ನಿನ್ನನ್ನು “ಏಯ್ ಕೋತಿ’ ಅಂತ ಪ್ರೀತಿಯಿಂದ ಕರೆಯೋಕೆ ಅದೆಷ್ಟು ಇಷ್ಟ ಗೊತ್ತಾ? ಆದರೆ ಎಷ್ಟು ಧಮಾಕು ತೋರಿಸ್ತೀಯ! ನಾನು ನಿನ್ನನ್ನು ದಿನಕ್ಕೆ ನೂರು ಬಾರಿ ತಿರು ತಿರುಗಿ ನೋಡಿದ್ರೂ ನೀನು ಒಮ್ಮೆ ಯೂ ನನ್ನತ್ತ ತಿರುಗಿ ನೋಡಲ್ಲ. ನಾನು ಮಾತಾಡೋಕೆ ಅಂತ ಹತ್ತಿರ ಬಂದ್ರೆ ಯಾವಾಗ್ಲೂ ಬ್ಯುಸಿ ಇರೋವ್ಳ ಹಾಗೆ ಪೋಸ್ ಕೊಡ್ತೀಯಾ! ಎಷ್ಟು ಕೊಬ್ಬು ನಿನ್ಗೆ? ನೀನು ಮಾತಿಗೆ ಸಿಕ್ಕರೆ ಹೀಗೆಲ್ಲಾ ಬೈಬೇಕು ಅಂತಿದ್ದೀನಿ. ಆದರೆ ಮುಖಾಮುಖೀ ಆಗಿಬಿಟ್ಟಾಗ ನಿನ್ನನ್ನು ಬೈಯೋಕೆ ಮನಸ್ಸೇ ಬರಲ್ಲ!
ತಕ್ಷಣ ಒಲವನ್ನೆಲ್ಲ ಕೊರಳಿಗೆ ತುಂಬಿಕೊಂಡು ಪ್ರೀತಿಯಿಂದ ಮಾತನಾಡಿಸಲು ಟ್ರೆ„ ಮಾಡಿದ್ರೆ ನೀನು ಅಫಿಷಿಯಲ್ ಥರಾ ಮಾತಾಡ್ತೀಯ! ನಿನ್ನ ಬರ್ತ್‌ಡೇಗೆ ನಾನು ಕೊಟ್ಟ ಕೆಂಪು ಗುಲಾಬಿ ಬರೀ ಬರ್ತ್‌ಡೇ ಗಿಫ್ಟ್ ಅಂದುಕೊಂಡೆಯಾ? ಅದು ನನ್ನ ಪ್ರೇಮದ ಕಾಣಿಕೆಯೂ ಹೌದು. ಇದೆಲ್ಲಾ ನಿಂಗೆ ಅರ್ಥವಾಗುತ್ತಾ? ದಿನಾ ಗಂಭೀರವಾಗಿ ಕಾಲೇಜಿಗೆ ಬರುವ ನಿನಗೆ ನನ್ನ ಪ್ರೇಮ ಎಲ್ಲಿ ಗೊತ್ತಾಗುತ್ತೆ ಬಿಡು. ಅಂದೊಮ್ಮೆ ನಾವು ಪಿಕ್‌ನಿಕ್‌ಗೆ ಹೋದಾಗ ನೀನು ನಮಗೆಲ್ಲರಿಗೂ ಡೈರಿ ಮಿಲ್ಕ್ ಚಾಕ್‌ಲೇಟ್ ಕೊಟ್ಟಿದ್ದೆ.
ನೀನು ಕೊಟ್ಟ ಚಾಕ್‌ಲೇಟ್‌ನ ರ್ಯಾಪರ್‌ನ್ನು ಇನ್ನೂ ನಾನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ನಾನು ಕಾಲೇಜಿಗೆ ಸೇರಿದ ದಿನ ನಿನ್ನನ್ನು ನೋಡಿದಾಗ ಒಂದು ಪುಟ್ಟ ಸ್ಮೈಲ್ ಕೊಡಲಿಕ್ಕೂ ನೀನು ಹಿಂಜರೀತಿದ್ದೆ. ಒಮ್ಮೆ ಖುಷಿಯಿಂದ ನಗೋದಕ್ಕೂ ಕಂಜೂಸ್‌ತನ ಮಾಡುವ ಹುಡುಗಿ ಯಾರಿವಳು? ಅಂತಾ ನಿನ್ನ ಬಗ್ಗೆ ಕುತೂಹಲ ಪಟ್ಟಿದ್ದೆ. ಮೊದಲು, ನಿನ್ನ ಗಂಭೀರ ಲುಕ್ ನೋಡಿದ್ರೆ ಇವಳಿಗೆಷ್ಟು ಕೊಬ್ಬು ಅಂತಾ ಮನಸಲ್ಲೇ ಬೈಯ್ದುಕೊಳ್ತಿದ್ದೆ.
ಆಮೇಲೆ ನಿನ್ನ ನಡೆ, ನುಡಿ, ವಿನಯ, ಓದು ಸ್ನೇಹಿತರೊಡನೆ ಬೆರೆಯುವ ಗುಣ ಎಲ್ಲವನ್ನೂ ನೋಡಿ ನಿನ್ನ ಅಭಿಮಾನಿಯಾಗಿ ಬಿಟ್ಟೆ. ಆನಂತರದಲ್ಲಿ ನಿನಗೆ ಹತ್ತಿರವಾಗುವ, ನಿನ್ನ ಮನಸ್ಸು ಗೆಲ್ಲುವ ಚಿಕ್ಕ ಅವಕಾಶವನ್ನೂ ನಾನು ಕಳೆದುಕೊಂಡಿಲ್ಲ. ಆದರೆ, ನಾನು ನಿನಗೆ ಇಷ್ಟ ಆಗಿದೀನಾ? ಗೊತ್ತಿಲ್ಲ. ಈಗಾಗ್ಲೆà ನಿನ್ನ ಮನಸೊಳಗೆ ಬೇರೊಬ್ರು ಜಾಗ ಮಾಡಿಕೊಂಡಿದಾರಾ? (ದೇವರೇ, ಇದೊಂದು ಮಾತ್ರ ಆಗದಿರಲಿ!) ಉತ್ತರ ಸಿಕ್ಕಿಲ್ಲ.
ನಾನು ಪ್ರೀತಿಸ್ತಿದೀನಿ ಅನ್ನೋದಾದ್ರೂ ನಿನಗೆ ಈಗಾಗ್ಲೆ ಗೊತ್ತಾಗಿದೆಯಾ? ಈ ಕುರಿತೂ ನೀನು ಸುಳಿವು ಬಿಟ್ಟು ಕೊಡ್ತಾ ಇಲ್ಲ. ಇಷ್ಟೆಲ್ಲಾ ಆದಮೇಲೂ ನಿನ್ನ ಮೇಲಿನ ಆಕರ್ಷಣೆ ಕಮ್ಮಿ ಆಗಿಲ್ಲ ನನಗೆ. ತಿಳಿ ನೀಲಿ ನಿನ್ನ ಫೇವರಿಟ್ ಕಲರ್ ಅಂತಾ ನಂಗೊತ್ತು. ಅದಕ್ಕಾಗಿಯೇ ನಾನು ಪ್ರಾಕ್ಟಿಕಲ್ಸ್ ಇರುವ ದಿನ ಅದೇ ಕಲರ್‌ನ ಡ್ರೆಸ್ ಹಾಕಿಕೊಂಡು ಬರ್ತಿದ್ದೆ. ಗಮನಿಸಿಲ್ವಾ? ಇನ್ನಾದ್ರೂ ಅರ್ಥ ಮಾಡಿಕೋ, ನಾನು ನಿನ್ನನ್ನು ಅದೆಷ್ಟು ಪ್ರೀತಿ ಮಾಡ್ತಿದ್ದೇನೆ ಅಂತಾ. ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ನಿನಗೇ ತಿಳಿಯುತ್ತದೆ.
ನಿನ್ನ ಒಪ್ಪಿಗೆಗಾಗಿ ಕಾಯುತ್ತಿರುವ
ಲಕ್ಷ್ಮೀಕಾಂತ್ ಎಲ್.ವಿ