ಯಾಂಗೂನ್: ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದಕ್ಕೆ ಮ್ಯಾನ್ಮಾರ್ ಸರಕಾರದಿಂದ ಬಂಧಿಸಲ್ಪಟ್ಟಿದ್ದ ರಾಯrರ್ಸ್ ಸುದ್ದಿಸಂಸ್ಥೆಯ ವಾ ಲೋನ್ ಹಾಗೂ ಕ್ಯಾವ್ ಸೋ ಊ ಎಂಬ ಇಬ್ಬರು ಪತ್ರಕರ್ತರನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಪತ್ರಿಕೋದ್ಯಮದ ಅತ್ಯುನ್ನತ ಅಂತಾರಾಷ್ಟ್ರೀಯ ಗೌರವವಾದ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದ ಈ ಪತ್ರಕರ್ತರನ್ನು ಯಾಂಗೂನ್ ನಗರದ ಅತ್ಯಂತ ಅಪಾಯಕಾರಿ ಜೈಲು ಎಂದೇ ಕುಖ್ಯಾತಿ ಗಳಿಸಿರುವ ಕಾರಾಗೃಹದಲ್ಲಿ 500ಕ್ಕೂ ಹೆಚ್ಚು ದಿನಗಳ ಕಾಲ ಇಡಲಾಗಿತ್ತು. 2017ರ ಡಿಸೆಂಬರ್‌ನಲ್ಲಿ ಈ ಇಬ್ಬರನ್ನು ಮ್ಯಾನ್ಮಾರ್ ಸರ್ಕಾರ ಬಂಧಿಸಿದ ಬೆನ್ನಲ್ಲೇ, ವಿಶ್ವವ್ಯಾಪಿ ಅಸಮಾಧಾನ ಭುಗಿಲೆದ್ದಿತ್ತು. ಪತ್ರಕರ್ತರ ಬಿಡುಗಡೆಗೆ ಆಗ್ರಹಿಸಿ ಹಲವಾರು ದೇಶಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮ್ಯಾನ್ಮಾರ್ ನಡೆಗೆ ಪ್ರತಿರೋಧ ವ್ಯಕ್ತವಾದ ಜತೆಗೆ, ತೆರೆಮರೆಯಲ್ಲಿ ನಡೆಸಲಾದ ಕೆಲವು ರಾಜತಾಂತ್ರಿಕ ನಡೆಗಳಿಗೆ ಬಗ್ಗಿದ ಮ್ಯಾನ್ಮಾರ್ ಕೊನೆಗೂ ಅವರನ್ನು ಬಿಡುಗಡೆ ಮಾಡಿದೆ.