ಬೆಂಗಳೂರು:ಖಾಸಗಿ ವಾಹಿನಿಯೊಂದರಲ್ಲಿ ಮುಸ್ಲಿಂ ಯುವತಿ ಹಿಂದು ದೇವರ ಭಕ್ತಿಗೀತೆ ಹಾಡಿದ್ದು ಇದೀಗ ಧರ್ಮ ವಿರೋಧಿ ಎಂಬಂತೆ ಬಿಂಬಿತವಾಗಿದ್ದು, ಆ ಯುವತಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಸಾಗರ ಮೂಲದ ಸುಹಾನಾ ಎಂಬಾಕೆ ಖಾಸಗಿ ವಾಹಿನಿಯ ಸರಿಗಮಪ ಸೀಸನ್ 13ರಲ್ಲಿ ಹಿಂದು ದೇವರ ಕೀರ್ತನೆ ಹಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಳು. ಆದರೆ ಇದೀಗ ಸುಹಾನ ಬುರ್ಖಾ ತೊಟ್ಟು ದೇವರ ನಾಮ ಹಾಡಿರುವುದಕ್ಕೆ ಟೀಕೆಯ ಸುರಿಮಳೆ ಸುರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಹಾನ ವಿರುದ್ಧ ಬೆದರಿಕೆಯ ಪೋಸ್ಟ್ ಗಳು ಹರಿದಾಡತೊಡಗಿವೆ.
ಮಂಗಳೂರು ಮುಸ್ಲಿಮ್ಸ್ ಫೇಸ್ ಬುಕ್ ಪುಟದಲ್ಲಿ, ಸುಹಾನಾ ನೀನು ಪುರುಷರ ಎದುರು ಹಾಡಿ ಮುಸ್ಲಿಂ ಸಮುದಾಯಕ್ಕೆ ಕಳಂಕ ತಂದಿದ್ದೀಯಾ. ನೀನು ಸಾಧನೆ ಮಾಡಿದ್ದಿ ಎಂದು ಭಾವಿಸಬೇಡ, ಖುರಾನ್ ಅನ್ನು 6 ತಿಂಗಳಲ್ಲಿ ಪಠಿಸಲು ಕಲಿತವರು ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ಫೋಸ್ಟ್ ಮಾಡಲಾಗಿದೆ.
ಏತನ್ಮಧ್ಯೆ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯುಟಿ ಖಾದರ್. ಯುವತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಧಮ್ಕಿ ಹಾಕಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಧಮ್ಕಿ ಹಾಕಲು ಇವರು ಯಾರು? ಒಂದು ವೇಳೆ ಏನಾದರೂ ತಪ್ಪಾಗಿದ್ದರೆ ಅದಕ್ಕೆ ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು ಇದ್ದಾರೆ ಅವರು ನೋಡಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.