Advertisement

ಮೈಸೂರು ದಸರಾ: ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ

10:18 AM Aug 07, 2022 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಗಜಪಯಣಕ್ಕೆ ಭಾನುವಾರ ಸಂಭ್ರಮ, ಸಾಂಪ್ರದಾಯಿಕ ಚಾಲನೆ ದೊರೆಯಿತು.

Advertisement

ತುಂತುರು ಮಳೆಯ ನಡುವೆಯೂ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಯ ವೀರನಹೊಸಹಳ್ಳಿ ಬಳಿಯಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್ ಬಳಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳು, ಮುತ್ತೈದೆಯರು, ಹಾಡಿಯ ಜನರು ಈ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕೃಷ್ಣಪಕ್ಷದ ಶುಭ ದಿನವಾದ ಭಾನುವಾರ ಬೆಳಗ್ಗೆ 9.01ರಿಂದ 9.35ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಹಾಡಿ ರಾಜ ಪುರೋಹಿತ ಎಸ್.ವಿ.ಪ್ರಹ್ಲಾದ್ ರಾವ್  ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಿಂಗಾರಗೊಂಡು ಸಾಲಾಗಿ ನಿಂತಿದ್ದ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ, ಕಾವೇರಿ ಆನೆಗಳ ಪಾದ ತೊಳೆದು ಹೂ, ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು. ಆನೆಗಳಿಗೆ ಗಂಧ, ಸುಗಂಧಭರಿತ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಗಿರಿಜನ ಆಶ್ರಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಗಜಪಯಣಕ್ಕೆ ಧಾರ್ಮಿಕ ಚಾಲನೆ ನೀಡಿದರು. ಆನೆಗಳು ಕಾಡಿನಿಂದ ನೇರವಾಗಿ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಆಗಮಿಸಲಿದ್ದು, ಆ.10ರಂದು ಅರಮನೆ ಪ್ರವೇಶಿಸಲಿವೆ.

ಆಂಜನೇಯನಿಗೆ ವಿಶೇಷ ಪೂಜೆ: ಗಜಪಯಣಕ್ಕೂ ಮುನ್ನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೇಟ್ ಬಳಿಯಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಆಂಜನೇಯ ಸ್ವಾಮಿಗೆ ಮಾವುತರು ಹಾಗೂ ಕಾವಾಡಿ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಗಜಪಯಣದ ಹಿನ್ನಲೆಯಲ್ಲಿ ಆಂಜನೇಯನಿಗೆ ಅಭಿಷೇಕ, ಮಹಾಮಂಗಳಾರತಿ, ಅರ್ಚನೆ, ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

Advertisement

ಇದನ್ನೂ ಓದಿ:ಚೆಕ್ ಡ್ಯಾಂ ಗೆ ಬಿದ್ದು ಮಹಿಳೆ ನಿರುಪಾಲು : ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

ಈ ಬಗ್ಗೆ ಮಾತನಾಡಿದ ಹಾಡಿ ಪುರೋಹಿತ ಪ್ರಹ್ಲಾದ್ ರಾವ್, ಕಳೆದ ಹಲವು ವರ್ಷಗಳಿಂದ ಗಜಪಯಣದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ. ಎಂದಿನಂತೆ ಈ ಬಾರಿಯೂ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ನಾಡಿಗೆ, ದೇಶಕ್ಕೆ ಒಳಿತಾಗಲಿ ಎಂದು ಗಣಪನ ಪ್ರತಿರೂಪವಾದ ಆನೆ, ಚಾಮುಂಡೇಶ್ವರಿ ಹಾಗೂ ವನದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ಸಂಭ್ರಮಕ್ಕೆ ಮಳೆ ಅಡ್ಡಿ: ಗಜಪಯಣದ ಹಿನ್ನೆಲೆಯಲ್ಲಿ ವೀರನಹೊಸಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಜನರನ್ನು ಸೇರಿಸಿ ಆನೆಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಬೆಳಗ್ಗೆಯಿಂದಲೇ ಆರಂಭವಾದ ಮಳೆ ಸಂಭ್ರಮಕ್ಕೆ ಅಡ್ಡಿಯಾಯಿತು. ಮಳೆಯಿಂದಾಗಿ ಹೆಚ್ಚು ಜನರು ಭಾಗವಹಿಸಲಿಲ್ಲ. ಅಧಿಕಾರಿಗಳು ಕೊಡೆಗಳನ್ನು ಹಿಡಿದುಕೊಂಡೇ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮಳೆಯ ನಡುವೆಯೇ ಡೊಳ್ಳು ಕುಣಿತ, ಸೋಮನ ಕುಣಿತ, ಚಂಡೆ, ವಿವಿಧ ಜಾನಪದ ಕಲಾತಂಡಗಳು, ತಾಳ ಮೇಳ, ವಾದ್ಯಗಳು ಗಜಪಯಣಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಶಾಸಕ‌ ಹೆಚ್.ಪಿ.ಮಂಜುನಾಥ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಮೇಯರ್ ಸುನಂದ ಪಾಲನೇತ್ರ, ನಿಗಮ ಮಂಡಳಿ ಅಧ್ಯಕ್ಷರಾದ ಶಿವಕುಮಾರ್, ಎಂ.ಶಿವಣ್ಣ, ಜಿಲ್ಲಾಧಿಕಾರಿ ಡಾ.ಬಗಾದ್ ಗೌತಮ್, ಎಸಿಎಫ್ ಗಳಾದ ಕರಿಕಾಳನ್, ಕಮಲಾ ಕರಿಕಾಳನ್, ಜಿ.ಪಂ‌ ಸಿಇಒ ಪೂರ್ಣಿಮಾ.ಬಿ.ಆರ್ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next