Advertisement

ರಾತ್ರಿ ಹಸುಗಳನ್ನು ಕದ್ದು ಸಂತೆಗೆ ಮಾರಾಟ :ಜಿಲ್ಲೆಯ 10 ದನಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

12:38 PM Jan 20, 2022 | Team Udayavani |

ಮೈಸೂರು: ಗ್ರಾಮೀಣ ಭಾಗದಲ್ಲಿ ದನಗಳನ್ನು ಕಳ್ಳತನ ಮಾಡಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 10 ದನಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದರು.

Advertisement

ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತ್ಯೇಕ ಎರಡು ಪ್ರಕರಣ ಭೇದಿಸಿರುವುದರಿಂದ ಕಳೆದ ಒಂದು ವರ್ಷದಲ್ಲಿ ನಂಜನಗೂಡು ಮತ್ತು ಹುಣಸೂರು ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆದಿದ್ದ ದನಗಳ ಕಳ್ಳತನ ಬೆಳಕಿಗೆ ಬಂದಿದೆ. ನಂಜನಗೂಡು ಗ್ರಾಮಾಂತರ ಠಾಣೆಯ 5, ಹುಣಸೂರಿನ 5 ದನ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಆರೋಪಿಗಳಿಂದ ಎಚ್‌.ಎಫ್.ತಳಿಯ 10 ಹಸುಗಳು, 2 ನಾಡ ಹಸುಗಳು, ಒಂದು ಕರು, ಬೈಕ್‌, ಟಾಟಾ ಏಸ್‌ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ ಅಂದಾಜು 7.85 ಲಕ್ಷ ರೂ. ಆಗಿದೆ ಎಂದರು.

ದರೋಡೆಕೋರರೇ ದನ ಕಳ್ಳರು : ಡಿ.26ರಂದು ಹುಣಸೂರಿನ ಹಾಲಗೆರೆ ಜಂಕ್ಷನ್‌ ಬಳಿ ಮೈಸೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರಿಗೆ ದ್ವಿಚಕ್ರವಾಹನದ ಸವಾರನೊಬ್ಬ ಕಾರಿನ ಹಿಂಬದಿಯ ಬಂಪರ್‌ಗೆ ಡಿಕ್ಕಿ ಹೊಡೆದಿದ್ದನು. ನಂತರ, ಪರಸ್ಪರ ಮಾತುಕತೆ ನಡೆದು ಕಾರನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿ, ಹುಣಸೂರು ಪಟ್ಟಣದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕಾರಿನ ಚಾಲಕನಿಂದ 17 ಸಾವಿರ ರೂ.ನಗದು, ಮೊಬೈಲ್‌ ಕಸಿದುಕೊಂಡಿದ್ದನು. ಈ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣ ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್‌
ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಘಟನೆ ನಡೆದಾಗ ದೊರೆತ ಮಾಹಿತಿ ಆಧರಿಸಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ, ಹುಣಸೂರು ಪಟ್ಟಣದಲ್ಲಿ ಒಂದು ದರೋಡೆ ಪ್ರಕರಣ, ಮೋಟಾರ್‌ ಬೈಕ್‌, 2 ದನ ಕಳ್ಳತನ, ಬಿಳಿಕೆರೆ ಠಾಣೆ ವ್ಯಾಪ್ತಿಯಲ್ಲಿ 3 ದನಕಳ್ಳತನ ಪ್ರಕರಣ ಸೇರಿ 7 ಪ್ರಕರಣಗಳನ್ನು ಪತ್ತೆ
ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ ಜೆಸಿಬಿಯನ್ನೇ ಕದ್ದೊಯ್ದ ಖದೀಮರು : ಪೊಲೀಸರಿಂದ ಶೋಧಕಾರ್ಯ

ಹತ್ಯೆ ತನಿಖೆಗೆ ವಿಶೇಷ ತಂಡ: ಮೈಸೂರು ತಾಲೂಕಿನ ರಮ್ಮನಹಳ್ಳಿಯ ಜೆಸಿಬಿ ಚಾಲಕನ ಹತ್ಯೆ ಸಂಬಂಧ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಎಚ್‌.ಡಿ. ಕೋಟೆ ಟೈಗರ್‌ಬ್ಲಾಕಿನಲ್ಲಿ ಸಹೋದರರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ತಮ್ಮನನ್ನು ಬಂಧಿಸಲಾಗಿದೆ. ಮತಾಂತರ ಮಾಡಲು ಒತ್ತಡ ಹೇರಿರುವ ಕುರಿತು
ದಾಖಲೆಗಳನ್ನು ಕೊಡುವಂತೆ ಹೇಳಿದ್ದೇವೆ. ಪರಸ್ಪರ ಹಲ್ಲೆ ಪ್ರಕರಣ ದಾಖಲಾಗಿದೆ ಹೊರತು ಬೇರೆ ಮೊಕದ್ದಮೆ ದಾಖಲಾಗಿಲ್ಲ. ಅದೇ ರೀತಿ ಅರಸಿನಕೆರೆಯಲ್ಲಿ ಪಾನಿಪುರಿ ತಿನ್ನಲು ತೆರಳಿದ್ದಾಗ ನಡೆದಿರುವ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಕಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಆರ್‌.ದಂಡಿನ ಇದ್ದರು.

Advertisement

ದನಗಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ?
ರಾತ್ರಿಯಾಗುವುದನ್ನೇ ಕಾಯುತ್ತಿದ್ದ ಕಳ್ಳರು ರೈತರು ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದ ದನಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಸಂಬಂಧ ಅನೇಕ ದೂರುಗಳು ದಾಖಲಾಗಿದ್ದವು. ಜ.7ರಂದು ಹದಿನಾರು ಗ್ರಾಮದಲ್ಲಿ ದನ ಕಳ್ಳತನವಾಗಿರುವ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಲು ರಾತ್ರಿ ವೇಳೆ ಹೆಚ್ಚು ಗಸ್ತು ಹಾಕಲಾಗಿತ್ತು. ಜ.14ರಂದು ನಂಜನಗೂಡು ಗ್ರಾಮಾಂತರ ಠಾಣೆಯ ಕೆ.ಎ.ಚಂದ್ರ ಹಾಗೂ ಸಿಬ್ಬಂದಿ ಹಂಡುವಿನಹಳ್ಳಿ, ದೇಬೂರು, ಹೆಗ್ಗಡಹಳ್ಳಿ ಗ್ರಾಮಗಳಲ್ಲಿ ಗಸ್ತಿನಲ್ಲಿದ್ದಾಗ ಬೈಕ್‌ನಲ್ಲಿ ಹೆಗ್ಗಡಹಳ್ಳಿ ಕಡೆಯಿಂದ ನಂಜನಗೂಡು ಕಡೆಗೆ ಅನುಮಾನಾಸ್ಪದವಾಗಿ ಬರುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹಸುಗಳನ್ನು ಕಳ್ಳತನ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾರೆ. ಇವರು ಹದಿನಾರು ಗ್ರಾಮದಲ್ಲಿ 4 ಹಸು, 1 ಕರು, ಬಸವನವಪುರ, ಹೆಬ್ಯಾ, ಅಡಕನಹಳ್ಳಿಹುಂಡಿ, ಮೈಸೂರು ತಾಲೂಕಿನ ಕೂಡನಹಳ್ಳಿ, ಬಸಳ್ಳಿಹುಂಡಿ ಗ್ರಾಮಗಳಲ್ಲಿ ಹಸುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕದ್ದ ಹಸುಗಳನ್ನು ಸಂತೆಯಲ್ಲಿ ಮಾರಾಟ ಮಾಡಿದ್ದು, ಅವುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಉಳಿದವು ಪತ್ತೆಯಾಗಿಲ್ಲ. ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next