Advertisement

ಮೈಸೂರು ದಸರಾಗೆ ಜಿಲ್ಲೆ ಸ್ತಬ್ಧಚಿತ್ರ ಆಯ್ಕೆ

05:44 PM Oct 11, 2018 | Team Udayavani |

ಕೋಲಾರ: ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಈ ಬಾರಿ ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾರುವ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯನ್ನು ಪ್ರತಿಬಿಂಬಿಸುವ ಹಾಗೂ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಮೈಸೂರು ದಸರಾ ಉತ್ಸವದ ಮೂಲಕ ರಾಜ್ಯಕ್ಕೆ ಸಾರಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಸಮಗ್ರ ಅಭಿವೃದ್ಧಿಯನ್ನು ಸಾರುವ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿದೆ.

Advertisement

ಸ್ತಬ್ಧಚಿತ್ರ ಆಯ್ಕೆ: ಕನ್ನಡಿಗರ ನಾಡಹಬ್ಬವೆಂದೇ ಹೆಸರಾಗಿರುವ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ. ಈ ಮೆರವಣಿಗೆಯಲ್ಲಿ ಪ್ರತಿ ಜಿಲ್ಲೆಯಿಂದಲೂ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿಕೊಂಡು
ಮೆರವಣಿಗೆಯಲ್ಲಿ ತರಲಾಗುತ್ತದೆ. 

ಪ್ರವಾಸೋದ್ಯಮ ಬೆಳವಣಿಗೆ: ಸಾಮಾನ್ಯವಾಗಿ ಆಯಾ ಜಿಲ್ಲೆಯ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯಾ ಜಿಲ್ಲೆಗಳ ದೇವಾಲಯ, ಐತಿಹಾಸಿಕ ಸ್ಥಳಗಳು ಮೈಸೂರು
ದಸರಾಗೆ ಆಗಮಿಸುವ ದೇಶ ವಿದೇಶಿಯರಿಗೆ ಚಿರಪರಿಚಯವಾಗಲಿ, ಈ ಮೂಲಕ ಆಯಾ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗಲಿ ಎನ್ನುವುದು ಸ್ತಬ್ಧಚಿತ್ರ ಮೆರವಣಿಗೆಯ ಮೂಲ ಉದ್ದೇಶವೂ ಆಗಿದೆ.

ಜಿಪಂ ಸಿಇಒ ಯತ್ನ: ಕೋಲಾರ ಜಿಲ್ಲಾ ಪಂಚಾಯತ್‌ ಸಿಇಒ ಜಿ.ಜಗದೀಶ್‌ ಮೈಸೂರಿನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಎರಡು ದಸರಾಗಳ ಜವಾಬ್ದಾರಿ ಹೊತ್ತು ಕೆಲಸ ಮಾಡಿರುವ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಕೋಲಾರ ಜಿಲ್ಲೆಯ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಂದಿದ್ದರು. ಸಾಮಾನ್ಯವಾಗಿ ಪ್ರತಿ ಜಿಲ್ಲೆಯಿಂದಲೂ ದೇವಾಲಯಗಳ ಸ್ತಬ್ಧಚಿತ್ರ ಬರುವುದು ವಾಡಿಕೆ.

ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ಏನಾದರೂ ಸಂದೇಶವನ್ನು ಇಡೀ ರಾಜ್ಯಕ್ಕೆ ಸ್ತಬ್ಧಚಿತ್ರದ ಮೂಲಕ ಕಳುಹಿಸಬೇಕು ಎಂದು ಅವರು ತೀರ್ಮಾನಿಸಿ, ದೇವಾಲಯ ಐತಿಹಾಸಿಕ ಸ್ಥಳಗಳಿಗಿಂತಲೂ ವಿಭಿನ್ನವಾಗಿ ಇಡೀ ಜಿಲ್ಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ತಬ್ಧಚಿತ್ರವಾಗಿ ಕಳುಹಿಸಲು ನಿರ್ಧರಿಸಿದರು. 

Advertisement

ಜಿಪಂ ನಡೆ, ಅಭಿವೃದ್ಧಿ ಕಡೆ: ಪ್ರತಿ ಜಿಲ್ಲೆಯಿಂದಲೂ ಮೂರು ಮಾದರಿಗಳನ್ನು ಸ್ತಬ್ಧಚಿತ್ರವಾಗಿ ರೂಪಿಸಲಾಗುತ್ತದೆ. ಈ ಪೈಕಿ ಈ ಬಾರಿ ಕೋಲಾರ ಜಿಪಂ ಸಿಇಒ ಜಿ.ಜಗದೀಶ್‌ರ ಆಶಯದಂತೆ ಜಿಪಂ ನಡೆ, ಅಭಿವೃದ್ಧಿ ಕಡೆ ಎನ್ನುವ ಘೋಷ ವಾಕ್ಯದೊಂದಿಗೆ ರೂಪಿಸಿದ್ದ ಸ್ತಬ್ಧಚಿತ್ರಕ್ಕೆ ಮೈಸೂರು ದಸರಾ ಸ್ತಬ್ಧಚಿತ್ರ ಆಯ್ಕೆ ಸಮಿತಿಯೂ ಓಕೆ ಮಾಡಿದೆ. ಇದೀಗ ಜಂಬೂ ಸವಾರಿ ಉತ್ಸವ ಆರಂಭವಾಗಿರುವ ಹಿನ್ನೆಲೆಯಲ್ಲಿ, ಕಳೆದ ಹತ್ತು ವರ್ಷಗಳಿಂದ ಕೈಗಾರಿಕೆ ಇಲಾಖೆಯ ಎನ್‌.ರವಿಚಂದ್ರ ಸ್ತಬ್ಧಚಿತ್ರ ರೂಪಿಸಿ ಪ್ರದರ್ಶಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದು, ಜಿಪಂ ಯೋಜನಾಧಿಕಾರಿ ಎನ್‌.ರವಿಚಂದ್ರ ಈ ಬಾರಿಯೂ ಸ್ತಬ್ಧಚಿತ್ರ ಮಾಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗಲೇ ಸ್ತಬ್ಧಚಿತ್ರದ ನೀಲನಕ್ಷೆಯನ್ನು ತಯಾರಿಸಿದ್ದು, ಜಿಪಂ ನಡೆ, ಅಭಿವೃದ್ಧಿ ಕಡೆ ಎನ್ನುವ ವಾಕ್ಯದೊಂದಿಗೆ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಸ್ತಬ್ಧಚಿತ್ರ ರೂಪಕವಾಗಿ ತೋರಿಸಲು ತೀರ್ಮಾನಿಸಲಾಗಿದೆ.

ಗ್ರಾಮೀಣಾಭಿವೃದ್ಧಿಗೆ ಒತ್ತು: ಕೋಲಾರ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅದರಲ್ಲೂ ಉದ್ಯೋಗ ಖಾತ್ರಿ ಮೂಲಕ ಆಗಿರುವ ಅಭಿವೃದ್ಧಿ, ಅಂಗನವಾಡಿ ಶಾಲೆ ಅಂದು, ಇಂದು, ಶಾಲಾ ಕಟ್ಟಡ ಅಂದು ಇಂದು, ಸ್ಮಶಾನಗಳ ಅಭಿವೃದ್ಧಿ, ರಾಜೀವ್‌ಗಾಂಧಿ ಪಂಚಾಯತ್‌  ಸೇವಾ ಕೇಂದ್ರಗಳ ಕಾರ್ಯವೈಖರಿ, ಆಧುನಿಕ ದನದ ಕೊಟ್ಟಿಗೆ ಹೀಗೆ ಸಾಧ್ಯವಾದಷ್ಟು ಗ್ರಾಮೀಣಾಭಿವೃದ್ಧಿ ಯನ್ನು ಸ್ತಬ್ಧಚಿತ್ರದಲ್ಲಿ ತೋರಿಸಲು ಯೋಜಿಸಲಾಗಿದೆ.  ಹಿಂದಿನ ಅವಧಿಗಳಲ್ಲಿ ಕೋಲಾರ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳು, ದೇವಾಲಯಗಳಾದ ಅಂತರಗಂಗೆ, ಕೋಟಿಲಿಂಗೇಶ್ವರ, ಕುರುಡುಮಲೆ, ಸೋಮೇಶ್ವರ ದೇವಾಲಯ, ಕೋಲಾರಮ್ಮ ದೇವಾಲಯ, ಆವಣಿ ದೇವಾಲಯ, ಚಿನ್ನದ ಗಣಿಗಳು ಇತ್ಯಾದಿ ಸ್ತಬ್ಧಚಿತ್ರ ಗಳನ್ನು ರೂಪಿಸಲಾಗಿತ್ತು. ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಕೋಲಾರ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಮೊದಲ ಮೂರರೊಳಗಿನ ಬಹುಮಾನ ಪಡೆದು ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಸಮಗ್ರ ಅಭಿವೃದ್ಧಿಯ ಗ್ರಾಮೀಣಾಭಿವೃದ್ಧಿ ಸ್ತಬ್ಧಚಿತ್ರ ಹೇಗೆ ಮೈಸೂರು ದಸರಾದಲ್ಲಿ ಗಮನ ಸೆಳೆಯಲಿ ದೆಯೆಂಬ ಕುತೂಹಲ ಜಿಪಂ ಸಿಇಒ ಜಿ.ಜಗದೀಶ್‌ ಹಾಗೂ ಸ್ತಬ್ಧಚಿತ್ರ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಎನ್‌.ರವಿಚಂದ್ರ ಸೇರಿದಂತೆ ಇಡೀ ಜಿಲ್ಲೆಯ ಜನರಿಗಿದೆ.

ಕೋಲಾರ ಜಿಲ್ಲೆಯಲ್ಲಿ ನರೇಗಾ ಇತ್ಯಾದಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಹೇಗೆಲ್ಲಾ ಗ್ರಾಮೀಣಾಭಿವೃದ್ಧಿ
ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆಯೆಂಬ ಸಂದೇಶವನ್ನು ಮೈಸೂರು ದಸರಾ ಸ್ತಬ್ಧಚಿತ್ರದ ಮೂಲಕ ಇಡೀ ರಾಜ್ಯಕ್ಕೆ ತೋರಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್‌ ನಡೆ, ಅಭಿವೃದ್ಧಿ ಕಡೆ ಹೆಸರಿನಲ್ಲಿ ಸ್ತಬ್ಧಚಿತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. 
  ಜಿ.ಜಗದೀಶ್‌, ಸಿಇಒ, ಜಿಪಂ

ಮೈಸೂರು ದಸರಾದಲ್ಲಿ ಕೋಲಾರ ಜಿಲ್ಲೆಯಿಂದ ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರ ಆಯ್ಕೆಯಾಗಿದೆ. ದಸರಾ
ಮೆರವಣಿಗೆಗೆ ಒಂದು ವಾರ ಇರುವಂತೆ ಸ್ತಬ್ಧಚಿತ್ರಕ್ಕೆ ಕಲಾಕೃತಿ ರೂಪ ನೀಡಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
  ಎನ್‌.ರವಿಚಂದ್ರ, ನೋಡೆಲ್‌ ಅಧಿಕಾರಿ, ಮೈಸೂರು ದಸರಾ ಸ್ತಬ್ಧಚಿತ್ರ, ಕೋಲಾರ

Advertisement

Udayavani is now on Telegram. Click here to join our channel and stay updated with the latest news.

Next