Advertisement

ಚಾಮರಾಜದಲ್ಲಿ ಬಿಜೆಪಿ ಎದುರಿಸುವ ಕೈ ಹುರಿಯಾಳು ಯಾರು?

03:17 PM Oct 16, 2022 | Team Udayavani |

ಮೈಸೂರು: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುವ ಕ್ಷೇತ್ರಗಳಲ್ಲಿ ಮೈಸೂರು ನಗರದ ಚಾಮರಾಜ ಕ್ಷೇತ್ರವೂ ಒಂದಾಗಿದೆ.

Advertisement

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳಿಗೆ ನೆಲೆ ಇರುವ ಕ್ಷೇತ್ರ ಚಾಮರಾಜ. ಜೆಡಿಎಸ್‌ ಈ ಕ್ಷೇತ್ರದಲ್ಲಿ ಜಯದ ನಗೆ ಬೀರದಿದ್ದರೂ ಫ‌ಲಿತಾಂಶವನ್ನು ಏರುಪೇರು ಮಾಡುವ ಶಕ್ತಿ ಹೊಂದಿದೆ. ಬಿಜೆಪಿ ಕಾಲಕ್ರಮೇಣ ಭದ್ರ ನೆಲೆಯೂರಿದೆ.

ಕಾಂಗ್ರೆಸ್‌ 1989ರಲ್ಲಿ ಗೆದ್ದ ನಂತರ ನಾಲ್ಕು ಚುನಾವಣೆಗಳಲ್ಲಿ ಜಯದ ಮುಖವನ್ನೇ ಕಂಡಿರಲಿಲ್ಲ. ಸತತವಾಗಿ ನಾಲ್ಕು ಬಾರಿ ಇಲ್ಲಿ ಗೆಲುವು ಸಾಧಿಸಿದ್ದು ಬಿಜೆಪಿ. ಕಾಂಗ್ರೆಸ್‌ ಮತ್ತೆ ಗೆಲುವಿನ ನಗೆ ಬೀರಿದ್ದು 2013ರಲ್ಲಿ. ಆದರೆ, ನಂತರದ 2018ರ ಅಸೆಂಬ್ಲಿ ಚುನಾವಣೆ ಯಲ್ಲಿ ಕಾಂಗ್ರೆಸ್‌ ಸೋಲು ಕಂಡಿತು.

ಟಿಕೆಟ್‌ಗಾಗಿ ಜಿದ್ದಾಜಿದ್ದಿ: ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ಕುರುಬರು, ವೀರಶೈವ – ಲಿಂಗಾಯತರು, ನಾಯಕರು, ದಲಿತರು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಒಕ್ಕಲಿಗರಿಗೇ ಸಾಮಾನ್ಯವಾಗಿ ಇಲ್ಲಿ ಟಿಕೆಟ್‌ ನೀಡುತ್ತಾ ಬಂದಿದೆ. ಪ್ರಮುಖ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಒಕ್ಕಲಿಗರ ಮಧ್ಯೆಯೇ ಪೈಪೋಟಿ ನಡೆಯುತ್ತದೆ. ಕಾಂಗ್ರೆಸ್‌ ನಲ್ಲಿ ಈ ಬಾರಿ ಮಾಜಿ ಶಾಸಕ ವಾಸು ಹಾಗೂ ಕೆ.ಹರೀಶ ಗೌಡ ಅವರ ಮಧ್ಯೆ ಟಿಕೆಟ್‌ಗಾಗಿ ಜಿದ್ದಾಜಿದ್ದಿ ಇದೆ. ಇಬ್ಬರೂ ಒಕ್ಕಲಿಗ ಸಮಾಜದವರು. ಇಬ್ಬರು ಮುಖಂಡರು ತಮಗೆ ಟಿಕೆಟ್‌ ಕೊಡುವುದರಿಂದ ಗೆಲುವು ಹೇಗೆ ಸಾಧ್ಯ ಎಂಬುದನ್ನು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ.

ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಪಕ್ಷದಲ್ಲಿ ತಮ್ಮ ಹಿರಿತನ, ಕಳೆದ ಬಾರಿ ಶಾಸಕರಾಗಿದ್ದಾಗ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಜನರ ಜೊತೆ ತಮ್ಮ ಸಂಪರ್ಕ, ವಿವಾದಗಳಿಂದ ದೂರವಿರುವುದು ಟಿಕೆಟ್‌ ಸಿಗಲು ತಮಗೆ ಶ್ರೀರಕ್ಷೆಯಾಗಿದೆ ಎಂಬುದು ವಾಸು ಅವರ ವಿಶ್ವಾಸ. ವಾಸು ಅವರಿಗೆ ಅವರದ್ದೇ ಆದ ವರ್ಚಸ್ಸು ಇದೆ.

Advertisement

ಬೇರು ಮಟ್ಟದಲ್ಲಿ ಜನರ ಸಂಪರ್ಕ: ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೇಳುತ್ತಿರುವ ಹರೀಶ್‌ ಗೌಡ ಕಳೆದ ಅಸೆಂಬ್ಲಿ ಚುನಾವಣೆ ನಂತರ ಕಾಂಗ್ರೆಸ್‌ ಸೇರಿದವರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಸಿಗದೇ ಬಂಡಾಯದ ಕಹಳೆ ಮೊಳಗಿಸಿದವರು. ಚುನಾವಣೆಯಲ್ಲಿ 21 ಸಾವಿರ ಮತಗಳನ್ನು ಪಡೆದು ತಮ್ಮ ಶಕ್ತಿ ಪ್ರದರ್ಶಿಸಿದರು. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಇಬ್ಬರು ಬೆಂಬಲಿಗರನ್ನು ಪಕ್ಷೇತರರಾಗಿ ಗೆಲ್ಲಿಸಿಕೊಂಡು ಬಂದರು. ಉದ್ಯೋಗಮೇಳ, ಸಾಮೂಹಿಕ ವಿವಾಹ, ಕೋವಿಡ್‌ ಸಂಕಷ್ಟದಲ್ಲಿ ಬಡವರಿಗೆ ನೆರವು ಹೀಗೆ ಸಾಮಾಜಿಕ ಕಾರ್ಯಗಳಲ್ಲಿ ಹರೀಶಗೌಡ ತೊಡಗಿಸಿಕೊಂಡಿದ್ದಾರೆ. ಹರೀಶ ಗೌಡ ಬೇರು ಮಟ್ಟ ದಲ್ಲಿ ಜನರ ಸಂಪರ್ಕವಿರುವ ರಾಜಕಾರಣಿ.

ಹಾಲಿ ಶಾಸಕ ಬಿಜೆಪಿಯ ಎಲ್‌.ನಾಗೇಂದ್ರ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ನಾಗೇಂದ್ರ ಶೇ.36.77 ಮತಗಳನ್ನು ಪಡೆದರು. ಎರಡನೇ ಸ್ಥಾನ ಪಡೆದ ಕಾಂಗ್ರೆಸ್ಸಿನ ವಾಸು ಶೇ.26.14, ಜೆಡಿಎಸ್‌ನ ಪ್ರೊ.ರಂಗಪ್ಪ ಶೇ.19.41, ಪಕ್ಷೇತರ ಅಭ್ಯರ್ಥಿ ಹರೀಶ ಗೌಡ ಶೇ.15.14 ಮತಗಳನ್ನು ಗಳಿಸಿದರು. ಇನ್ನು ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಅಂತಹ ಪೈಪೋಟಿ ಏನೂ ಕಂಡು ಬಂದಿಲ್ಲ. ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂಬುದರ ಮೇಲೆ ಜೆಡಿಎಸ್‌ ತನ್ನ ಅಸ್ತ್ರ ಬಳಸುವ ಲೆಕ್ಕಾಚಾರದಲ್ಲಿದೆ. ಹಳೇ ಮೈಸೂರು ಭಾಗ ದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಟಿಕೆಟ್‌ ವಂಚಿತರು ಜೆಡಿಎಸ್‌ ಪಾಳಯಕ್ಕೆ ಜಿಗಿಯಲಿದ್ದಾರೆಂಬ ನಿರೀಕ್ಷೆ ಯಲ್ಲಿ ಜೆಡಿಎಸ್‌ ಮುಖಂಡರಿದ್ದಾರೆ.

ಸದ್ಯಕ್ಕೆ ರಾಜಕಾರಣದಲ್ಲಿಲ್ಲ: ಪ್ರೊ.ರಂಗಪ್ಪ:

ಮೈಸೂರು: ಕಳೆದ ಬಾರಿ ಜೆಡಿಎಸ್‌ನಿಂದ ಕಣಕ್ಕೆ ಧುಮುಕಿದ್ದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ. ಪ್ರೊ.ರಂಗಪ್ಪ ಅವರು ಚುನಾವಣೆಯಲ್ಲಿ ಪರಾಭವಗೊಂಡ ನಂತರ ರಾಜಕಾರಣದಿಂದಲೇ ದೂರ ಸರಿದರು. ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಕುರಿತು ಪ್ರೊ.ರಂಗಪ್ಪ ಅವರನ್ನು ಪ್ರಶ್ನಿಸಿದಾಗ, ಸದ್ಯಕ್ಕೆ ನಾನು ರಾಜಕಾರಣದಲ್ಲಿ ಇಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next