Advertisement

ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನನ್ನ ಕೊಡುಗೆಯೂ ಅಪಾರ: ಜಿಗಜಿಣಗಿ

05:49 PM Feb 06, 2023 | Team Udayavani |

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಬೆಳೆಸಲು ಯಡಿಯೂರಪ್ಪ, ಅನಂತ್ ಕುಮಾರ, ಸದಾನಂದ ಗೌಡ ಚಪ್ಪಲಿ ಹರಿಯುವಂತೆ ತಿರುಗಿದರೂ ಪಕ್ಷವನ್ನು ಅಧಿಕಾರ ತರಲು ಸಾಧ್ಯವಾಗಲಿಲ್ಲ. ನಾನು ಬಿಜೆಪಿ ಸೇರಿದ ಮೇಲೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಕೊಡುಗೆಯೂ ಇದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪಕ್ಷದಲ್ಲಿರುವ ತಮ್ಮ ವಿರೋಧಿ ಪಾಳೆಯಕ್ಕೆ ತಿರುಗೇಟು ನೀಡಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಅವರ ನಿಧನಾ ನಂತರ ನಾನು ದೇವೇಗೌಡರೊಂದಿಗೆ ಜೆಡಿಎಸ್ ಸೇರಿದ್ದರೆ ಬಿಜೆಪಿ ಪಕ್ಷದ ಬಲವರ್ಧನೆ ಹಾಗೂ ಅಧಿಕಾರಕ್ಕೆ ಬರುವುದು ಅಸಾಧ್ಯವಾಗಿತ್ತು. ಹೀಗಾಗಿ ಚೋಟೆ, ಮೋಟೆ ಲೀಡರ್ ಗಳು ಬಿಜೆಪಿ ಪಕ್ಷದ ಬಲವರ್ಧನೆಗೆ ಜಿಗಜಿಣಗಿ ಕೊಡುಗೆ ಏನು ಎಂದು ತಿಳಿದುಕೊಳ್ಳಲಿ ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿ ಪಕ್ಷಕ್ಕೆ ನನ್ನ ಕೊಡುಗೆ ಏನೆಂದು ಎರಡನೇ ಹಂತದ ನಾಯಕರು ಪ್ರಶ್ನೆ ಮಾಡುತ್ತಾರೆ. ಹೆಗಡೆ ಅವರ ನಿಧನಾನಂತರ 2004 ರಲ್ಲಿ ಬಿಜೆಪಿ ಸೇರಿದ ಜನತಾ ಪರಿವಾರದ ಮೊದಲ ವ್ಯಕ್ತಿ ನಾನೇ. ನನ್ನ ನಂತರ ಜನತಾ ಪರಿವಾರದ ಹಲವು ನಾಯಕರು ಬಿಜೆಪಿ ಸೇರಿದ್ದರಿಂದ ಪಕ್ಷದ ಬಲವರ್ಧನೆ ಆಯ್ತು. ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರಿ ಆಯ್ತು. ಇದನ್ನೆಲ್ಲಾ ಮರೆತಿದ್ದಾರೆ ಎಂದು ಸ್ವಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡುವ ವಿರೋಧಿಗಳಿಗೆ ತಿರುಗೇಟು ನೀಡಿದರು.

ಬಿಜೆಪಿ ಬಲವರ್ಧನೆಗೆ ನನ್ನ ಕೊಡುಗೆ ಏನು ಎಂದು ಪಕ್ಷದ ದೊಡ್ಡ ನಾಯಕರಿಗೆ ಗೊತ್ತಿದೆ. ಛಿದ್ರವಾಗಿದ್ದ ಜನತಾ ಪರಿವಾರ ಒಂದಾಗಿದ್ದರೆ ರಾಜ್ಯದಲ್ಲಿ ಎಂದಿಗೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಕಾಂಗ್ರೆಸ್,‌ ಮತ್ತೊಮ್ಮೆ ಜನತಾ ಪರಿವಾರದ ಸರ್ಕಾರಗಳೇ ಅಧಿಕಾರ ನಡೆಸುತ್ತಾ ಹೋಗುತ್ತಿದ್ದವು ಎಂದು ವಿರೋಧಿಗಳಿಗೆ ಖಡಕ್ ರೀತಿಯಲ್ಲೇ ಉತ್ತರಿಸಿದ್ದಾರೆ.

ನಾನು ಬಿಜೆಪಿ ಸೇರಿದಾಗ ದಲಿತರು ಸೇರಿದಂತೆ ಎಲ್ಲರೂ ನನ್ನ ನಡೆಯನ್ನು ವಿರೋಧಿಸಿದ್ದರು. ಆಗ ಬಿಜೆಪಿ ಪಕ್ಷದಲ್ಲೇ ಎಲ್ಲರೂ ಜನತಾ ಪರಿವಾರದ ವ್ಯಕ್ತಿ ಎಂದೇ ನನ್ನತ್ತ ನೋಡುತ್ತಿದ್ದರು. ನಾನು ಬಿಜೆಪಿ ಸೇರುವ ಮುನ್ನ ಇತರೆ ಪಕ್ಷದ ಯಾರೂ ಬಿಜೆಪಿ ಸೇರ್ಪಡೆ ಆಗಿರಲಿಲ್ಲ. ನಾನು ಬಿಜೆಪಿ ಸೇರಿದ ಬಳಿಕ ಜನತಾ ಪರಿವಾರದ ಹಲವು ನಾಯಕರು ಬಿಜೆಪಿ ಸೇರ್ಪಡೆಯಾದರು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ನಾಯಕರು ಬಿಜೆಪಿ ಸೇರಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆ ಹಾಗೂ ಅಧಿಕಾರ ಹಿಡಿಯಲು ಸಾಧ್ಯವಾಯ್ತು. ಇದು ನನ್ನ ಕೊಡುಗೆ ಅಲ್ಲವೇ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ:ಭಾರತದಲ್ಲಿ ಗೆಲ್ಲಬೇಕಾದರೆ…; ಉಪಯುಕ್ತ ಸಲಹೆ ನೀಡಿದ ಮಿಚೆಲ್ ಜಾನ್ಸನ್

ನಾನು ಜನತಾ ಪರಿವಾರ ಬಿಟ್ಟು ಬಿಜೆಪಿ ಸೇರ್ಪಡೆ ಆಗದಿದ್ದರೆ ಬಿಜೆಪಿ ಎಂದೂ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಅನಂತಕುಮಾರ ಬದುಕಿದ್ದಾಗಲೇ ಯಡಿಯೂರಪ್ಪ, ಅನಂತಕುಮಾರ, ಸದಾನಂದಗೌಡ ಎಲ್ಲರ ಎದುರೇ ಜನತಾ ಪರಿವಾರದ ನಮ್ಮ ಸೇರ್ಪಡೆಯಿಂದ ಅಧಿಕಾರಕ್ಕೆ ಬಂದುದನ್ನು ಮರೆತು ಬಿಟ್ಟಿರಾ ಎಂದು ಕೇಳಿದ್ದೆ. ನೀನು ಹೇಳುವುದು ನಿಜವಿದೆ, ನೀನು, ನಿನ್ನ ನಂತರ ಜನತಾ ಪರಿವಾರದ ನಾಯಕರು ಬಿಜೆಪಿ ಸೇರ್ಪಡೆ ಆಗದಿದ್ದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು ಎಂದು ಹಳೆಯದನ್ನು ಕೆದಕಿ ಹೇಳಿದರು.

ಹೀಗಾಗಿ ನಾನೇನು, ಪಕ್ಷಕ್ಕೆ ನನ್ನ ಕೊಡುಗೆ ಏನು ಎಂಬುದು ಪಕ್ಷದ ಹಿರಿಯ ನಾಯಕರಿಗೆ ಗೊತ್ತಿದೆ. ಪಕ್ಷದ ನಿಲುವು, ನಾಯಕತ್ವದ ಬಗ್ಗೆ ನಾನೆಂದೂ ಆಕ್ಷೇಪ ಎತ್ತಿಲ್ಲ, ಒಂದೇ ಒಂದು ಬಾರಿ ಕೆಟ್ಟದಾಗಿ ಮಾತನಾಡಿಲ್ಲ ಎಂದು ತಮ್ಮ ಪಕ್ಷನಿಷ್ಟೆಯನ್ನು ಸಮರ್ಥಿಸಿದರು.

ಪಕ್ಷದ ವರಿಷ್ಠರು ಬಯಸಿದರೆ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧನಿದ್ದೇನೆ ಎಂದು ಪುನರುಚ್ಛರಿಸಿದ ಸಂಸದ ಜಿಗಜಿಣಗಿ, 2023 ರ ವಿಧಾನಸಭೆ ಚುನಾವಣೆ ಬಗ್ಗೆ ಈಗಲೇ ಏನನ್ನೂ ಮಾತನಾಡಲ್ಲ. ಏನಾಗಲಿದೆ ಎಂಬುದು ನನ್ನ ಅಂತರಾತ್ಮಕ್ಕೆ ಗೊತ್ತಿದೆ. ನಾನು ಅಂದುಕೊಂಡಂತೆಯೇ ಆಗಲಿದೆ ಎಂದೂ ಭವಿಷ್ಯ ನುಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next