕಾರಿಗಳಿಗೆ ಮಂಡಳಿ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ಮಾವುತರು, ಕಾವಾಡಿಗಳಿಗೆ ದಿನನಿತ್ಯದ ಪದಾರ್ಥಗಳು ಸೇರಿ ಇನ್ನಿತರ ವಸ್ತುಗಳನ್ನು ಒಳಗೊಂಡ ಕಿಟ್‌ನ್ನು ಸಚಿವ ಸೋಮಶೇಖರ್ ವಿತರಿಸಿದರು.

ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದ ಪಾಲನೇತ್ರ, ಉಪ ಮೇಯರ್ ಅನ್ವರ್‌ಬೇಗ್, ಪ್ರಾಧಿಕಾರಗಳ ಅಧ್ಯಕ್ಷರಾದ ಕಾಪು ಸಿದ್ದಲಿಂಗಸ್ವಾಮಿ, ಎಂ.ಶಿವಕುಮಾರ್, ನಿಜಗುಣರಾಜು, ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಮುಡಾ ಆಯುಕ್ತ ದಿನೇಶ್ ಕುಮಾರ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಡಿಸಿಎಫ್ ಗಳಾದ ಕರಿಕಾಳನ್, ಕಮಲಾ ಕರಿಕಾಳನ್ ಸೇರಿದಂತೆ ಹಲವರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next