Advertisement
ವೈಶಿಷ್ಟ್ಯಪೂರ್ಣ ಹಾಸ್ಯಬರಹಗಳಿಗೆ ಮತ್ತೂಂದು ಹೆಸರು ಬೀಚಿ. ಗೊಡ್ಡು ಸಂಪ್ರ ದಾಯಕ್ಕೆ ಸಡ್ಡು ಹೊಡೆದು, ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿ ತಮ್ಮದೇ ಆದ ಅಪರೂಪದ ಶೈಲಿಯನ್ನು ಸಾಧಿಸಿಕೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದವರು.
Related Articles
Advertisement
ಬೀಚಿಯವರ ಕೃತಿಗಳಲ್ಲೇ ಈ ಆತ್ಮಕಥೆ ವಿಶೇಷವಾದದ್ದು. ತನ್ನ ಬಾಲ್ಯದ ದಿನಗಳು, ನೋವುನಲಿವು, ಕಲಿಕೆ, ಹೆತ್ತವರ ಬಗ್ಗೆ, ಮದುವೆ, ಕೆಲಸ, ಕನ್ನಡ ಸಾಹಿತ್ಯ ಲೋಕದ ಒಡನಾಟ, ಬರಹ, ನಾಟಕ, ಭಾಷಣ, ಓಡಾಟ, ಪುಸ್ತಕಗಳ ಒಲವು, ಮನೆ ಕಟ್ಟಿಸಿದ ಕಥೆ ಹೀಗೆ ಹಲವಾರು ಘಟನಾವಳಿಗಳನ್ನು ಈ ಕೃತಿಯಲ್ಲಿ ಪಡಿಮೂಡಿಸಿದ್ದಾರೆ.
ಪ್ರತೀ ಅಧ್ಯಾಯದಲ್ಲೂ ಬೀಚಿಯವರ ಮಾತು, ವಿಚಾರಗಳು, ಬದುಕಿನ ಕುರಿತ ಅವರ ದೃಷ್ಟಿಕೋನ, ಜನರ ಜತೆಗಿನ ಒಡನಾಟ, ಹಾಸ್ಯಪ್ರಜ್ಞೆ, ವಿಶಾಲ ಮನೋ ಭಾವ ಮುಂತಾದವುಗಳನ್ನು ಕಾಣಬಹುದು. ಓದುತ್ತಾ ಹೋದಂತೆ ಬೀಚಿಯ ಜೀವನದನುಭವಕ್ಕೆ ನಾವು ಸಾಕ್ಷಿಯಾಗುವಂಥ ಆಪ್ತಭಾವ ಮೂಡುತ್ತದೆ.
ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ದಿನಗಳು, ಭಾಷಣಕ್ಕಾಗಿ ಊರೂರು ತಿರುಗಿದ್ದು, ಸ್ನೇಹಿತರೊಂದಿಗಿನ ಹಾಸ್ಯ ಪ್ರಸಂಗಗಳು, ಸಾಹಿತ್ಯ ಪ್ರೇರಣೆ ನೀಡಿದ ಪುಸ್ತಕಗಳು, ಬಾಲ್ಯದ ಜೀವನ ಪಾಠ, ಆಸರೆಯಾದ ಅಣ್ಣ, ಬಾಲ್ಯದಲ್ಲಿ ಸಲಹಿದ ಅತ್ತೆ, ಪತ್ನಿ ಮಕ್ಕಳೊಂದಿಗಿನ ಜೀವನ, ಹಿರಿಯ ಪುತ್ರನ ಮದುವೆ ನಿಶ್ಚಯವಾದ ಕೆಲವೇ ದಿನಗಳಲ್ಲಿ ಎದುರಾದ ಕಿರಿಯ ಮಗನ ಸಾವು ಮುಂತಾದವು ಗಳಲ್ಲೆಲ್ಲ ಬೀಚಿಯವರನ್ನು ಅರಿಯುತ್ತಾ ಹೋದಂತೆ ನಮಗೆ ಬೆರಗಾಗುತ್ತದೆ. ಹಾಸ್ಯ ಲೇಖಕನ ಬಾಳಿನ ನೋವು ಮನಸ್ಸನ್ನು ಕರಗಿಸುತ್ತದೆ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಸಾಮಾನ್ಯವಾಗಿ ಆತ್ಮಕಥೆಯಲ್ಲಿ ಸ್ವಪ್ರತಿಷ್ಠೆ, ಹಿರಿಮೆ-ಗರಿಮೆ, ಕೀರ್ತಿ, ಸೋಗುತನ ಮುಂತಾದವೇ ರಾರಾಜಿಸುತ್ತಿರುತ್ತವೆ. ಕೆಲವು ಆತ್ಮಕಥನಗಳು ಇವುಗಳಿಂದ ದೂರವಾಗಿ ಭಿನ್ನ ಅನುಭವವನ್ನು ನೀಡುತ್ತವೆ. ಅವುಗಳ ಸಾಲಿಗೆ “ನನ್ನ ಭಯಾಗ್ರಫಿ’ ಸೇರುತ್ತದೆ.
ಬೀಚಿ ಅವರು ಇಲ್ಲಿ ನಿಷ್ಪಕ್ಷಪಾತವಾಗಿ ತಾವೇ ತಮ್ಮ ಜೀವನವನ್ನು ವಿಮರ್ಶಾ ದೃಷ್ಟಿಯಿಂದ ನೋಡಿ ಬರಹದ ಮೂಲಕ ತಮ್ಮ ಬದುಕನ್ನು ಸಾರ್ವತ್ರಿಕಗೊಳಿಸಿ¨ªಾರೆ.ಯಾವುದೇ ಹಮ್ಮುಬಿಮ್ಮಿನ ಪೇಟ ತೊಡದೆ ಸತ್ಯದ ಕೈಹಿಡಿದು ಜೀವನ ದರ್ಶನ ಮಾಡಿಸಿದ್ದಾರೆ. ಆ ಸತ್ಯದರ್ಶನದ ಭರದಲ್ಲಿ ತನ್ನ ಜೀವನದಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಗೆ ವೃಥಾ ನೋವುಂಟಾಗಬಾರದೆಂಬ ಎಚ್ಚರವೂ ಅವರಲ್ಲಿದೆ. ಇದು ಸಾಮಾನ್ಯದ ವಿಷಯವಲ್ಲ. ಹಾಗಾಗಿ ಬೀಚಿಯವರ “ನನ್ನ ಭಯಾಗ್ರಫಿ’ ಒಂದು ಅನನ್ಯ ಕೃತಿಯಾಗಿದೆ. ವಿ. ಪುನೀತ್ ಕುಮಾರ್, ಬೆಂಗಳೂರು