Advertisement

ಹರಿದ್ವಾರದ ಕುಂಭ ಮೇಳದಲ್ಲಿ ಕಾವಿಧಾರಿ ಮುಸ್ಲಿಂ ಯೋಗಿ ಆಕರ್ಷಣೆ!

09:05 AM Apr 17, 2021 | Team Udayavani |

ಹರಿದ್ವಾರ: ವೈಷ್ಣವರಂತೆ ಹಣೆ ಮೇಲೆ “ಯು’ ಆಕಾರದ ಶ್ರೀಗಂಧದ ತಿಲಕ, ಕೇಸರಿ ಬಣ್ಣದ ಕುರ್ತಾ- ಪಂಚೆ, ದಿನಪೂರ್ತಿ ಮಂತ್ರ- ಭಜನೆ ಪಠನ… ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭದ ಬೈರಾಗಿ ಕ್ಯಾಂಪ್‌ನಲ್ಲಿ ಶ್ರೀ “ಎಂ’ ಕಾಣಿಸುವುದು ಅನ್ಯ ಸಾಧುಗಳಂತೆಯೇ! ಅಂದ ಹಾಗೆ, “ಎಂ’ ಎಂದರೆ- ಮಮ್ತಾಜ್‌ ಅಲಿ ಖಾನ್‌!

Advertisement

ಹೌದು, ಕೇರಳದ ಮುಸ್ಲಿಂ ಕುಟುಂಬದ ಶ್ರೀ ಎಂ, ಅಪ್ಪಟ ಹಿಂದೂ ಸಾಧುವಾಗಿ ಭಕ್ತಾದಿಗಳಿಗೆ ಭಗವದ್ಗೀತೆ ಪ್ರವಚನ ನೀಡುತ್ತಿದ್ದಾರೆ. “ದೇವರಿಗೆ ಕೃಷ್ಣ, ಅಲ್ಲಾ, ಕ್ರಿಸ್ತ ಮುಂತಾದ ನಾಮಗಳಿವೆ. ಈ ಹೆಸರುಗಳ ಹೊರತಾಗಿಯೂ ದೇವರೊಬ್ಬನೇ! ಒಮ್ಮೆ ಈ ಸತ್ಯವನ್ನು ನಾವು ಅರಿತರೆ, ಭಗವಂತನನ್ನು ಕಾಣುವುದು ಸುಲಭ’ ಅಂತಾರೆ, ಶ್ರೀ ಎಂ.

ಯಾರಿವರು ಶ್ರೀ ಎಂ?:  ಪ್ರಸ್ತುತ, ಆಂಧ್ರಪ್ರದೇಶದ ಮಾದನಪಲ್ಲಿಯಲ್ಲಿ ಸತ್ಸಂಗ ಫೌಂಡೇಶ ನ್‌ನ ಶಾಲೆ ಮತ್ತು ಕ್ಲಿನಿಕ್‌ ಮುನ್ನಡೆಸುತ್ತಿರುವ ಇವರು, ಹಿಂದುಳಿದ ವರ್ಗದವರಿಗೆ ಅಧ್ಯಾತ್ಮಿಕ ಶಿಕ್ಷಣ ನೀಡುತ್ತಿದ್ದಾರೆ. ಶ್ರೀ ಎಂ ಅವರ ಈ ಕಾರ್ಯಕ್ಕಾಗಿ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿಯೂ ಒಲಿದಿತ್ತು.

ಮನೆ ಬಿಟ್ಟು ಹಿಮಾಲಯಕ್ಕೆ: ಕೇರಳದ ತಿರುವನಂತಪುರದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಮಮ್ತಾಜ್‌ ಅಲಿ ಖಾನ್‌ ಬಾಲ್ಯದಿಂದಲೇ ಹಿಂದೂ ಧರ್ಮದ ಸೆಳೆತಕ್ಕೊಳಪಟ್ಟರು. 18ನೇ ವಯಸ್ಸಿನಲ್ಲಿ ಮನೆ ತೊರೆದ ಇವರು, ಹಿಮಾಲಯದಲ್ಲಿ ಗುರುವಿನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡರು.

ರಿಷಿಕೇಶದಿಂದ ಬದರಿನಾಥ್ವರೆಗೆ ಸಾಧುವಿನಂತೆ ಅಲೆದ ಇವರಿಗೆ, ಕೊನೆಗೂ ಬದರಿನಾಥದ ಹಿಂದಿನ ಗುಹೆಯೊಂದರಲ್ಲಿ ಮಹಾನ್‌ ಯೋಗಿಯ ದರ್ಶನ ಸಿಕ್ಕಿತು. ಅಲ್ಲಿಂದ ಇವರ ಬದುಕಿನ ದಿಕ್ಕೇ ಬದಲಾಯಿತು. ಪ್ರಸ್ತುತ ಕುಂಭಮೇಳದಲ್ಲಿ ಇವರ ವೇದೋಪನಿಷತ್‌, ಯೋಗ ಸೂತ್ರಗಳ ಕುರಿತ ಪ್ರವಚನ ಕೇಳಲು ಭಕ್ತಾದಿಗಳು ಮುಗಿಬೀಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next