Advertisement

ಸಮಗ್ರ ಕರ್ನಾಟಕ ಅಭಿವೃದ್ಧಿ ನನ್ನ ದೃಷ್ಟಿಕೋನ

12:30 AM Mar 05, 2019 | |

ಬೆಂಗಳೂರು: “ಅಭಿವೃದ್ಧಿ ಹಾಗೂ ಆದ್ಯತೆ ವಿಚಾರದಲ್ಲಿ ಉತ್ತರ ಕರ್ನಾಟಕ, ಹಳೇ ಮೈಸೂರು ಎಂಬ ಭೇದವಿಲ್ಲದೆ ಸಮಗ್ರ ಕರ್ನಾಟಕದ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಣಿತರ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂಭತ್ತು ತಿಂಗಳಲ್ಲಿ ಒಂದೇ ಪಕ್ಷದ ಸುಭದ್ರ ಸರ್ಕಾರ ಮಾಡುವುದಕ್ಕಿಂತ ಹತ್ತು ಪಟ್ಟು ಕೆಲಸ ಜಾಸ್ತಿ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಈಗ ಬೀಳುತ್ತದೆ, ಆಗ ಬೀಳುತ್ತದೆ ಎಂಬ ಗಡುವು ನೀಡಲಾಗುತ್ತಿತ್ತು. ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಟೀಕೆಗಳು ಇದ್ದವು. ಆದರೆ ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಧಿಕಾರಿಗಳ ಸಹಕಾರದಿಂದ ಕೃಷಿ, ಕೈಗಾರಿಕೆ, ಶಿಕ್ಷಣ, ಇಂಧನ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಿದ್ದೇನೆ ಎಂದರು.

ಸಾಲಮನ್ನಾಗಾಗಿ ಬೇರೆ ಇಲಾಖೆಗಳ ಅನುದಾನ ಕಡಿತ ಮಾಡಲಾಗಿದೆ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ, ಅದು ಸುಳ್ಳು. ಆರ್ಥಿಕ ಶಿಸ್ತು ಮೀರದೆ ಕೇಂದ್ರ ಸರ್ಕಾರದ ಬಳಿ ಕೈ ಒಡ್ಡದೆ ಸಮರ್ಪಕವಾಗಿ ನಿಭಾಯಿಸಿದ್ದೇನೆ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳ ಜತೆ ನಾನು ಸಮ್ಮಿಶ್ರ ಸರ್ಕಾರದ ನಾಯಕತ್ವ ವಹಿಸಿಕೊಂಡಿದ್ದೇನೆ. ಆಗ ಇದ್ದ ವಾತಾವರಣ ಹಾಗೂ ಪರಿಸ್ಥಿತಿ ಬೇರೆ. ಈಗ ಇರುವ
ವಾತಾವರಣವೇ ಬೇರೆ. ಆದರೂ ನನ್ನ ಕೈಲಾದ ಮಟ್ಟಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನ ಪಡುತ್ತಿದ್ದೇನೆಂದು ಹೇಳಿದರು.

Advertisement

ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಷ್ಟ ತಪ್ಪಿಸಿ, ವಿದ್ಯುತ್‌ ಸೋರಿಕೆ ತಡೆಗಟ್ಟಿ ಎಂಬ ಪ್ರಶ್ನೆಗೆ ಬಸ್‌ ದರ ಏರಿಸಿದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತವಾಗಬಹುದು.

ಆದರೆ, ಎರಡೂ ಇಲಾಖೆಗಳಲ್ಲಿ ನಷ್ಟ ಸರಿದೂಗಿಸಿ ಸೋರಿಕೆ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. 

ವಿಧಾನಸೌಧ ಹಾಗೂ ನಮ್ಮ ಗೃಹ ಕಚೇರಿ ಕೃಷ್ಣಾ ಸದಾ ತೆರೆದಿರುತ್ತದೆ. ರಾಜ್ಯದ ಅಭಿವೃದ್ಧಿ  ವಿಚಾರದಲ್ಲಿ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ಸಲಹೆ-ಸೂಚನೆ ನೀಡಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಂವಾದದಲ್ಲಿ ಹೇಳಿದರು.

ತಾಲೂಕಿಗೆ ಮಾತ್ರ ಸಚಿವರು: ಸಚಿವ ಸಂಪುಟದಲ್ಲಿ ಕೆಲವು ಸಚಿವರು ನಾವು ರಾಜ್ಯಕ್ಕೆ ಅಲ್ಲ ಜಿಲ್ಲೆಗೆ ಸೀಮಿತ ಎಂಬಂತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಿಜ, ಕೆಲವು ಸಚಿವರು ತಾಲೂಕಿಗೆ ಸೀಮಿತರಾಗಿ ಯೂ ಇದ್ದಾರೆ. ಈ ಬಗ್ಗೆ ನನಗೂ ಬೇಸರವಿದೆ. ಹಿಂದೆಲ್ಲಾ ಬಜೆಟ್‌ ಹಾಗೂ ಇಲಾಖಾವಾರು ಬೇಡಿಕೆಗಳ ಮೇಲೆ ದಿನಗಟ್ಟಲೆ ಚರ್ಚೆಯಾಗುತ್ತಿತ್ತು. ಆದರೆ, ನನ್ನ ದುರಾದೃಷ್ಟ ಈ ಬಾರಿ ಚರ್ಚೆಯೇ ಇಲ್ಲದೆ ಬಜೆಟ್‌ಗೆ ಒಪ್ಪಿಗೆ ಸಿಕ್ಕಿದೆ ಈ ಬಗ್ಗೆಯೂ ನೋವಿದೆ ಎಂದು ಹೇಳಿದರು. ಹಲವು ಗಣ್ಯರು ಸಂವಾದದಲ್ಲಿ ಪಾಲ್ಗೊಂಡಿದ್ದರು.  

ರಾಜಕೀಯ ನಿವೃತ್ತಿ ಬಯಸಿದ್ದೆ
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 37 ಸ್ಥಾನ ಬಂದಿದ್ದರಿಂದ ಒಂದು ಹಂತದಲ್ಲಿ ರಾಜಕೀಯ ನಿವೃತ್ತಿಯಾಗಲು ಬಯಸಿದ್ದೆ. ಜನರು ನಮ್ಮನ್ನು ನಂಬಲಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ, ದೆಹಲಿಯಿಂದ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಬಂದ ಒಂದು ದೂರವಾಣಿ ಕರೆ ನನ್ನ ತೀರ್ಮಾನ ಬದಲಾಗಲು ಕಾರಣವಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು.

ಮಾಹಿತಿ ಇದ್ದರೆ ಕ್ರಮ: ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು ಸರ್ಕಾರದಲ್ಲಿ ವೀರಶೈವ-ಲಿಂಗಾಯತ ಅಧಿಕಾರಿಗಳಿಗೆ ತೊಂದರೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನಾನು ಎಂದೂ ಜಾತಿ ಆಧಾರದಲ್ಲಿ ಲಾಭ ಮಾಡಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಉತ್ತಮ ಅಧಿಕಾರಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದೇನೆ. ಯಾರಿಗಾದರೂ ತೊಂದರೆಯಾಗಿದ್ದರೆ ನೇರವಾಗಿ ನನ್ನ ಬಳಿ ಬಂದು ಮಾತನಾಡಬಹುದು. ಯಡಿಯೂರಪ್ಪ ಅವರ ಬಳಿ ಮಾಹಿತಿ ಇದ್ದರೂ ಕೊಡಬಹುದು. ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಕೇಳಿಬಂದ ಬೇಡಿಕೆಗಳು
– ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಹೆಸರಿನಲ್ಲಿ ಸೋರಿಕೆ ತಡೆಗಟ್ಟಬೇಕು. ಸೌರ ಹಾಗೂ ಪವನ ವಿದ್ಯುತ್‌ ಉತ್ಪಾದನೆಗೆ
ಹೆಚ್ಚು ಒತ್ತು ನೀಡಬೇಕು.
–  ವಿದ್ಯುತ್‌ ಉತ್ಪಾದನಾ ಯೋಜನೆಗಳಿಗೆ ಎದುರಾಗಿರುವ ಅಡ್ಡಿ ನಿವಾರಿಸಬೇಕು
– ಕೊಡಗಿನಲ್ಲಿ ಭೂ ಪರಿವರ್ತನೆ ನಿಲ್ಲಿಸಿರುವುದು ಸ್ವಾಗತಾರ್ಹ.ಇದನ್ನು ಇಡೀ ಪಶ್ಚಿಮಘಟ್ಟ ಪ್ರದೇಶಕ್ಕೆ ವಿಸ್ತರಿಸಬೇಕು.
– ಹೋಟೆಲ್‌ ಉದ್ಯಮಕ್ಕೆ ಸಂಬಂಧಿಸಿದ ಅನುಮತಿಗಳಿಗಾಗಿಏಕಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು. ಒಮ್ಮೆ ಪರವಾನಗಿ ಕೊಟ್ಟ ನಂತರ ಐದು ವರ್ಷಕ್ಕೊಮ್ಮೆ ನವೀಕರಿಸಬೇಕು.
– ಚಲನಚಿತ್ರ ಮಂದಿರಗಳಲ್ಲಿ ದಿನ, ವಾರದ ಬಾಡಿಗೆ ಬದಲಾಗಿ ಪರ್ಸೆಂಟೇಜ್‌ ಆಧಾರದಲ್ಲಿ ಬಾಡಿಗೆ ನಿಗದಿಪಡಿಸಬೇಕು
– ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ನೀಡುವ ಮಾನದಂಡಬದಲಾಯಿಸಬೇಕು. ಎಲ್ಲ ಚಿತ್ರಗಳಿಗೂ ಸಬ್ಸಿಡಿ ಅಗತ್ಯವಿಲ್ಲ
– ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ಪದೇ ಪದೇಮಾಡಬಾರದು. ಇದರಿಂದ ಸ್ಥಿರ ಆಡಳಿತ ಸಾಧ್ಯವಿಲ್ಲ
– ಘೋಷಣೆ ಮಾಡುವ ಯೋಜನೆಗಳಿಗೆ ಸೂಕ್ತ ಹಣಮೀಸಲಿಡಬೇಕು
– ತೆಂಗಿನ ಹೊಸ ತಳಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು
– ಕೃಷಿ, ಗ್ರಾಮೀಣಾಭಿವೃದ್ಧಿ , ನಿರುದ್ಯೋಗ ನಿವಾರಣೆಗಾಗಿ ಸಂಪುಟ ಹಿರಿಯ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಬೇಕು.
– ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಷ್ಟ ತಪ್ಪಿಸಿ, ಪ್ರಯಾಣ ದರ ಏರಿಸಿ
– ಮಂಗಳೂರಿನಲ್ಲಿ ಐಟಿ-ಬಿಟಿ ವಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ 
–  ಮಂಡ್ಯದಲ್ಲಿ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಪಾವತಿ ಕೊಡಿಸಿ
– ಸುವರ್ಣ ಗ್ರಾಮೋದಯ ಮತ್ತೆ ಆರಂಭಿಸಿ.

Advertisement

Udayavani is now on Telegram. Click here to join our channel and stay updated with the latest news.

Next