ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ರಾಷ್ಟ್ರೀಯ ನಾಯಕರು, ಸಿನಿಮಾ ಸ್ಟಾರ್‌ಗಳನ್ನು ತಮ್ಮ ಕ್ಷೇತ್ರಗಳಿಗೆ ಕರೆ ತರುತ್ತಿದ್ದಾರೆ. ಆದರೆ, ಬೆಂಗಳೂರು ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ. ವಿನಯ್ ಸೂರ್ಯ ಮಣಿವನ್ ತಮ್ಮ ಚುನಾವಣೆಯ ಸ್ಟಾರ್ ಪ್ರಚಾರಕಿಯಾಗಿ ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಅವರನ್ನು ಕರೆತಂದಿದ್ದಾರೆ.
ತಮಿಳರು ನಿರ್ಣಾಯಕ ಪಾತ್ರ ವಹಿಸುವಷ್ಟು ಮತದಾರರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿದ್ದಾರೆ. ಅವರನ್ನು ಸೆಳೆಯಲು ಪಕ್ಷೇತರ ಅಭ್ಯರ್ಥಿ ಡಾ.ಮಣಿವನ್ ಮಾಡಿಕೊಂಡ ಪ್ಲಾನ್ ಇದು. ಭಾನುವಾರದಿಂದ ಮುತ್ತುಲಕ್ಷ್ಮೀ ವೀರಪ್ಪನ್ ಪ್ರಚಾರಕ್ಕೂ ಧುಮುಕಲಿದ್ದಾರೆ. ಅಲ್ಲಿರುವ ತಮಿಳು ಬಾಂಧವರ ಮನವೊಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರ ಗಮನಸೆಳೆಯಲಿದೆ.
ಪ್ರಚಾರದ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,”ಇಲ್ಲಿ ಕಾವೇರಿ ಗಲಭೆಗಳು ನಡೆಯದ ರೀತಿಯಲ್ಲಿ ಮುಂಜಾಗ್ರತೆ ವಹಿಸುವ ಸಾಧ್ಯತೆ ಇದ್ದರೂ ಕೆಲವರು ತಡೆಯುತ್ತಿಲ್ಲ. ಇಲ್ಲಿನ ಹಲವು ತಮಿಳರು ಮತ್ತು ಹಿಂದುಳಿದ ಬೆಂಗಳೂರಿನ ಕನ್ನಡಿಗರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೂರ್ಯ ಮಣಿವನ್ ಅವರು ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಇವರು ಗೆಲುವು ಸಾಧಿಸಿದರೆ ಉತ್ತಮ ಸಾಮಾಜಿಕ ಕಾರ್ಯ ಮಾಡಲಿದ್ದಾರೆ. ಹೀಗಾಗಿ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ದೌರ್ಜನ್ಯವೇ ಅಸ್ತ್ರ ಆಗಿತ್ತು!: ಕಾಡುಗಳ್ಳ ವೀರಪ್ಪನ್‌ನನ್ನು ವಶಪಡಿಸಿಕೊಳ್ಳಲು ಬಂದ ಪೊಲೀಸರು, ವೀರಪ್ಪನ್ ನೆಲೆಸಿದ್ದ ಸುತ್ತಲಿನ ಪ್ರದೇಶಗಳ ಜನರ ಮೇಲೆ ದೌರ್ಜನ್ಯ ಮಾಡಿದ್ದರು. ವೀರಪ್ಪನ್ ಎಲ್ಲಿದ್ದಾರೆ ಎಂದು ತಿಳಿಯಲು ಹಿಂಸೆ ನೀಡಿದ್ದರು ಎನ್ನಲಾಗಿದೆ . ಇದರ ವಿರುದ್ಧ ದನಿ ಎತ್ತುವುದಾಗಿ ಹೇಳಿದ್ದಕ್ಕೆ 2006ರಲ್ಲಿ ತಮಿಳುನಾಡಿನ ಪೆನ್ನಾಗರಂ ವಿಧಾನಸಭಾ ಕ್ಷೇತ್ರದ ಜನ ಬೆಂಬಲಿಸಿದ್ದರು ಎಂದು ಮುತ್ತುಲಕ್ಷ್ಮೀ ಮೆಲುಕು ಹಾಕಿದರು.
ಡಾ.ಮಣಿವನ್ ಅವರ ಋಣ ನನ್ನಮೇಲಿದೆ. ಕೆಲವು ರಾಜಕಾರಣಿಗಳು ನನ್ನನ್ನು ಜೈಲು ಸೇರುವಂತೆ ಮಾಡಿದರು. 2006ರಲ್ಲಿ ನಾನು ಮೈಸೂರು ಜೈಲಿನಲ್ಲಿದ್ದೆ. ಆ ಸಂದರ್ಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ಡಾ.ವಿನಯ್ ಸೂರ್ಯ ಮಣಿವನ್ ಅವರ ಸಹಾಯದಿಂದ ನಾನು ಜೈಲಿನಿಂದ ಬಿಡುಗಡೆಯಾದೆ.
-ಮುತ್ತುಲಕ್ಷ್ಮಿ, ಕಾಡುಗಳ್ಳ ವೀರಪ್ಪನ್ ಪತ್ನಿ
2006ರರಲ್ಲಿ ಪೆನ್ನಾಗರಂನಲ್ಲಿ ಮುತ್ತುಲಕ್ಷ್ಮೀ ಚುನಾವಣೆಗೆ ನಿಂತಾಗ ಎರಡನೇ ಸ್ಥಾನದಲ್ಲಿದ್ದರು. ಇದು ತಮಿಳರು ಅವರ ಮೇಲಿಟ್ಟ ನಂಬಿಕೆಗೆ ಸಾಕ್ಷಿ. ತಮಿಳುನಾಡಿನಿಂದ ಬಂದು ನೆಲೆಸಿದ ಬಹುತೇಕರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿದ್ದಾರೆ. ಅಂದಾಜು ಶೇ.48ರಷ್ಟು ಜನ ತಮಿಳಿನವರೇ ಇದ್ದಾರೆ. ಅವರ ಕಷ್ಟಕ್ಕೆ ನಾವಾಗಿದ್ದೇವೆ. ನಮ್ಮ ಕಷ್ಟಕ್ಕೆ ಅವರು ಆಗಲಿದ್ದಾರೆ.
-ಡಾ.ವಿನಯ್ ಸೂರ್ಯ ಮಣಿವನ್, ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ