Advertisement

ನನ್ನ ರಾಜಕೀಯ ಗುರು ಅನಂತಕುಮಾರ್‌: ಜಗದೀಶ್‌ ಶೆಟ್ಟರ್‌

04:10 PM Sep 23, 2022 | Team Udayavani |

ಬೆಂಗಳೂರು: ಅನಂತಕುಮಾರ್‌ ಅವರು ರಾಜಕೀಯದಲ್ಲಿ ತಾವು ಬೆಳೆಯುವ ಜತೆಗೆ ನೂರಾರು ನಾಯಕರನ್ನು ಹುಟ್ಟುಹಾಕಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸ್ಮರಿಸಿದರು.

Advertisement

ಅನಂತಕುಮಾರ್‌ ಅವರು 63ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ನಗರದ ಶಂಕರಪುರದಲ್ಲಿನ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎ-ಚಾಟ್‌ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್‌ ಅವರು ತಮ್ಮ ಬಳಗವನ್ನು ಕಟ್ಟಿದ್ದು,ಯುವಕರಲ್ಲಿ ಪ್ರೇರಣಾ ಶಕ್ತಿಯನ್ನು ತುಂಬುತ್ತಿದ್ದರು. ಅವರೊಂದಿಗೆ ಎಬಿವಿಪಿಯಲ್ಲಿ ಕೆಲಸ ಮಾಡಿದ್ದೇನೆ. ತದ ನಂತರ ರಾಜಕೀಯ ಕ್ಷೇತ್ರಕ್ಕೆ ಬರಲು ಅವರೇ ಕಾರಣೀಭೂತರು ಎಂದು ಅವರೊಂದಿಗಿದ್ದ ಸಂಗತಿಗಳನ್ನು ನೆನಪಿಸಿಕೊಂಡರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಅನಂತ ಕುಮಾರ್‌ ಅವರು ಬಡವರು, ದಲಿತರ ಬಗ್ಗೆ ಸೇರಿದಂತೆ ಸಾಮಾಜಿಕ ನ್ಯಾಯ, ಸಮಾಜದ ಕಳಕಳಿ ಬಗ್ಗೆ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಅನಂತಕುಮಾರ್‌ ಅವರು ಮಾತ್ರ ಎಲ್ಲಾ ಸಮುದಾಯದ ನಾಯಕರನ್ನು ಬೆಳೆಸಿದ್ದಾರೆ. ಇಂದು ರಾಜಕೀಯ ವಾಣಿಜ್ಯೀಕರವಾಗಿದ್ದು, ಎಂಎಲ್‌ಎ ಅಥವಾ ಎಂಪಿಗಳು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಲು ತಿಂಗಳುಗಳು ಕಳೆಯುತ್ತಿವೆ. ಆದರೆ ಅನಂತ ಕುಮಾರ್‌ ಅವರು ಕೂಡಲೇ ಮಂತ್ರಿಗಳನ್ನು ಭೇಟಿ
ಮಾಡಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತಿದ್ದರು ಎಂದು ಅನಂತಕುಮಾರ್‌ ಅವರನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕದ ವಿಶಿಷ್ಟ 63 ದೇವಸ್ಥಾನಗಳ ಮಾಹಿತಿ ಪತ್ರ, 63 ಸಸ್ಯಗಳ ಮಾಹಿತಿ ಪತ್ರ, 6 ಜಿಲ್ಲೆಗಳ ಅಪರೂಪದ ದೇವಾಲಯಗಳ ಕೈಪಿಡಿ ಬಿಡುಗಡೆ, ಅನಂತಪಥ ಮಾಸ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಹಾಗೂ ಟಿ.ಎಸ್‌.ಗೋಪಾಲ್‌, ಸಂಧ್ಯಾ, ಕೆಂಗೇರಿ ಚಕ್ರಪಾಣಿ, ರಶ್ಮಿ ಕಿಲೇಗಾ, ಪೂರ್ಣಪ್ರಜ್ಞಾ, ಅಥರ್ವ ಸೇರಿದಂತೆ ಅನೇಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಪಿ.ವಿ. ಕೃಷ್ಣ ಭಟ್‌, ತೇಜಸ್ವಿನಿ ಅನಂತಕುಮಾರ್‌, ನ್ಯಾ. ಎನ್‌.ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next