ನಾಗಪುರ: ಈ ಬಾರಿ ತನ್ನ ಕೇಂದ್ರ ಕಾರ್ಯಾಲಯ ನಾಗಪುರದಲ್ಲಿ ಆರೆಸ್ಸೆಸ್( ರಾಷ್ಟ್ರೀಯ ಸ್ವಯಂ ಸೇವಕ ಸಂಘ) ನಡೆಸಲಿರುವ ದಸರಾ ಪೂಜೆಗೆ ಪ್ರಸಿದ್ಧ ಹೋಮಿಯೋಪಥಿ ವೈದ್ಯ ಡಾ| ಮುನ್ವರ್ ಯೂಸುಫ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಗೆ ಸಂಘವು ಇಂತಹ ಗೌರವವನ್ನು ನೀಡಲು ಹೊರಟಿದೆ.
ಆರೆಸ್ಸೆಸ್ ದಸರಾ (ವಿಜಯದಶಮಿ) ದಂದು ತನ್ನ ಸಂಸ್ಥಾಪನಾ ದಿನಾಚರಣೆ ಯನ್ನು ಆಚರಿಸುತ್ತದೆ. 1925ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ವಿಜಯದಶಮಿಯ ದಿನದಂದು ಆರೆಸ್ಸೆಸ್ ಅನ್ನು ಸ್ಥಾಪಿಸಿದ್ದರು. ಆರೆಸ್ಸೆಸ್ ಪ್ರತಿವರ್ಷ ದಸರಾದಂದು ಆಯುಧ ಪೂಜೆಯನ್ನೂ ಮಾಡುತ್ತದೆ.
ಆರೆಸ್ಸೆಸ್ ಬೊಹ್ರಾ ಸಮುದಾಯದ ಡಾ| ಮುನ್ವರ್ ಯೂಸುಫ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಮುಸಲ್ಮಾನರ ನಡುವಣ ತನ್ನ ಪರ ಗೌರವವನ್ನು ಹೆಚ್ಚಿಸಲು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಯೂಸುಫ್ ಮತ್ತು ಅವರ ಅಜ್ಜ ಆರೆಸ್ಸೆಸ್ ಪ್ರಚಾರಕರೊಂದಿಗೆ ಹಳೆಯ ಸಂಬಂಧವನ್ನು ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.