Advertisement

ಬಿಜೆಪಿಗೆ ನನ್ನ ಬೆಂಬಲ; ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು?HDK ವಿರುದ್ಧ ಸುಮಲತಾ ಕಿಡಿ

01:51 PM Mar 10, 2023 | Team Udayavani |

ಮಂಡ್ಯ: ಮಂಡ್ಯ ಜಿಲ್ಲೆಯ ಜನರಿಗೋಸ್ಕರ, ಅಭಿವೃದ್ಧಿಗಾಗಿ ನಾಲ್ಕು ವರ್ಷಗಳಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಆದರೆ ನಾಲ್ಕು ವರ್ಷಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ನನಗೆ ಪ್ರತಿಯೊಂದು ವಿಷಯದಲ್ಲೂ ಅವಮಾನ ಮಾಡಿದರು. ಜಿಲ್ಲೆಗಾಗಿ ನಾನು ಮಾಡಿರುವ ಕೆಲಸದ ಬಗ್ಗೆ ಲೌಡ್ ಸ್ಪೀಕರ್ ಹಾಕಿ ಹೇಳ್ಬೇಕಾ? ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಕೆಲವರಿಗೆ ಭಯ. ಇದು ನಮ್ಮ ಭದ್ರ ಕೋಟೆ ಅಂತೀರಾ? ಈ ಭದ್ರಕೋಟೆಗೆ ಏನು ಮಾಡಿದ್ದೀರಿ? ಇಷ್ಟು ಪವರ್ ಇಟ್ಟುಕೊಂಡು ಇಷ್ಟು ವರ್ಷ ಏನ್ ಮಾಡಿದ್ದೀರಾ? ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು…ಇದು ಪಕ್ಷೇತರ ಸಂಸದೆ ಸಮಲತಾ ಅಂಬರೀಶ್ ಶುಕ್ರವಾರ(ಮಾರ್ಚ್ 10) ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪರಿ ಇದಾಗಿದೆ.

Advertisement

ಇಂದು ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿದ ನಂತರ ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಹೇಳಿದ್ದಿಷ್ಟು:

ನಾನು ಆಕಸ್ಮಿಕಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯ ಪ್ರವೇಶಿಸಿ ನಾಲ್ಕು ವರ್ಷಗಳಾಗಿವೆ. ಅಂದು ಚುನಾವಣೆ ವೇಳೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಪುತ್ರನನ್ನು ಎದುರಿಸಿ ನಿಂತಿದ್ದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ಅಂಬರೀಶ್ ಅವರ ಆಪ್ತರು, ಅಭಿಮಾನಿಗಳು ಮಾತ್ರ. ಜನ ನಮ್ಮನ್ನು ಪ್ರೀತಿಸಿ ಆಶೀರ್ವದಿಸಿದ್ದರಿಂದ ನಾನು ಬೇರೆ ಆಯ್ಕೆ ಹುಡುಕಲು ಹೋಗಲಿಲ್ಲ. ಮಂಡ್ಯ ಜಿಲ್ಲೆಯ ಜನರಿಗೋಸ್ಕರ ಹೋರಾಟ ಮಾಡಿದೆ, ಆದರೆ ನನಗೆ ಚುನಾವಣೆಯ ನಂತರವೂ ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲಾ ಅವಮಾನ, ನೋವನ್ನು ಸಹಿಸಿಕೊಂಡು ಎಲ್ಲವನ್ನೂ ಪಣಕ್ಕಿಟ್ಟು ಮುಂದೆ ಬಂದಿದ್ದೇನೆ ಎಂದು ಸುಮಲತಾ ಹೇಳಿದರು.

ದೇಶದಲ್ಲಿ ಅಭಿವೃದ್ಧಿ ಆಗುತ್ತಿರುವುದು ಮೋದಿ ನೇತೃತ್ವದಲ್ಲಿ:

ನನ್ನ ಬೆಂಬಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಂದು ಸುಮಲತಾ ಘೋಷಿಸುವ ಮೂಲಕ ಬಿಜೆಪಿ ಸೇರ್ಪಡೆ ಖಚಿತಗೊಂಡಂತಾಗಿದೆ. ಕೋವಿಡ್ ನಿರ್ವಹಣೆಗಾಗಿ ನಾನು ನನ್ನ 4 ತಿಂಗಳ ವೇತನವನ್ನು ನೀಡಿದ್ದೇನೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಕಾಣುತ್ತಿದೆ. ಪಕ್ಷೇತರ ಸಂಸದೆಯಾಗಿದ್ದರೂ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಕೇಂದ್ರದ ಹಲವು ಯೋಜನೆಗಳು ನಮಗೆ ಸಿಕ್ಕಿವೆ. ಮಂಡ್ಯದ ಅಭಿವೃದ್ಧಿಗಾಗಿ ಒಂದು ಹೆಜ್ಜೆ ಮುಂದೆ ಹೋಗಿದ್ದೇನೆ ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ ಬಿಜೆಪಿಗೆ ಬಹುಪರಾಕ್ ಹೇಳಿದ್ದಾರೆ.

Advertisement

ಎರಡು ಸ್ಥಳಗಳಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು:

ಸಂಸದೆ, ಮಹಿಳೆ ಎನ್ನುವುದನ್ನು ನೋಡದೇ ನನ್ನ ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಅವಮಾನ ಮಾಡಿದ್ದರು. ಜಿಲ್ಲೆಯಲ್ಲಿ ಜನರು ರಾಜಕಾರಣದ ಭಾಷಣವನ್ನು ಕೇಳಿಕೊಂಡು ಇರಬೇಕಾ? ನಾನು ಮನಸ್ಸು ಮಾಡದಿದ್ದರೆ ಮೈಶುಗರ್ ಓಪನ್ ಆಗುತ್ತಿರಲಿಲ್ಲ. ಮಂಡ್ಯದ ಅಕ್ಕಪಕ್ಕದ ಜಿಲ್ಲೆಗಳೂ ಅಭಿವೃದ್ಧಿ ಆಗುತ್ತಿದೆ. ಕನ್ನಂಬಾಡಿ ಇಲ್ಲಾಂದ್ರೆ ಮಂಡ್ಯ ಜಿಲ್ಲೆಯೇ ಇಲ್ಲ. ಮಂಡ್ಯ ಜಿಲ್ಲೆಗೆ ಮಹಾರಾಜರು ಕೊಡುಗೆ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯನ್ನು ನಾವು ಕಾಪಾಡಿಕೊಳ್ಳಬೇಕು. ಮಂಡ್ಯದಲ್ಲಿ ಬರೀ ರಾಜಕಾರಣನಾ, ಅಭಿವೃದ್ಧಿ ಬೇಡವಾ? ಎಂದು ಸುಮಲತಾ ಪ್ರಶ್ನಿಸಿದರು.

ಮಂಡ್ಯದ ತಾಯಿ ಮಕ್ಕಳ ಆಸ್ಪತ್ರೆಗಾಗಿ ಸತತ ಹೋರಾಟ ಮಾಡಿದ್ದೇನೆ. ನಾನು ಮನಸ್ಸು ಮಾಡಿದ್ದಕ್ಕೆ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ ಅಕ್ರಮದ ವಿರುದ್ಧ ಹೋರಾಡಿದ ನನ್ನ ಮೇಲೆ ಎರಡು ಕಡೆಗಳಲ್ಲಿ ಹಲ್ಲೆ ನಡೆಸಲು ಯತ್ನಿಸಲಾಗಿತ್ತು ಎಂದು ಸುಮಲತಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next