ಹುಡುಗರಿಗೆ ಮೊದಲೇ ಶಿಸ್ತು ಕಡಿಮೆ. ಸಿಕ್ಕಿದ್ದೆಲ್ಲವೂ ಮುಖ್ಯವೇ ಅಂದುಕೊಂಡು ಪರ್ಸ್‌ನಲ್ಲಿ ತುಂಬಿಕೊಂಡು ಬಿಡುತ್ತಾರೆ. ಅದು ಗರ್ಭಿಣಿಯಂತೆ ಊದುತ್ತಾ ಹೋಗುತ್ತದೆ. ನೋಡಿದವರಿಗೆ, ಅದೇನ್ ಅಷ್ಟೊಂದು ಹಣ ಮಡಗಿದ್ದಾನೆ ಅನ್ನಿಸಬೇಕು!
“ಸರ್ ನಮ್ಮೂರ ಕಡೆ ಬಂದಾಗ ನಮ್ಮಲ್ಲಿಗೂ ಬನ್ನಿ’ ಅನ್ನುತ್ತಲೇ ಕೈ ಹಿಂದೆ ಹೋಗುತ್ತದೆ. ಹಿಂದಿನ ಬಲ ಭಾಗದ ಬ್ಯಾಕ್ ಪಾಕೆಟ್‌ನಲ್ಲಿ ಬಿಗಿಯಾದ ಜಾಗದಲ್ಲಿ ಬಚ್ಚಿಟ್ಟುಕೊಂಡಿದ್ದ ವಿಸಿಟಿಂಗ್ ಕಾರ್ಡ್ ಹಸ್ತಾಂತರವಾಗುತ್ತದೆ. ಗೆಳೆಯರಿಗೆ ಟ್ರೀಟ್ ಕೊಡಿÕ ಬಿಲ್ಲಿಂಗ್ ಕೌಂಟರ್ ಬಳಿ ಬಂದಾಗ ಕೈ ಹಿಂಬದಿಯ ಪಾಕೆಟ್ ಬಳಿ ಓಡುತ್ತದೆ. ಹುಡುಗಿಗೊಂದು ಚಂದದ ಮೂಗುತಿ ಕೊಡಿಸಿ ಹಣ ಕೊಡುವ ಸಮಯದಲ್ಲಿ ಮತ್ತೆ ಕೈ ಅದನ್ನು ತಡಕಾಡುತ್ತದೆ. ಅದೇ ಹುಡುಗರ ನಿಗೂಢ ಜಗತ್ತು ಅನ್ನಿಸಿಕೊಂಡ ಅವರ ವ್ಯಾಲೆಟ್!
ಒಂದು ಮಾತಿದೆ, “ನಿಮ್ಮ ಗೆಳೆಯರು ಯಾರು ಎಂದು ತೋರಿಸಿ, ನೀವು ಎಂಥವರು ಎಂದು ಹೇಳುತ್ತೇನೆ’ ಅಂತ. ಅದನ್ನೀಗ- ನಿಮ್ಮ ವ್ಯಾಲೆಟ್ (ಪರ್ಸ್) ತೋರ್ಸಿ, ನೀವು ಯಾವ ತರಹದ ವ್ಯಕ್ತಿಯೆಂದು ಹೇಳುತ್ತೇನೆ ಅಂತಲೂ ಹೇಳಬಹುದು. ಪಾಕೆಟ್ ಮನಿ ಸಂಪ್ರದಾಯ ಆರಂಭವಾಗುವ ಕಾಲಕ್ಕಿಂತ ಅದೆಷ್ಟೋ ಮೊದಲೆ ಪಾಕೆಟ್ ಸಂಸ್ಕೃತಿ ಅಸ್ತಿತ್ವದಲ್ಲಿತ್ತು. ಈಗ ಬಗೆ ಬಗೆಯಲ್ಲಿ, ಬಣ್ಣ ಬಣ್ಣದಲ್ಲಿ ಅದು ಬಂದು ಕೂತಿವೆ. ಚರ್ಮಧ್ದೋ, ಪ್ಲಾಸ್ಟಿಕ್‌ನಧ್ದೋ, ಅಲ್ಯೂಮಿನಿಯಂನಧ್ದೋ, ಚಿಕ್ಕದೋ, ದೊಡ್ಡದೊ, ಡಿಸೈನದೊ, ಸಾದಾಸೀದವೋ… ಅವರವರ ಅಭಿರುಚಿಯಂತೆ ಪ್ಯಾಂಟ್‌ನ ಜೇಬಿನೊಳಗೆ ಬಂದು ಸೇರುತ್ತವೆ.
ಆದರೆ, ವಿಚಾರ ಅದಲ್ಲ. ಹುಡುಗರ ವ್ಯಾಲೆಟ್‌ನಲ್ಲಿ ಸ್ಥಾನ ಪಡೆಯುವ ವಸ್ತುಗಳ ಕುರಿತಾಗಿದ್ದು. ಏನನ್ನು ಇಟ್ಟುಕೊಳ್ಳಬೇಕು, ಏನೇನನ್ನು ಇಟ್ಟುಕೊಳ್ಳಬಾರದು ಎಂಬುದು ಸ್ವಂತಕ್ಕೆ ಬಿಟ್ಟ ವಿಚಾರ. ಅಲ್ಲಿರುವ ವಸ್ತುಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಏನೇ ಆಗಲಿ ವ್ಯಾಲೆಟ್ ಮಾತ್ರ ಯಾವಾಗಲೂ ಗೊದಮೊಟ್ಟೆಯಂತೆ ಊದಿಕೊಂಡಿರುತ್ತದೆ. (ಪ್ಯಾಂಟಿನ ಹಿಂಭಾಗದಲ್ಲಿ ಊದಿದ ಪರ್ಸ್ ಇಟ್ಟುಕೊಂಡು ಕೂರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಇತ್ತೀಚಿನ ಸಂಶೋಧನೆಗಳು ಹೇಳಿವೆ!) ವ್ಯಾಲೆಟ್‌ನಲ್ಲಿ ಪ್ರಥಮ ಸ್ಥಾನ ಯಾವತ್ತಿಗೂ ನೋಟಿಗೆ.
ನೋಟೇ ಇಲ್ಲದಿದ್ದರೆ ಬರೀ ವ್ಯಾಲೆಟ್‌ಗೆ ಅಸ್ತಿತ್ವವಾದರೂ ಎಲ್ಲಿದೆ? ಮನೆದೇವರ ಕುಂಕುಮದಿಂದ ಹಿಡಿದು, ದಾರಿ ತಪ್ಪಿದ ಹೈದನೊಬ್ಬ ಇಟ್ಟುಕೊಡುವ ಕಾಂಡಮ್‌ಗೂ ಅದು ಜಾಗ ಕೊಡುತ್ತದೆ. ಬಸ್ ಪಾಸ್, ವಿಸಿಟಿಂಗ್ ಕಾರ್ಡ್, ಇಷಪಟ್ಟ ಹುಡುಗಿಗೆ ಕೊಡಿಸಿದ ಚಿನ್ನದೋಲೆಯ ಬಿಲ…, ಮೊದಲು ಬಂದ ಪ್ರೇಮ ಪತ್ರ, ಅಪ್ಪ-ಅಮ್ಮನ ಸಣ್ಣ ಫೋಟೊ, ತುಂಬ ಹಚ್ಚಿಕೊಂಡ ಚೆಂದುಳ್ಳಿಯ ಫೊಟೊ, ಹಳೆ ಹುಡುಗಿಯ ಕೊನೆಯ ಪತ್ರ, ಬಸ್ ಟಿಕೆಟ್‌ಗಳು, ಸಿನಿಮಾ ಟಿಕೆಟ್‌ಗಳು, ಟೀ ಶರ್ಟ್, ವಾಚಿನ ಗ್ಯಾರಿಂಟ್ ಕಾರ್ಡ್… ಏನೇನಿಲ್ಲ ಅಲ್ಲಿ ಹೇಳಿ?
ಪರ್ಸು ಹುಡುಗರದ್ದಾದರೇನು, ಅದನ್ನು ಖುಲ್ಲಂ ಖುಲ್ಲಂ ಬಿಚ್ಚಿಡಲಾಗದು. ಯಾರಾದರೂ ಹುಡುಗಿಯ ಫೋಟೊ ನೋಡಿ ಬಿಟ್ರೆ? ಪ್ರೇಮಪತ್ರ ಕದ್ದು ಓದಿ ಬಿಟ್ರೆ? ಚಿನ್ನದೋಲೆಯ ಬಿಲ್ ತಂಗಿಗೆ ಸಿಕ್ಕಿದರೆ? ಹಳೆ ಲವ್ ಮ್ಯಾಟರ್ ಹೊಸ ಹುಡುಗಿಗೆ ಗೊತ್ತಾದರ್ರೆ?… ಹೀಗೆ “ರೇ’ ಗಳ ನಿಗೂಢ ಜಗತ್ತು ಅದು. ಅಡಗಿಸಿಕೊಂಡ ಹತ್ತಾರು ಸತ್ಯಗಳ ಆಚೆ ಬಂದು ಬಿಟ್ಟರೆ ಎಂಬ ಭಯದಲ್ಲೇ ಹುಡುಗರು ತಮ್ಮ ವ್ಯಾಲೆಟ್ ಅನ್ನು ಎಲ್ಲೆಂದರಲ್ಲಿ ಇಡದೆ ಜೋಪಾನ ಮಾಡುತ್ತಾರೆ. ಮೊಬೈಲ್ ಪಡೆದುಕೊಂಡು ಪ್ರೈವಸಿಯನ್ನು ವ್ಯಾಲೆಟ್ಟೂ ಬಯಸುತ್ತದೆ.
ಹುಡುಗರಿಗೆ ಮೊದಲೇ ಶಿಸ್ತು ಕಡಿಮೆ. ಸಿಕ್ಕಿದ್ದೆಲ್ಲವೂ ಮುಖ್ಯವೇ ಅಂದುಕೊಂಡು ಪರ್ಸ್‌ನಲ್ಲಿ ತುಂಬಿಕೊಂಡು ಬಿಡುತ್ತಾರೆ. ಅದು ಗರ್ಭಿಣಿಯಂತೆ ಊದುತ್ತಾ ಹೋಗುತ್ತದೆ. ನೋಡಿದವರಿಗೆ, ಅದೇನ್ ಅಷ್ಟೊಂದು ಹಣ ಮಡಗಿದ್ದಾನೆ ಅನ್ನಿಸಬೇಕು! ವ್ಯಾಲೆಟ್ ತಿಪ್ಪೆಯಾಗುವುದನ್ನು ತಪ್ಪಿಸಿಕೊಳ್ಳಬೇಕು ಅಂತಾದರೆ ತಿಂಗಳಿಗೊಮ್ಮೆಯಾದರೂ “ಸcತ್ಛ ಪರ್ಸ್ ಆಂದೋಲನ’ ಹಮ್ಮಿಕೊಳ್ಳಲೇಬೇಕು. ಬೇಡವಾದದ್ದನ್ನು ಮೋಹವಿಲ್ಲದೆ ಎಸೆದು ಬಿಡುವುದು ಒಳ್ಳೆಯದು. ಗೊತ್ತಲ್ಲ, ಊದಿಕೊಂಡ ಪರ್ಸ್ ಮೇಲೆ ಕೂರುವುದು ಅಪಾಯ.
* ಸದಾಶಿವ್ ಸೊರಟೂರು