Advertisement
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಬಳಿಕ ಮಂಗಳವಾರ (ಸೆ.3) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆ ಕಾಪಾಡುವ ಜೊತೆಗೆ ಉನ್ನತೀಕರಿಸಬೇಕಿದೆ. ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಚಾಮುಂಡಿಬೆಟ್ಟವಷ್ಟೇ ಅಲ್ಲ ಎಲ್ಲಾ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಚಾಮುಂಡಿಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.
ಚಾಮುಂಡಿ ಬೆಟ್ಟ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಹಾಗಿಯೇ ಭಕ್ತಾದಿಗಳಿಗೆ ಸೌಲಭ್ಯ ಒದಗಿಸಲು ಪ್ರಾಧಿಕಾರ ರಚನೆ ಮಾಡಲಾಗಿದ್ದು, ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯುತ್ತ, ಕಾಲ ಕಾಲಕ್ಕೆ ಸಭೆಗಳು ನಡೆಸಿ ಸುತ್ತಲಿನ ಪರಿಸರದ ಶುಚಿತ್ವಕ್ಕೆ ಹೆಚ್ಚಿನ ಶ್ರಮ ಹಾಕಬೇಕು. ಕಸವನ್ನು ಆಗ್ಗಿಂದಾಗೇ ತೆರವುಗೊಳಿಸಬೇಕು. ಭಕ್ತರ ಸಂಖ್ಯೆ ಹೆಚ್ಚಳದಿಂದ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು, ವಾಹನ ನಿಲುಗಡೆಗೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕಿದೆ.ಅಪರಾಧ ತಡೆಗಟ್ಟಲು ಟಾಸ್ಕ್ಫೋರ್ಸ್ ರಚನೆ ಮಾಡುತ್ತೇವೆ. ದಸರಾ ಸಂದರ್ಭದಲ್ಲಿ ವಿವಿಧ ಭಾಗದಿಂದ ಜನರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಹೆಚ್ಚಿನ ಮತ್ತು ಉತ್ಕೃಷ್ಟ ದರ್ಜೆಯ ಸವಲತ್ತು, ಸೌಲಭ್ಯಗಳ ಒದಗಿಸುವುದು ನಮ್ಮ ಗುರಿಯಾಗಿರಲಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Related Articles
ಹಿಂದಿನ ಸಮಿತಿ ಕ್ಷೇತ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡುತ್ತಿತ್ತು. ಮಹದೇಶ್ವರ ಬೆಟ್ಟದ ರೀತಿ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಕ್ಷೇತ್ರಕ್ಕೆ ಸೇರಿದ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶವಾಗಿದೆ. ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಉದ್ದೇಶ. ಈ ಹಿಂದೆ ಬಸ್ ನಿಲ್ದಾಣ , ಪಾರ್ಕಿಂಗ್ ಹಾಗೂ ಸ್ಟಾಲ್‌ಗಳ ನಿರ್ಮಾಣ ಮಾಡಲಾಗಿತ್ತು. ಬಾಕಿಯಿರುವ ಯೋಜನೆಗಳು ಪೂರ್ಣಗೊಳಿಸಲು ಸೂಚನೆ ನೀಡಿದರು.
Advertisement
ಪ್ರಾಧಿಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ
ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣ ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದ್ದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸಲ್ಲ. ದಾಸೋಹ ಭವನ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮ ವಹಿಸಿ, ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಸುಧಾರಣೆ ತಂದು ರುಚಿಕರ ಊಟ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಾಧಿಕಾರದಲ್ಲಿ ದುಡ್ಡಿಗೆ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು. ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಬಗ್ಗೆಯೂ ಬೇಡಿಕೆ ಇದೆ. ಈ ಬಗ್ಗೆಯೂ ಮುಂದುವರಿಯುವ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಚಾಮುಂಡೇಶ್ವರಿ ದೇವರ ದರ್ಶನ:
ಪ್ರಾಧಿಕಾರದ ಸಭೆಗೂ ಮೊದಲು ಸಿಎಂ ಸಿದ್ದರಾಮಯ್ಯ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.