Advertisement

ಮೈಸೂರು ದಸರಾ: ಬಂಡೀಪುರದಿಂದ ಹೊರಟ ಚೈತ್ರ-ಲಕ್ಷ್ಮೀ ಆನೆಗಳು

08:27 PM Aug 06, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದಿಂದ ಮೈಸೂರು ದಸರಾಗೆ ಹೊರಟ ಚೈತ್ರ ಮತ್ತು ಲಕ್ಷ್ಮೀ ಎರಡು ಆನೆಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ನಾಡ ದಸರಾಗೆ ಕಳುಹಿಸಿ ಕೊಡಲಾಯಿತು.

Advertisement

ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚೈತ್ರ ಮತ್ತು ಲಕ್ಷ್ಮೀ ಆನೆಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಗೋಪಾಲಸ್ವಾಮಿ ಬೆಟ್ಟದ ಅರ್ಚಕರಾದ ಗೋಪಾಲಕೃಷ್ಣ ಭಟ್ಟರಿಂದ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆನೆಗಳಿಗೆ ಪೂಜೆ ಸಲ್ಲಿಸಿ ಬಾಳೆಹಣ್ಣು, ಬೆಲ್ಲ, ಕಬ್ಬು ತಿನ್ನಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್, ನಾಡಹಬ್ಬ ಮೈಸೂರು ದಸರಾಗೆ ಬಂಡೀಪುರದಿಂದ 48 ವರ್ಷದ ಚೈತ್ರ ಮತ್ತು 22 ವರ್ಷದ ಲಕ್ಷ್ಮೀ ಎರಡು ಹೆಣ್ಣಾನೆಗಳು ಹೋಗುತ್ತಿದೆ. ಸದ್ಯ ನಾಗರಹೊಳೆಗೆ ಆನೆಗಳು ತೆರಳುತ್ತಿದ್ದು, ನಂತರ ಗಜ ಪಯಣದೊಂದಿಗೆ ಮೈಸೂರಿಗೆ ಹೋಗಲಿವೆ. ಒಟ್ಟು 9 ಆನೆಗಳ ಪೈಕಿ ಬಂಡೀಪುರದಿಂದ 2 ಆನೆಗಳು ಹೋಗುತ್ತಿರುವುದು ನಮಗೆ ಹೆಮ್ಮೆ. ಹಿಂದೆಯೂ ಕೂಡ ಚಾಮರಾಜನಗರದಿಂದ ದಸರಾಗೆ ಸಾಕಷ್ಟು ಬಾರಿ ಆನೆಗಳನ್ನು ಕಳುಹಿಸಿಕೊಡಲಾಗಿತ್ತು. ಈಗಲೂ ಅದು ಮುಂದುವರೆದಿದೆ. ಇದರಿಂದ ಬಂಡೀಪುರ ಹೆಮ್ಮೆ ಇನ್ನಷ್ಟು ಇಮ್ಮುಡಿಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಜಗದೀಪ್ ಧನ್ಕರ್ ನೂತನ ಉಪರಾಷ್ಟ್ರಪತಿ : ನಿರೀಕ್ಷಿತ ಭರ್ಜರಿ ಜಯ

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶಕುಮಾರ್ ಮಾತನಾಡಿ, ಮೈಸೂರು ದಸರಾಗೆ ಬಂಡೀಪುರದಿಂದ ಹಿಂದೆ ಜಯಪ್ರಕಾಶ ಎಂಬ ಒಂದು ಆನೆ ಹೋಗುತ್ತಿತ್ತು. ಆದರೆ ಈ ವರ್ಷ ಮೂರು ಆನೆಗಳು ತೆರಳುತ್ತಿದ್ದು, ಮೊದಲ ಹಂತವಾಗಿ ಚೈತ್ರ ಮತ್ತು ಲಕ್ಷ್ಮೀ ಆನೆಗಳು ತೆರಳುತ್ತಿದ್ದು, ಎರಡನೇ ಹಂತದಲ್ಲಿ ಪಾರ್ಥ ಸಾರತಿ ಎಂಬ ಆನೆ ಹೋಗಲಿದೆ. ಚೈತ್ರ ಆನೆ ಈ ಹಿಂದೆ ದಸರಾಗೆ ಹೋಗಿತ್ತು. ಮೊದಲ ಬಾರಿಗೆ ಲಕ್ಷ್ಮೀ ಆನೆ ತೆರಳುತ್ತಿದೆ. ಮುಂದೆ ಸುಮಾರು 5 ಆನೆಗಳನ್ನು ದಸರಾಗೆ ಕಳುಹಿಸಲು ತರಬೇತಿ ನೀಡಿ ಸಿದ್ಧಗೊಳಿಸಲಾಗುವುದು ಎಂದರು.

Advertisement

ಜಿಲ್ಲಾಧಿಕಾರಿ ಚಾರುಲತಾ ಸೋಮಲತ್, ತಹಸೀಲ್ದಾರ್ ಸಿ.ಜಿ.ರವಿಶಂಕರ್, ಎಸಿಎಫ್ ಕೆ.ಪರಮೇಶ್, ರವೀಂದ್ರ, ನವೀನ್, ಆರ್‍ಎಫ್‍ಓ ಗಳಾದ ನವೀನ್‍ಕುಮಾರ್, ಲೋಕೇಶ್, ನಾಗೇಂದ್ರನಾಯಕ, ಶ್ರೀನಿವಾಸ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ  ವರ್ಗದವರು, ಸಾರ್ವಜನಿಕರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next