ಅಬ್ಬಬ್ಟಾ, ಅಂತೂ ಇಂತೂ ಮಾರ್ಚ್ ತಿಂಗಳು ಮುಗೀತು. ನಾವು ಇನ್ನಾದರೂ ಸ್ವಲ್ಪ ನೆಮ್ಮದಿಯಿಂದ ಉಸಿರಾಡಬಹುದೇನೋ. ಮಾರ್ಚ್ ತಿಂಗಳು ಬಂದರೆ ಗೃಹಿಣಿಯರ ಬದುಕಿನಲ್ಲಿ ಮಾರ್ಚ್ ಫಾಸ್ಟ್ ಶುರುವಾಗಿ ಬಿಡುತ್ತದೆ. ಅಂದರೆ ಸೈನಿಕರ ಕವಾಯತು ಇದ್ದ ಹಾಗೆ. ಇಷ್ಟೇ ಹೆಜ್ಜೆ, ಹೀಗೇ ಇಡಬೇಕು, ಸಮಯಕ್ಕೆ ಸರಿಯಾಗಿ, ಸಮವಾಗಿ ಇಡಬೇಕು ಎನ್ನುವ ಹಾಗೆ, ನಮ್ಮ ಟೈಮ್ ಟೇಬಲ್ ಸೆಟ್ ಮಾಡಿಕೊಳ್ಳಬೇಕಾದ ಸಮಯವಿದು. ಯಾಕಂತೀರಾ?
ಒಂದೆಡೆ ಮಕ್ಕಳ ಪರೀಕ್ಷೆಯ ಟೈಮ್ ಟೇಬಲ್ ಅಮ್ಮಂದಿರನ್ನು ಆತಂಕಕ್ಕೆ ನೂಕುತ್ತದೆ. ಪರೀಕ್ಷೆ ಅವರಿಗೆ, ಟೆನನ್ ನಮಗೆ. ಇಯರ್ ಎಂಡಿಂಗ್ ಆಡಿಟ್ ಶುರುವಾಗಿದೆ. ಎಲ್ಲಾ ಫೈಲ್ ಕ್ಲಿಯರ್ ಆಗಬೇಕು. ಯಾರೂ ತಲೆ ತಿನ್ನಬೇಡಿ ಅಂತ ಗಂಡನೂ ಆಫೀಸಿನಿಂದ ಲೇಟಾಗಿ ಬರುತ್ತಾನೆ. ಆಫೀಸಿನ ಟೆನ್ಸ್ ನ್ ಅನ್ನು ತಲೆಯಲ್ಲಿ ತುಂಬಿಕೊಂಡು ಬರುವ ಅವರಿಂದ ಯಾವ ಸಹಾಯವನ್ನೂ ಬಯಸುವಂತಿಲ್ಲ. ಮಕ್ಕಳನ್ನು ಓದಿಸುವ ಸಂಪೂರ್ಣ ಜವಾಬ್ದಾರಿ ಅಮ್ಮನ ಮೇಲೆ.
ಮೋಜು-ಮಸ್ತಿ, ಹೋಟೆಲ್, ಸಿನಿಮಾ, ಪ್ರವಾಸ, ಟಿ.ವಿ. ಎಲ್ಲವೂ ಬಂದ್. ಮತ್ತೂಂದೆಡೆ ಸಾಲು ಸಾಲು ಮದುವೆ ಇನ್ವಿಟೇಶನ್‌ಗಳು ಟೇಬಲ್ ಮೇಲೆ. ಗಂಡನ ಮನೆಯ ಕಡೆಯ ಮದುವೆಗೆ ಹೋಗದಿರುವುದು ಮಹಾ ಅಪರಾಧ. ಹಾಗಂತ ತವರಿನ ಕಡೆಯ ಮದುವೆಗಳನ್ನು ತಪ್ಪಿಸಲಾದೀತೆ? ಕೆಲವೊಮ್ಮೆ ಒಂದೇ ದಿನ ಎರಡು ಮದುವೆಗಳು, ಅದೂ ಬೇರೆ ಬೇರೆ ಊರಿನಲ್ಲಿ! ಸದ್ಯ, ಈ ವಾರ ಯಾರ ಮದುವೆಯೂ ಇಲ್ಲ ಅಂತ ನಿರಾಳವಾಗಿರುವ ಛಾನ್ಸೇ ಇಲ್ಲ. ಮದುವೆಯಿಲ್ಲ ಅಂದರೆ ಗೃಹಪ್ರವೇಶದ ಇನ್ವಿಟೇಷನ್ ಕಾಯುತ್ತಿರುತ್ತದೆ. ಅವರು ಹೇಗೆ ಮನೆ ಕಟ್ಟಿಸಿದ್ದಾರೆ? ನಾವು ಅವರಿಗಿಂತ ಚೆನ್ನಾಗಿ ಹೇಗೆ ಕಟ್ಟಿಸಬಹುದು ಅನ್ನೋದನ್ನು ತಿಳಿಯಲಿಕ್ಕಾದ್ರೂ ಒಮ್ಮೆ ಹೋಗಿ ಬಾ ಎಂದು ಮನಸ್ಸು ಪಿಸುಗುಟ್ಟುತ್ತಿರುತ್ತದೆ. ಮನಸಿನ ಮಾತನ್ನು ಮೀರಲು ಸಾಧ್ಯವೇ?
ಇನ್ನು ಹಪ್ಪಳ, ಸಂಡಿಗೆ, ಬಾಳಕ, ಚಿಪ್ಸ್, ಉಪ್ಪಿನಕಾಯಿ ಡಬ್ಬಿಗಳು ಖಾಲಿಯಾಗಿ, ಸ್ವತ್ಛವಾಗಿ ಮಿರಿಮಿರಿ ಮಿಂಚುತ್ತಾ, ನಮ್ಮ ಹೊಟ್ಟೆ ತುಂಬುವುದು ಯಾವಾಗ ಎಂದು ಅಣಕಿಸುತ್ತಿರುತ್ತವೆ. ಆ ಡಬ್ಬಿಗಳ ಹಸಿವು ನೀಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವ ಕಾಲವಿದು. ಇಷ್ಟಾಗುವ ಹೊತ್ತಿಗೆ ನಾವೊಂದು ಸುತ್ತು ಕಡಿಮೆಯಾಗಿರುತ್ತೇವೆ. ಒಂದೊಂದು ವರ್ಷ ಯುಗಾದಿ ಹಬ್ಬವೂ ಮಾರ್ಚ್‌ನಲ್ಲಿಯೇ ಬಂದು, ಮನೆ ಸ್ವತ್ಛಗೊಳಿಸುವ ಕೆಲಸವನ್ನೂ ಕೈಗಂಟಿಸಿ ಬಿಡುತ್ತದೆ. ಈಗ ಹೇಳಿ, ಗೃಣಿಯರು ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳೋದು ಸುಲಭವಾ? ಅದಕ್ಕೇ ಹೇಳಿದ್ದು, ಮಾರ್ಚ್ ತಿಂಗಳು ಅಂದರೆ ಒಂದು ರೀತಿಯ ಕವಾಯತೇ ಸೈ ಅಂತ.
ನಳಿನಿ. ಟಿ. ಭೀಮಪ್ಪ