Advertisement

ಮೀಸೆ ತಿಮ್ಮಯ್ಯ ಆನ್ ಡ್ಯೂಟಿ!

12:40 PM Dec 16, 2017 | |

ನಗರದ ಸಿನಿಮಾ ಮಂದಿರಗಳಲ್ಲಿ, ಎಫ್.ಎಂ. ಚಾನೆಲ್ಲುಗಳಲ್ಲಿ ಮತ್ತು ರಸ್ತೆ ಬದಿಯ ಉದ್ದುದ್ದ ಕಟೌಟುಗಳಲ್ಲಿ “ಮೀಸೆ ತಿಮ್ಮಯ್ಯ’ನ ಜಾಹೀರಾತುಗಳನ್ನು ನೋಡಿರಬಹುದು, ಕೇಳಿರಬಹುದು. ಆ ಮೀಸೆ ತಿಮ್ಮಯ್ಯ ಯಾರು ಗೊತ್ತಾ?

Advertisement

ಕಿವಿಮಾತು ಹೇಳುವಾಗ ಕಿವಿ ಹಿಂಡಲೇಬೇಕೆಂದೇನಿಲ್ಲ. ಪುಟ್ಟ ಮಕ್ಕಳಿಗೆ ಯಾವ ರೀತಿಯಲ್ಲಿ ನೀತಿಯನ್ನು ಕಥೆಯಲ್ಲಿ ಅಡಗಿಸಿ ಹೇಳುತ್ತಾರೋ ಅದೇ ರೀತಿ ಸಂಚಾರಿ ನಿಯಮಗಳನ್ನು ಜನರಿಗೆ ತಲುಪಿಸಲು ಆಕರ್ಷಕವಾಗಿ, ರಂಜಿಸುತ್ತಲೇ ಜನರಿಗೆ ಅರ್ಥವಾಗುವ ರೀತಿಯಲ್ಲಿ ಜಾಹೀರಾತುಗಳನ್ನು ಸಿದ್ಧಪಡಿಸುತ್ತಿದೆ ಬೆಂಗಳೂರು ಟ್ರಾಫಿಕ್‌ ಪೊಲೀಸ್‌. ಅವರ “ಮೀಸೆ ತಿಮ್ಮಯ್ಯ’ ಸರಣಿಯ ಜಾಹೀರಾತುಗಳು ಜನರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿವೆ.

ಯಾರೀ ತಿಮ್ಮಯ್ಯ?: ಮೂಲತಃ ತುಮಕೂರಿನವರಾದ ತಿಮ್ಮಯ್ಯ ಬೆಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸ್‌ ಆಗಿದ್ದವರು. ವಿಧಾನಸೌಧದ ಬಳಿಯಿರುವ ಜಿ.ಪಿ.ಓ ವೃತ್ತ ಅವರ ಕಾರ್ಯಕ್ಷೇತ್ರವಾಗಿತ್ತು. ಅದರ ಸುತ್ತಮುತ್ತ ಓಡಾಡುವವರಿಗೆಲ್ಲಾ ತಿಮ್ಮಯ್ಯ ಅತ್ಯಂತ ಪರಿಚಿತ ಮತ್ತು ಪ್ರೀತಿಪಾತ್ರರಾಗಿದ್ದ ವ್ಯಕ್ತಿಯಾಗಿದ್ದರು.

ಪ್ರೀತಿಪಾತ್ರ ಏಕೆಂದರೆ ಸಾರ್ವಜನಿಕರೊಂದಿಗೆ ಚೆನ್ನಾಗಿ ಬೆರೆತು ಅವರಿಗೆ ಸಹಕರಿಸುತ್ತಿದ್ದುದು ಮಾತ್ರವಲ್ಲದೆ ಅವರ ಕಷ್ಟಸುಖಗಳನ್ನು ವಿಚಾರಿಸುತ್ತಾ ಸಜ್ಜನಿಕೆಯಿಂದ ಇದ್ದವರು ಅವರು. ಈಗಲೂ ಬೆಂಗಳೂರಿನ ಹಿರಿತಲೆಗಳು, ಅವರನ್ನು ಸ್ಮರಿಸುತ್ತಾರೆ.

ಹೆಸರಿನಲ್ಲಿ ಮೀಸೆ!: ತಿಮ್ಮಯ್ಯ ಅವರ ಹೆಸರಿನ ಜೊತೆಗೆ “ಮೀಸೆ’ ವಿಶೇಷಣ ಥಳುಕು ಹಾಕಿಕೊಂಡಿದ್ದರ ಹಿಂದೆ ಒಂದು ಸ್ವಾರಸ್ಯಕರ ಕತೆಯಿದೆ. ಜಿ.ಪಿ.ಓ ವೃತ್ತದ ಬಳಿ ಓಡಾಡುತ್ತಿದ್ದ ಜನರೆಲ್ಲಾ ತಿಮ್ಮಯ್ಯನವರನ್ನು ನೆನಪಿಟ್ಟುಕೊಳ್ಳುವಂತೆ ಮಾಡಿದ್ದೇ ಅವರ ಗಿರಿಜಾ ಮೀಸೆ.

Advertisement

ಅವರ ಇಲಾಖೆಯಲ್ಲಿಯೂ ಅವರು ಮೀಸೆಯಿಂದಲೇ ಗುರುತಿಸಿಕೊಂಡಿದ್ದರು. ಹೀಗೆ ತಮಗೆ ಒಂದು ಗುರುತನ್ನು ನೀಡಿದ ಮೀಸೆಯ ಗೌರವಾರ್ಥ ತಮ್ಮ ಹೆಸರಿನ ಜೊತೆಗೆ ಮೀಸೆಯನ್ನು ಸೇರಿಸಿಕೊಂಡುಬಿಟ್ಟಿದ್ದರು. ಹೀಗಾಗಿಯೇ ಯಾರಾದರೂ ಮೀಸೆ ತಿಮ್ಮಯ್ಯನೆಂದು ಕರೆದರೆ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ಬದಲಿಗೆ ಖುಷಿಪಡುತ್ತಿದ್ದರು.

ಮೀಸೆ ಬಿಟ್ಟಿದ್ದಲ್ಲ, ಬೆಳೆಸಿದ್ದು!: ತಮಗೆ ಒಂದು ಐಡೆಂಟಿಟಿ ಕೊಟ್ಟ ಮೀಸೆಯನ್ನು ಅವರು ಕೊನೆಯವರೆಗೂ ಜತನದಿಂದ ಬೆಳೆಸಿದರು. ಸಾಮಾನ್ಯವಾಗಿ ಮೀಸೆ ಬಿಡುವುದು ಎಂಬ ಪದ ಬಳಕೆ ಚಾಲ್ತಿಯಲ್ಲಿದೆ. ಆದರೆ, ತಿಮ್ಮಯ್ಯನವರು ಎಂದೂ ಮೀಸೆ ಬಿಟ್ಟವರಲ್ಲ, ಬೆಳೆಸಿದವರು.

“ಬೆಳೆಸಿದರು’ ಎಂದಿದ್ದೇಕೆಂದರೆ ಅವರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಮೀಸೆಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ನೀಡುತ್ತಿದ್ದರು. ಮೀಸೆಗೆ ಎಣ್ಣೆ ಹಚ್ಚಿ, ನೀಟಾಗಿ ತಿರುವುತ್ತಿದ್ದರು. ಅದಕ್ಕೆಂದೇ ತುಂಬಾ ಸಮಯವನ್ನು ಅವರು ವಿನಿಯೋಗಿಸುತ್ತಿದ್ದರು. ನಿಮಗ್ಗೊತ್ತಾ? ಮೀಸೆಯ ಪೋಷಣೆಗೆಂದೇ ಇಲಾಖೆಯಿಂದ ವರ್ಷಕ್ಕೆ ಇಂತಿಷ್ಟು ಮೊತ್ತ ನೀಡುತ್ತಿದ್ದರಂತೆ.

ಆ ಒಂದು ದಿನ…: ಅದೊಂದು ದಿನ ಮೀಸೆ ತಿರುವಿಕೊಂಡೇ ಮನೆ ಬಿಟ್ಟವರಿಗೆ ಅದೇ ಕಡೆಯ ಬಾರಿ ತಾವು ಮನೆಯನ್ನು ನೋಡುವುದು ಎಂಬ ಸಂಗತಿ ಅವರಿಗೂ ತಿಳಿದಿರಲಿಲ್ಲ. ಎಂದಿನಂತೆ ಜಿ.ಪಿ.ಓ ಸರ್ಕಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಆ ದುರ್ಘ‌ಟನೆ ಸಂಭವಿಸಿತ್ತು. ಒಬ್ಬರು ಮಹಿಳೆ ಪುಟ್ಟ ಮಗುವಿನೊಂದಿಗೆ ರಸ್ತೆ ದಾಟುತ್ತಿದ್ದರು. ಅದೇ ಸಮಯಕ್ಕೆ ಟೆಂಪೋ ಶರವೇಗದಲ್ಲಿ ಬರುವುದು ತಿಮ್ಮಯ್ಯನವರ ಕಣ್ಣಿಗೆ ಬಿದ್ದಿತ್ತು.

ಆತ ರಸ್ತೆ ಸಂಚಾರ ನಿಯಮವನ್ನು ಪಾಲಿಸುತ್ತಾನೆ ಎಂದು ಅವರು ಊಹಿಸಿದ್ದು ತಪ್ಪಾಯಿತು. ಡ್ರೈವರ್‌ ನಿಲ್ಲಿಸಲೇ ಇಲ್ಲ. ಮಹಿಳೆ ಮತ್ತು ಮಗು ಟೆಂಪೋಗೆ ಬಲಿಯಾಗುವುದು ನಿಶ್ಚಿತ ಎನ್ನುವುದನ್ನು ಊಹಿಸಿದ ತಿಮ್ಮಯ್ಯನವರಲ್ಲಿ ಕರ್ತವ್ಯನಿಷ್ಠೆ ಜಾಗೃತವಾಯಿತು. ಅವರು ಮಹಿಳೆ ಮತ್ತು ಮಗುವನ್ನು ಕಾಪಾಡಲು ದೌಡಾಯಿಸಿದರು. ಮಹಿಳೆ ಮತ್ತು ಮಗುವನ್ನೇನೋ ಕಾಪಾಡುವುದರಲ್ಲಿ ಸಫ‌ಲರಾದ ತಿಮ್ಮಯ್ಯ ತಮ್ಮ ಪ್ರಾಣ ಉಳಿಸಿಕೊಳ್ಳುವುದರಲ್ಲಿ ವಿಫ‌ಲರಾದರು.

ಈಗೇ ಅದೇ ತಿಮ್ಮಯ್ಯ ಜಾಹೀರಾತು!: ಒಂದು ಕಾಲದಲ್ಲಿ ಆದರ್ಶ ಪೊಲೀಸ್‌ ಸಿಬ್ಬಂದಿಯಾಗಿದ್ದ ತಿಮ್ಮಯ್ಯ ಈಗ ಟ್ರಾಫಿಕ್‌ ಪೊಲೀಸರ ಪಾಲಿಗೆ ಹೀರೋ! ಸಂಚಾರಿ ನಿಯಮಗಳನ್ನು ಜನರಿಗೆ ಮನಮುಟ್ಟುವಂತೆ ಯಾವ ರೀತಿ ತಲುಪಿಸಬಹುದು ಎಂಬ ವಿಚಾರದ ಕುರಿತು ಬೆಂಗಳೂರು ಟ್ರಾಫಿಕ್‌ ಇಲಾಖೆಯವರು ತಲೆಕೆಡಿಸಿಕೊಳ್ಳುತ್ತಿದ್ದಾಗ ಅವರಿಗೆ ನೆನಪಾಗಿದ್ದೇ ಮೀಸೆ ತಿಮ್ಮಯ್ಯ.

ಈ ಐಡಿಯಾದ ಹಿಂದಿದ್ದವರು ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಹಿತೇಂದ್ರ ಅವರು. ತಿಮ್ಮಯ್ಯನವರನ್ನು ಸಂಚಾರಿ ಇಲಾಖೆಯ ಲಾಂಛನವಾಗಿಸಿಕೊಳ್ಳುವುದರಿಂದ ಜನರು ಸಂಚಾರಿ ನಿಯಮಗಳನ್ನು ಪಾಲಿಸುವಲ್ಲಿ ಪ್ರಭಾವ ಬೀರಬಹುದು ಎಂದು ಹಿತೇಂದ್ರ ಅವರು ಊಹಿಸಿದ್ದು ಸರಿಯಾಯಿತು.

* ಹರ್ಷವರ್ಧನ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next