Advertisement

ಮುಸ್ಲಿಂ ಮುಖಂಡರು ರಾಜ್ಯ ರೈತ ಸಂಘಕ್ಕೆ ಸೇರ್ಪಡೆ

02:51 PM Jan 17, 2023 | Team Udayavani |

ಮಂಡ್ಯ: ನಗರದ ಗುತ್ತಲಿನಲ್ಲಿ ಕರ್ನಾಟಕದ ರಾಜ್ಯ ರೈತಸಂಘದ ಘಟಕ ತೆರೆದು ಸುಮಾರು 100ಕ್ಕೂ ಹೆಚ್ಚು ಮುಸ್ಲಿಮರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷ ತೊರೆದು ಹಸಿರು ಟವಲ್‌ ಧರಿಸುವುದರ ಮೂಲಕ ಅಧಿಕೃತವಾಗಿ ರೈತ ಸಂಘಕ್ಕೆ ಸೇರ್ಪಡೆಗೊಂಡರು.

Advertisement

ಗುತ್ತಲು ಘಟಕದ ಕಚೇರಿ ಉದ್ಘಾಟಿಸಿದ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಬ್ರಿಟಿಷರಿಂದ ದೇಶದ ಸ್ವಾತಂತ್ರ್ಯಕ್ಕಾಗಿ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.5ರಷ್ಟು ಮಾತ್ರ ಬೀದಿಗಿಳಿದು ಹೋರಾಟ ಮಾಡಿದ ಫಲವಾಗಿ ಉಳಿದ ಶೇ.95ರಷ್ಟು ಜನರಿಗೆ ದಾಸ್ಯದಿಂದ ಸ್ವಾತಂತ್ರ್ಯ ದೊರಕಿತು. ಅದೇ ರೀತಿ ನಾವು ಇಂದು ಕೆಲವು ಜನರು ಮಾಡುತ್ತಿರುವ ಹೋರಾಟದಿಂದ ಸಮಸ್ತ ರೈತ ಸಂಕುಲಕ್ಕೆ ಅನುಕೂಲವಾಗಲಿದೆ. ಆದ್ದರಿಂದ ನಾವು ಈ ಹಸಿರು ಟವಲ್‌ ಧರಿಸಿ ಆಸೆ, ಆಕಾಂಕ್ಷೆ, ಯಾವುದೇ ತರದ ಅಮಿಷಗಳಿಗೆ ಬಲಿಯಾಗದೆ ಸರ್ವರಿಗೂ ಒಳಿತನ್ನು ಬಯಸುತ್ತಾ ನಮ್ಮ ನ್ಯಾಯಪರ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಸಾಗೋಣ ಎಂದು ತಿಳಿಸಿದರು.

ಮತ ಬುಟ್ಟಿಯಂತೆ ಪರಿಗಣನೆ: 70 ವರ್ಷಗಳ ಕಾಲ ದೇಶ ಮತ್ತು ರಾಜ್ಯವನ್ನಾಳಿದ ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರಾದ ಮುಸ್ಲಿಂರನ್ನು ಮತ ಬುಟ್ಟಿ ಯಂತೆ ಪರಿಗಣಿಸಿ, ಕೇವಲ ಮುಸ್ಲಿಂ ವೇಷಭೂಷ ಣಗಳನ್ನು ಧರಿಸಿ ಒಲೈಕೆ ಮಾಡಿದ್ದಾರೆಯೇ ಹೊರತು, ನಿಮಗಾಗಿ ಏನನ್ನು ಮಾಡಲಿಲ್ಲ. ಮೆಕಾನಿಕ್‌ ಮಕ್ಕಳು ಮೆಕ್ಯಾನಿಕ್‌ಗಳಾಗಿದ್ದಾರೆ. ಪಾತ್ರೆ ವ್ಯಾಪಾರಿಗಳ ಮಕ್ಕಳು ಪಾತ್ರೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಕೈಗಾರಿಕೆಗಳಿಲ್ಲ: ಮಂಡ್ಯ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ಎಸ್‌ .ಸಿ.ಮಧುಚಂದನ್‌ ಮಾತನಾಡಿ, ಕಳೆದ 30 ವರ್ಷಗಳ ಹಿಂದೆ ಮಂಡ್ಯ ಹೇಗಿತ್ತೋ ಇಂದು ಸಹ ಹಾಗೇ ಇದೆ. ನಾವು ಬೆಂಗಳೂರು, ಮೈಸೂರು ನಡುವೆ ಇದ್ದರೂ ಸ್ಥಳೀಯವಾಗಿ ಕೆಲಸ ಮಾಡಲು ಮಂಡ್ಯದಲ್ಲಿ ಕೈಗಾರಿಕೆಗಳಿಲ್ಲ. ಇದ್ದ ಕೈಗಾರಿಕೆಗಳು ಸಹ ಇಚ್ಛಾಸಕ್ತಿ ಇಲ್ಲದ ರಾಜಕಾರಣಿಗಳಿಂದ ಮಾಯವಾಗಿವೆ. ಆದ್ದರಿಂದ ಮಂಡ್ಯದ ಹೆಣ್ಣು ಮಕ್ಕಳು ಉಳ್ಳವರ ಮನೆಯಲ್ಲಿ ಹೋಗಿ ಅವರ ಮನೆ ಕೆಲಸ ಮಾಡಿ, ತಮ್ಮ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ರೈತ ಸಂಘದಲ್ಲಿ ಜಾತಿ, ಮತವಿಲ್ಲ: ರಾಜ್ಯ ರೈತಸಂಘದ ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್‌. ಗೌಡ ಮಾತನಾಡಿ, ರೈತ ಸಂಘ ಎನ್ನುವುದು ಯಾವುದೇ ವ್ಯಕ್ತಿಯಲ್ಲ. ಇದೊಂದು ವಿಚಾರ, ಸಿದ್ಧಾಂತ. ರೈತ ಸಂಘದಲ್ಲಿ ಯಾವುದೇ ಜಾತಿ, ಮತ, ಕುಲವಿಲ್ಲ. ಎಲ್ಲರಿಗೂ ಸಮಾನ ಅವಕಾಶ, ಸಮಾನ ಬದುಕು ಸಿಗಬೇಕು ಎಂಬ ಕನಸು ಕಂಡಿರುವುದು ರೈತಸಂಘ. ಈ ಸಿದ್ಧಾಂತಕ್ಕಾಗಿ ರಾಜ್ಯದ ಉದ್ದಗಲಕ್ಕೂ ಹಲವಾರು ಜನರು ತಮ್ಮ ಮನೆ ಮಠ ತೊರೆದು ಮತ್ತು ತಮ್ಮ ಜೀವನದ ಅಮೂಲ್ಯ ಸಮಯ ಕಳೆದುಕೊಂಡು ಸಂಘವನ್ನು ಕಟ್ಟಿದ್ದಾರೆ. ಇಲ್ಲಿ ಕೆಲಸ ಮಾಡುವವರು ಯಾವುದೇ ವೈಯಕ್ತಿಕ ಹಿತಾಸಕ್ತಿಗಾಗಿ ಕೆಲಸ ಮಾಡುವುದಿಲ್ಲ. ಸಮಾಜದ ಉದ್ಧಾರಕ್ಕಾಗಿ ರೈತ ಸಂಘದ ಸಿದ್ಧಾಂತಗಳು ಆಗಿ ಜೊತೆಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

Advertisement

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ, ರಾಜ್ಯ ರೈತಸಂಘದ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಗುತ್ತಲು ಗ್ರಾಮ ಘಟಕದ ಇಸ್ಮಾಯಿಲ್‌ (ನ್ಯಾಮತ್‌), ವಸೀಮ್‌ ಬೆಸಗರಹಳ್ಳಿ, ಎಜಾಜ್‌ ಪಾಷ, ಎಂ.ಪಿ.ಬಾಬು, ಫೈರೋಜ್‌, ಯಾಸೀರ್‌, ಶ್ರೀಯೋಲ್‌, ಜೀನತ್‌ ಹಾಗೂ ಜಿಲ್ಲಾ ರೈತಸಂಘದ ಪದಾಧಿಕಾರಿಗಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next