Advertisement
ಧ್ವನಿ ಅನ್ನೋದು ನಮ್ಮ ಗುರುತು. ಮಗು ಹುಟ್ಟಿದಾಗಿನ ಅಳು, ಅದರ ಮೊದಲ ತೊದಲ ನುಡಿ, ಮೊದಲ ಪದ, ಮಾತು, ಜಗಳ ಇದೆಲ್ಲದರಲ್ಲೂ ನಮ್ಮತನವಿದೆ. ಅದು ನಮ್ಮ ಧ್ವನಿ.
Related Articles
Advertisement
ಹೀಗೆ ತನ್ನ ಧ್ವನಿಯನ್ನು ಕಳೆದುಕೊಂಡು ಬಂದಿದ್ದಳು ಮಾಲಾ (ಹೆಸರು ಬದಲಿಸಲಾಗಿದೆ). ಮದುವೆಯಾಗಿ 3 ವರ್ಷದ ಅನಂತರ ಪುಟ್ಟ ಮಗುವೊಂದಕ್ಕೆ ಜನ್ಮ ನೀಡಿದ ಖುಷಿಗೆ ತನ್ನೆಲ್ಲ ನೋವನ್ನು ಮರೆತಿದ್ದಳು. ಮಗು ಹುಟ್ಟಿದ ಮಾರನೇ ದಿನವೇ ಆಕೆಗೆ ಅರಿವಾಗಿದ್ದು ತನ್ನ ಧ್ವನಿಯಲ್ಲೇನೋ ಬದಲಾವಣೆಯಾಗಿದೆ ಎಂದು. ಸ್ಪಷ್ಟವಾಗಿ ಯಾರ ಬಳಿಯೂ ಮಾತನಾಡಲಾಗುತ್ತಿರಲಿಲ್ಲ. ಯಾರಿಗೂ ಈಕೆ ಮಾತಾಡಿದ್ದು ಕೇಳಿಸುತ್ತಲೇ ಇರಲಿಲ್ಲ. ಅದರಲ್ಲೂ ತನ್ನ ಮಗುವಿಗೆ ಜೋಗುಳವನ್ನೂ ಹಾಡಲಾಗುತ್ತಿರಲಿಲ್ಲ. ಹೀಗಾದ ಒಂದೆರಡು ದಿನದಲ್ಲಿ ವೈದ್ಯರ ಬಳಿ ಹೋಗಿ ಕಷ್ಟವನ್ನು ಹೇಳಿಕೊಂಡಳು. ಅಲ್ಲಿ ಪರೀಕ್ಷೆಯನ್ನೆಲ್ಲ ಮಾಡಿಸಿದಳು. ಅನಂತರ ತಿಳಿಯಿತು, ಮಗು ಜನನದ ವೇಳೆ ಈಕೆ ನೋವಿನಲ್ಲಿ ಚೀರಾಡಿದ ಹೊಡೆತಕ್ಕೆ ಅವಳ ಧ್ವನಿ ಪಟಲಕ್ಕೆ ಪೆಟ್ಟಾಗಿದೆ ಎಂದು. ಹೀಗಾಗಿ ತನ್ನ ಧ್ವನಿಯನ್ನು ಹೇಗಾದರೂ ಸರಿಪಡಿಸುತ್ತೀರಾ ಎಂದು ನನ್ನೆದುರಿಗೆ ನಿಂತಿದ್ದಳು.
ಮಾಲಾಳ ಕಥೆ ಅಪರೂಪ. ಶಿಕ್ಷಕರು, ಹಾಡುಗಾರರು, ರಾಜಕಾರಣಿಗಳು, ಕ್ಯಾನ್ಸರ್ ಪೀಡಿತರು ಧ್ವನಿ ಸಮಸ್ಯೆಯಿದೆ ಎಂದು ಬರುವುದು ಸಾಮಾನ್ಯ. ಆದರೆ ಒಂದು ಜೀವಕ್ಕೆ ಜೀವ ಕೊಡುವಾಗ ಹೀಗಾಗಿದ್ದು ಕೇಳಿದ್ದು ಇದೇ ಮೊದಲು. ವಾಕ್ ಚಿಕಿತ್ಸೆಯ ಮೊದಲ ದಿನ ತನ್ನ ಕನಸುಗಳು, ಆಸೆಗಳನ್ನೆಲ್ಲ ಜೋಡಿಸಿ ತನ್ನದೊಂದು ಕಥೆಯನ್ನು ಬರೆದು ತಂದಿದ್ದಳು. ಒಬ್ಬ ಮಹಿಳೆ ತಾಯಿಯಾಗುತ್ತಿದ್ದೇನೆ ಎಂಬ ವಾಸ್ತವವನ್ನು ಒಪ್ಪಿದ ಅನಂತರ ಒಂಬತ್ತು ತಿಂಗಳುಗಳ ಕಾಲ ಕಂದನ ಬರುವಿಕೆಯ ಕನಸಲ್ಲೇ ಮುಳುಗಿ ಬಿಡುತ್ತಾಳೆ. ತನ್ನಮ್ಮ ಹೇಳುತ್ತಿದ್ದ ಜೋಗುಳದ ಪದ್ಯ, ಸಣ್ಣ ಕಥೆಗಳು, ಮಗುವಿನ ಭಾಷೆಯನ್ನು ನೆನೆದು, ಮನಸ್ಸು ಹಾಗೂ ಶಾರೀರಿಕವಾಗಿ ಸಿದ್ಧತೆ ನಡೆಸಿರುತ್ತಾಳೆ. ಆದರೆ ಬದುಕೊಂದು ತಿರುವುಗಳಿರುವ ದೊಡ್ಡಯಾತ್ರೆ. ಇಲ್ಲಿ ಮುಂದೆ ತಿರುವಿದೆ ಎಂಬ ನಾಮಫಲಕಗಳಿಲ್ಲ. ಹಾಗಾಗಿ ಆಶ್ಚರ್ಯ ಖಚಿತ. ತನಗರಿವಿಲ್ಲದ ಕಷ್ಟಕ್ಕೆ ಸಿಲುಕಿದ್ದಳು ಮಾಲಾ. ಆದರೆ ಅವಳಲ್ಲಿ ಭರವಸೆಯೆಂಬ ಆಯುಧವಿತ್ತು. ತನ್ನ ಮಗುವಿಗೆಲ್ಲಿ ತನ್ನ ಗುರುತೇ ಸಿಗದಂತಾಗುತ್ತದೋ ಎಂಬ ಆತಂಕವಿದ್ದರೂ, ಅವಳು ಎಲ್ಲ ಭಯವನ್ನು ಮೆಟ್ಟಿ ನಿಂತಳು. ತನ್ನ ಧ್ವನಿ ಸರಿಯಾಗಲೇಬೇಕೆಂಬ ಹಠ ಅವಳಲ್ಲಿತ್ತು. ಹೀಗಾಗಿ ನಮ್ಮ ಥೆರಪಿ ಫಲಕೊಟ್ಟಿತು.
ಆಕೆಯ ಮಗುವಿಗೀಗ 5 ವರ್ಷವಿರಬಹುದು. ತನ್ನಂತೆಯೇ ಹಾಡಲು, ಮಾತಾಡಲು ಹೇಳಿಕೊಟ್ಟಿದ್ದಾಳೆ. ಅವಳನ್ನು ನೋಡಿ ವರ್ಷ ಕಳೆ ದರೂ ಅವಳು ಹೇಳುತ್ತಿದ್ದ ಮಾತೊಂದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇದ್ದೇ ಇತ್ತು. ಆಕೆ ಹೇಳುತ್ತಿದ್ದಳು, ನನ್ನದೇ ಧ್ವನಿಯಿದು. ನನ್ನ ಅಸ್ತಿತ್ವವಿದು. ಎಲ್ಲೋ ಅಡಗಿ ಕುಳಿತಿದೆ. ನನ್ನ ಮಗು ನನ್ನ ಧ್ವನಿಯನ್ನು ಕೇಳಿ ಅಳುವುದನ್ನು ನಿಲ್ಲಿಸಬೇಕು. ನನ್ನ ಧ್ವನಿಯಲ್ಲಿ ಜೋಗುಳವನ್ನು ಕೇಳಿ ಮೆಲ್ಲಗೆ ನಿದ್ದೆಗೆ ಜಾರಬೇಕು. ಹೀಗೆ ಹಲ ವು ತಿಂಗಳುಗಳ ಕಾಲ ಶತಪ್ರಯತ್ನ ಮಾಡಿ, ತನ್ನ ಧ್ವನಿಯನ್ನು ಶೇ. 80ರಷ್ಟು ಮರಳಿ ಪಡೆದಿದ್ದಾಳೆ.
ಇತ್ತೀಚೆಗೆ ಅವಳನ್ನು ಮಗುವಿನೊಂದಿ ಗೆ ಪೇಟೆಯಲ್ಲಿ ನೋಡಿದೆ. ಅವಳ ಮಾತಿಗೆ ಮಗುವಿನ ಕೇಕೆ ಕೇಳುವುದರಲ್ಲೇ ಒಂದು ಸಂಭ್ರಮವಿತ್ತು. ಎ. 16 ಜಾಗತಿಕ ಧ್ವನಿಯ ದಿನ. ಈ ಸಂದ ರ್ಭ ದಲ್ಲಿ ಮಾಲಾ ನೆನ ಪಾ ಗಿ ದ್ದಾಳೆ.
ಸ್ಫೂರ್ತಿ ವಾನಳ್ಳಿ, ತಸ್ಮೇನಿಯಾ