Advertisement

ಸಂಗೀತ ವಿವಿ ಘಟಿಕೋತ್ಸವ: ಶಾಸಕರ ಬೆಂಬಲಿಗರ ತಕರಾರು

08:02 AM Mar 08, 2017 | |

ಮೈಸೂರು: ಸಂಗೀತ ವಿವಿಯ ದ್ವಿತೀಯ ಘಟಿಕೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರು ಮುದ್ರಿಸಿಲ್ಲ ಎಂದು
ಆರೋಪಿಸಿ ಕೆ.ಆರ್‌.ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್‌ ಬೆಂಬಲಿಗರು ವಾಗ್ವಾದ ನಡೆಸಿದ ಘಟನೆ ನಡೆಯಿತು.

Advertisement

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ದ್ವಿತೀಯ ವಾರ್ಷಿಕ ಘಟಿಕೋತ್ಸವವನ್ನು ಮಂಗಳವಾರ ಕೃಷ್ಣಮೂರ್ತಿಪುರಂನಲ್ಲಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪದ್ಧತಿಯಂತೆ ವಿವಿಗಳ ಕುಲಾಪತಿ ರಾಜ್ಯಪಾಲ ವಜುಬಾಯಿ ವಾಲಾ, ಸಮಕುಲಾಪತಿಗಳಾದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯ ರೆಡ್ಡಿ ಹಾಗೂ ಘಟಿಕೋತ್ಸವ ಭಾಷಣಕಾರ ಖ್ಯಾತ ಪಿಟೀಲು ವಾದಕ ವಿದ್ವಾನ್‌ ಡಾ.ಎಲ್‌. ಸುಬ್ರಮಣಿಯಂ ಅವರ ಹೆಸರನ್ನಷ್ಟೇ ಆಹ್ವಾನ
ಪತ್ರಿಕೆಯಲ್ಲಿ ಹಾಕಿಸಲಾಗಿತ್ತು. ಈ ಪದ್ಧತಿ ಗೊತ್ತಿಲ್ಲದ ಶಾಸಕ ಎಂ.ಕೆ.ಸೋಮಶೇಖರ್‌ ಬೆಂಬಲಿಗರು, ಘಟಿಕೋತ್ಸವ ನಡೆಯುತ್ತಿದ್ದ
ಸಭಾಂಗಣಕ್ಕೆ ತೆರಳಿ ವಿವಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿಧಿದರು. ಅಲ್ಲದೆ, ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರ
ಹೆಸರನ್ನು ಹಾಕದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಹರಿಹಾಯ್ದರು.  ವಿ.ವಿ. ಕುಲಸಚಿವ ಡಾ.ನಿರಂಜನ ವಾನಳ್ಳಿ ಸೂಕ್ತ
ಸಮಜಾಯಿಷಿ ನೀಡಿದರಾದರೂ ಕೇಳದೆ ವಾಗ್ವಾದ ನಡೆಸುತ್ತಿದ್ದವರನ್ನು ಪೊಲೀಸರು ಮಧ್ಯಪ್ರವೇಶಿಸಿ ಹೊರಗೆ ಕಳುಹಿಸಿದರು.

ಸಿಂಡಿಕೇಟ್‌ ಸದಸ್ಯರ ಬಹಿಷ್ಕಾರ: ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ವಿವಿ ಸಿಂಡಿಕೇಟ್‌ ಸದಸ್ಯರಾದ ಸಿ.ಆರ್‌.ಹಿಮಾಂಶು, ಡಾ.ವಸುಂಧರಾ ಹೆಗ್ಗಡೆ, ಡಾ.ಬಾನಂದೂರು ಕೆಂಪಯ್ಯ, ಫೈಯಾಜ್‌ ಖಾನ್‌ ಹಾಗೂ ನಾಗಚಂದ್ರಿಕಾ ಭಟ್‌ ಘಟಿಕೋತ್ಸವ ಬಹಿಷ್ಕರಿಸಿ ಹೊರಗೆ ಉಳಿದಿದ್ದರು. ಮೂವರಿಗೆ ಗೌಡಾ ಪ್ರದಾನ: ಘಟಿಕೋತ್ಸವದಲ್ಲಿ ಕರ್ನಾಟಕ ಸಂಗೀತ-ಗಾಯನ ಕ್ಷೇತ್ರದ ಸಾಧಕರಾದ ಪ್ರೊ.ಗೌರಿ ಕುಪ್ಪುಸ್ವಾಮಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಗೌರವ ಡಾಕ್ಟರೇಟ್‌ ಪಡೆಯಬೇಕಿದ್ದ ಹಿಂದೂಸ್ತಾನಿ ಸಂಗೀತ ವಾದ್ಯ ಕ್ಷೇತ್ರದ ಸಾಧಕರಾದ ವಯೋಲಿನ್‌ ವಾದಕಿ ಪ್ರೊ.ಎನ್‌.ರಾಜಂ ಮತ್ತು ನಾಟಕ ಕ್ಷೇತ್ರದ ಸಾಧಕ ನಾಡೋಜ ಏಣಗಿ ಬಾಳಪ್ಪ ಗೈರುಹಾಜರಾಗಿದ್ದರು. 47 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next