Advertisement

ಕರಾವಳಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಜತೆಗಿನ “ಮೈ ಭಿ ಚೌಕೀದಾರ್‌’ಸಂವಾದ ವೀಕ್ಷಣೆ

02:46 PM Apr 02, 2019 | Team Udayavani |

ಮಂಗಳೂರು/ ಉಡುಪಿ: ದೇಶದ ನೆಲ, ಜಲ, ಸಂಪತ್ತಿನ ಚೌಕಿದಾರನಾಗಿ ಕಾರ್ಯನಿರ್ವಹಿಸಿ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿರುವ ಪ್ರಧಾನಿ ಮೋದಿ ಅವರನ್ನು ದೇಶದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಬೂತ್‌ ಮಟ್ಟದಲ್ಲಿ ಚೌಕಿದಾರನಾಗಿ ಬೆಂಬಲಿಸಬೇಕು ಎಂದು ಶಾಸಕ ಮತ್ತು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣ ಉಸ್ತುವಾರಿ ಸುನಿಲ್‌ ಕುಮಾರ್‌ ಹೇಳಿದರು.

Advertisement

ಮೈ ಭಿ ಚೌಕೀದಾರ್‌ ಪರಿಕಲ್ಪನೆಯಡಿ ಪ್ರಧಾನಿ ಮೋದಿ ಅವರು ರವಿವಾರ ನಡೆಸಿದ ರಾಷ್ಟ್ರಮಟ್ಟದ ನೇರ ಸಂವಾದದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಗರದ ಬಿಜೆಪಿ ಜಿಲ್ಲಾ ಚುನಾವಣ ಪ್ರಚಾರ ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿಯವರು ದೇಶದ ಆಡಳಿತ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಿ ಅಭಿವೃದ್ಧಿ ಹೊಸ ಶಕೆಯೊಂದನ್ನು ತೆರೆದಿದ್ದಾರೆ. ಅವರ ನವಭಾರತ ನಿರ್ಮಾಣದ ಗುರಿಯನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತ ಕೂಡ ಚೌಕಿದಾರನಾಗಿ ಕೆಲಸ ಮಾಡುತ್ತೇನೆ ಎಂಬ ಸಂಕಲ್ಪ ಮಾಡಬೇಕು ಎಂದರು.

ಮೋದಿಯವರು ಮತ್ತೂಮ್ಮೆ ದೇಶದ ಪ್ರಧಾನಿಯಾಗುವ ನಿಟ್ಟಿನಲ್ಲಿ ಮತ್ತು 10 ವರ್ಷಗಳಲ್ಲಿ ಸಂಸದನಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸಿ, ಕ್ಷೇತ್ರದ ಚೌಕಿದಾರನಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಆಯ್ಕೆಯಾಗುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದವರು ಹೇಳಿದರು.

ಬಿಜೆಪಿ ಕಚೇರಿ ಆವರಣದಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಿ ಮೋದಿಯವರ ನೇರ ಸಂವಾದವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರು ಚೌಕಿದಾರ್‌ ಪೇಟಾ ಧರಿಸಿ ಗಮನ ಸೆಳೆದರು. ಶಾಸಕ ವೇದವ್ಯಾಸ ಕಾಮತ್‌ ಸ್ವಾಗತಿಸಿದರು. ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಬಿಜೆಪಿ ಪ್ರಭಾರಿಗಳಾದ ಗೋಪಾಲಕೃಷ್ಣ ಹೇರಳೆ, ಪ್ರತಾಪಸಿಂಹ ನಾಯಕ್‌, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್‌ ಎಂ., ಕ್ಯಾ| ಬೃಜೇಶ್‌ ಚೌಟ ಉಪಸ್ಥಿತರಿದ್ದರು.

“ಮೋದಿ ದೇಶದ ಚೌಕೀದಾರನೆನ್ನುವುದು ಹೆಮ್ಮೆ’
ಉಡುಪಿ: ಪ್ರಧಾನಿ ಮೋದಿ ದೇಶದ ಚೌಕಿದಾರನಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎಂದು ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಪ್ರಧಾನಿಯೊಂದಿಗೆ ರಾಷ್ಟ್ರ ಮಟ್ಟದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುದ್ರಾ, ಉಜ್ವಲದಂತಹ ಅನೇಕಾನೇಕ ಯೋಜನೆಗಳ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಮೋದಿ ನಮಗೆಲ್ಲ ಆದರ್ಶಪ್ರಾಯರು ಎಂದರು. ಕೋಮು, ಜಾತಿ, ಮಾವೋವಾದಗಳಂತಹ ಸಿದ್ಧಾಂತಗಳ ಹೆಸರಿ ನಲ್ಲಿ ಒಡೆಯುತ್ತಿರುವ ಸಮಾಜವನ್ನು ಒಂದುಗೂಡಿಸಲು ನಾವು ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಶಾಸಕ ಕೆ. ರಘುಪತಿ ಭಟ್‌ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ ನಗರ ಬಿಜೆಪಿ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ಜನರ ಹರ್ಷೋದ್ಗಾರ
ಉಡುಪಿಯಲ್ಲಿ ಭುಜಂಗ ಪಾರ್ಕ್‌ ಕಾವಲುಗಾರ ಮಂಜು ಅವರು ವೇದಿಕೆಯನ್ನು ಹಂಚಿಕೊಂಡಿದ್ದರು. ಮೋದಿಯವರ ಭಾಷಣದುದ್ದಕ್ಕೂ ನೆರೆದ ಜನರು “ಮೋದಿ ಮೋದಿ’ ಇತ್ಯಾದಿ ಘೋಷಣೆಗಳೊಂದಿಗೆ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿನವರೊಂದಿಗೆ ಸಂವಾದ ನಡೆಸುವಾಗ ಉಡುಪಿಯಲ್ಲಿಯೂ ಜನರು ಸಂತಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next