Advertisement

ನನ್ನ ಕವಿತೆ-ನನ್ನ ಹಾಡು ಸಾಕ್ಷ್ಯಚಿತ್ರ ಬಿಡುಗಡೆ

11:49 AM Feb 25, 2018 | |

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದಿಂದ “ನನ್ನ ಕವಿತೆ- ನನ್ನ ಹಾಡು’ ಎಂಬ ಕಿರುಸಾಕ್ಷ್ಯಚಿತ್ರಗಳ ಸಂಗ್ರಹ ಬಿಡುಗಡೆಯಾಗುತ್ತಿದೆ. ನಾಲ್ಕು ದಶಕಗಳ ಇತಿಹಾಸವಿರುವ ಲೇಖಕಿಯರ ಸಂಘ ತನ್ನೊಂದಿಗೆ ಹೆಜ್ಜೆ ಹಾಕುತ್ತಿರುವ ಮೂರು ತಲೆಮಾರುಗಳ ಲೇಖಕಿಯರನ್ನು ಒಂದೆಡೆ ಸೇರಿಸಿದ್ದು, ರಾಜ್ಯ ಹಾಗೂ ಹೊರರಾಜ್ಯದಲ್ಲಿರುವ 174 ಕವಯಿತ್ರಿಯರ ಬದುಕು, ಬರಹ ಹಾಗೂ ಕಾವ್ಯಗಳು ಪುಟ್ಟ ವಿಡಿಯೊ ರೂಪದಲ್ಲಿ ದಾಖಲೀಕರಣಗೊಂಡಿವೆ. 

Advertisement

ಈ ಯೋಚನೆಯ ಹಿಂದಿರುವ ಪ್ರೇರಕ ಶಕ್ತಿ, ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಅವರು. ಕವಯಿತ್ರಿಯರ ಮನೆಗೇ, ಅವರ ಪರಿಸರಕ್ಕೇ ಹೋಗಿ ವಿಡಿಯೋಗಳನ್ನು ದಾಖಲಿಸಿದ್ದು, ಎರಡೂವರೆ ವರ್ಷಗಳಿಂದ ಸಾಕ್ಷ್ಯಚಿತ್ರ ಚಿತ್ರೀಕರಣ ನಡೆದಿತ್ತು. ಚೆನ್ನೈ, ಮುಂಬೈ, ಹೈದರಬಾದಿನಲ್ಲಿರುವ ಕನ್ನಡಿಗರನ್ನೂ ಈ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ.

ಪ್ರತಿ ಸಾಕ್ಷ್ಯಚಿತ್ರವೂ 15 ನಿಮಿಷಗಳ ಅವಧಿಯದ್ದಾಗಿದ್ದು, ಪ್ರತಿ ಕವಯಿತ್ರಿಗೆ ಐದು ಕವಿತೆಗಳನ್ನು ಓದುವ ಹಾಗೂ ಸಂಕ್ಷಿಪ್ತವಾಗಿ ತನ್ನ ಪರಿಚಯ ಮಾಡಿಕೊಡುವ ಅವಕಾಶ ನೀಡಲಾಗಿದೆ. ಲೀಲಾದೇವಿ ಆರ್‌ ಪ್ರಸಾದ್‌, ಭಾನುಮುಷ್ತಾಕ್‌, ಸಬಿತಾ ಬನ್ನಾಡಿ, ಮೀನಾಕ್ಷಿ ಬಾಳಿ, ಕವಿತಾ ರೈ, ಎಚ್‌.ಎನ್‌.ಆರತಿ, ಸುನಂದ ಪ್ರಕಾಶ ಕಡಮೆ, ಅಂಜಲಿ ಬೆಳಗಲ್‌ ಮುಂತಾದ ಕವಯತ್ರಿಯರು ಈ ಸಾಕ್ಷ್ಯಚಿತ್ರದ ಭಾಗವಾಗಿದ್ದಾರೆ.

ಸುಮಾರು 26 ಲಕ್ಷ ರೂ.ಗಳ ವೆಚ್ಚದಲ್ಲಿ ಪೂರ್ಣಗೊಂಡಿರುವ ಈ ಸಾಕ್ಷ್ಯಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತವರು ಇತ್ತೀಚೆಗೆ ನಿಧನರಾದ ಡಿ.ಎಸ್‌ ಸುರೇಶ್‌ ಅವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿದ್ಧವಾಗಿರುವ ನನ್ನ ಕವಿತೆ- ನನ್ನ ಹಾಡು ಸಾಕ್ಷ್ಯಚಿತ್ರ  ಫೆ.25ರಂದು (ಇಂದು) ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗಲಿದೆ. ಲೇಖಕಿಯರ ಸಂಘದ ವೆಬ್‌ಸೈಟ್‌ನಲ್ಲಿ ಸಾಕ್ಷ್ಯಚಿತ್ರ ಸಂಗ್ರಹ ಪ್ರಕಟವಾಗಲಿದ್ದು, ಮುಂಬರುವ ದಿನಗಳಲ್ಲಿ ಡಿವಿಡಿ ರೂಪಕ್ಕೆ ತರುವ ಯೋಚನೆಯಿದೆ ಎಂದು ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದ್ದಾರೆ. 

ಬದುಕು ಮತ್ತು ಕಾವ್ಯವನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ. ಒಂದು ಸಂಗತಿ ಮತ್ತು ಸನ್ನಿವೇಶವನ್ನು ನಗರ ಪ್ರದೇಶದ ವ್ಯಕ್ತಿ ಗ್ರಹಿಸುವುದರಲ್ಲೂ, ಒಬ್ಬ ಗ್ರಾಮೀಣ ಪರಿಸರದ ವ್ಯಕ್ತಿ ಗ್ರಹಿಸುವುದರಲ್ಲೂ ವ್ಯತ್ಯಾಸವಿರುತ್ತದೆ. ಒಂದೇ ವಿಷಯವನ್ನು, ಒಂದೇ ಕಾಲದ, ಒಂದೇ ಭಾಷೆಯ ಲೇಖಕಿಯರು ಬರೆದರೂ ಹೇಗೆ ಯೋಚನೆಗಳು ವಿಭಿನ್ನವಾಗಿವೆ ಎಂದು ತೋರಿಸುವುದು ಈ ಸಾಕ್ಷ್ಯಚಿತ್ರ ಸಂಗ್ರಹದ ಉದ್ದೇಶ. ಮೂರು ತಲೆಮಾರಿನ ಲೇಖಕಿಯರನ್ನು ಇದರಲ್ಲಿ ಒಳಗೊಂಡಿದ್ದೇವೆ. ಹಾಗಾಗಿ ಮುಂದಿನ ಪೀಳಿಗೆಗೆ ತಮ್ಮ ಹಿಂದಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದ ಪರಿಚಯ ಮಾಡಿಕೊಡುವ ದಾಖಲೀಕರಣವೂ ಇದಾಗಲಿದೆ. 
-ವಸುಂಧರಾ ಭೂಪತಿ, ಲೇಖಕಿಯರ ಸಂಘದ ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next