ಬನಹಟ್ಟಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ, ಅದರಲ್ಲೂ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ನಡೆದಿದ್ದ ಊಹಾಪೋಹಗಳಿಗೆ ಜಿಲ್ಲಾ ನೇಕಾರರ ಸಭೆಯಲ್ಲಿ ಸ್ಪಷ್ಟನೆ ದೊರೆತಂತಾಗಿದ್ದು, ಶಿಕಾರಿಪುರದಲ್ಲೇ ಸ್ಪರ್ಧಿಸುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ನಗರದ ಎಸ್‌ಆರ್‌ಎ ಮೈದಾನದಲ್ಲಿ ನಡೆದ ಜಿಲ್ಲಾ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಅವರು, “ನಿರೀಕ್ಷೆಗೂ ಮೀರಿ ಜನಸ್ತೋಮ ಜಮಾವಣೆಯಾಗಿದೆ. ಸಿದ್ದು ಸವದಿಯವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಿ ಕೊಟ್ಟು ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ. ನಾನೇ ಈ ಕ್ಷೇತ್ರದ ಪ್ರತಿನಿಧಿ ಯೆಂದು ಈ ಕ್ಷೇತ್ರದಲ್ಲಿ ಏನೇನು ಕೆಲಸಗಳು ಆಗಬೇಕಾಗಿದೆಯೋ ಅದನ್ನೆಲ್ಲಾ ಮಾಡಿಕೊಡುತ್ತೇನೆ. ಅಲ್ಲದೆ, ಶಿಕಾರಿಪುರಕ್ಕೆ ಎಷ್ಟು ಆದ್ಯತೆ ಕೊಡುತ್ತೇನೆಯೋ ಅದಕ್ಕಿಂತಲೂ ಹೆಚ್ಚು ಆದ್ಯತೆ ಕೊಡುತ್ತೇನೆಂದು ಪ್ರಮಾಣ ಮಾಡುತ್ತೇನೆ’ ಎಂದು ತೇರದಾಳ ಮತ ಕ್ಷೇತ್ರದಲ್ಲಿ ಸ್ಪ ರ್ಧಿಸುವ ವಿಚಾರಕ್ಕೆ ಬಿಎಸ್‌ವೈ ಇತಿಶ್ರೀ ಹಾಡಿದರು.
“ನಾವು ಅ ಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ನೇಕಾರರ ಸಾಲ ಮನ್ನಾ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನೇಕಾರರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಪಡಿಸುವಲ್ಲಿ ಬಿಜೆಪಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮೊದಲ ಬಜೆಟ್‌ನಲ್ಲೇ ರಾಜ್ಯದ ನೇಕಾರರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸುತ್ತೇವೆ. ಅಲ್ಲದೆ, ನೇಕಾರರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ’ ಎಂದು ಭರವಸೆ ನೀಡಿದರು. 1970ರಲ್ಲಿ ಜನಸಂಘ, ಬನಹಟ್ಟಿಯಲ್ಲಿ ಪ್ರಥಮ ವಾಗಿ ನೇಕಾರ ಸಮಾವೇಶ ಆಯೋಜಿಸಿತ್ತು. ಬಳಿಕ 1988ರಲ್ಲಿ ನಾನು, ಕೇಂದ್ರ ಸಚಿವ ಅನಂತಕುಮಾರ ಜೊತೆಗೆ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಜರುಗಿದ ನೇಕಾರ ಸಮಾವೇಶದಲ್ಲಿ ಭಾಗಿಯಾಗಿದ್ದೆ ಎಂದು ಯಡಿಯೂರಪ್ಪ ಸ್ಮರಿಸಿದರು.
ವಿಪಕ್ಷ ನಾಯಕ ಈಶ್ವರಪ್ಪ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದರಾದ ಶೋಭಾ ಕರಂದ್ಲಾಜೆ, ಬಿ.ಶ್ರೀರಾಮುಲು, ಪಿ.ಸಿ. ಗದ್ದಿಗೌಡರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಮಾಜಿ ಶಾಸಕರಾದ ಸಿದ್ದು ಸವದಿ ಇತರ ನಾಯಕರು ಉಪಸ್ಥಿತರಿದ್ದರು.
ಬಿಜೆಪಿಗೆ ಸೇರ್ಪಡೆ: ಇದೇ ವೇಳೆ, ಪ್ರಭಾವಿ ನಾಯಕರಾದ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ವಗ್ಗ, ಮಹಾಲಿಂಗಪುರದ ಮಹಾ ಲಿಂಗಪ್ಪ ಕೋಳಿಗುಡ್ಡ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಜನ ಕಾರ್ಯ ಕರ್ತರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು.
2013ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಪರಮೇಶ್ವರ್ ಸೋಲಿಗೆ ನಾನು ಕಾರಣ ಅಲ್ಲ ಎಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೇಲೆ ಆಣೆ ಮಾಡಿ ಹೇಳಲಿ.
●ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ