ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವದ ಅಂಗವಾಗಿ ನಗರದ ಲಲಿತಕಲಾ ಸದನದಲ್ಲಿ ಜರಗಿದ ಪ್ರಧಾನ ಶಾಸ್ತ್ರೀಯ ಸಂಗೀತ ಕಛೇರಿ ರಸಾನುಭೂತಿಯನ್ನು ನೀಡಿತು. ನಡೆಸಿಕೊಟ್ಟವರು ಬೆಂಗಳೂರಿನ ಯುವ ಕಲಾವಿದೆ ಕು| ಅಮೃತಾ ವೆಂಕಟೇಶ್.
ಬಹು ಪ್ರಚಲಿತ ಅಭೋಗಿ ರಾಗ ಆದಿ ತಾಳದ “ಎವರಿ ಭೋದನ’ ವರ್ಣದ ಸೊಗಸಾದ ನಿರೂಪಣೆಯಿಂದ ಆರಂಭಗೊಡು, ತ್ಯಾಗರಾಜರ ಜಗನ್ಮೋಹಿನಿ ರಾಗ ರೂಪಕ ತಾಳದ ಶೋಭಿಲ್ಲು ಸಪ್ತಸ್ವರ ಕೃತಿಯು ಮನೋಜ್ಞವಾದ ಪ್ರಸ್ತುತಿ ಮತ್ತು ಲೆಕ್ಕಾಚಾರಯುಕ್ತ ಕಲ್ಪನಾ ಸ್ವರಗಳ ಸಂಯೋಜನೆಯಿಂದ ಕಳೆಗಟ್ಟಿತು. ಮುತ್ತು ಸ್ವಾಮಿ ದೀಕ್ಷಿತರ ಶ್ಯಾಮರಾಗದ ಬಹುಪ್ರಚಲಿತ ಕೃತಿ ರೂಪಕ ತಾಳದಲ್ಲಿ ಅನ್ನಪೂರ್ಣೇ ವಿಶಾಲಾಕ್ಷಿಗೆ ಪೂರ್ವದಲ್ಲಿ ನೀಡಿದ ಆಲಾಪನೆ ಸ್ಥಾಯಿತ್ವದ ತಳಹದಿಯ ಪರಿಪೂರ್ಣತೆಯನ್ನು ಪಡೆದುಕೊಂಡು ಶಾಂತವಾಗಿ ವಿಸ್ತತಗೊಂಡಿದ್ದು ವೈಶಿಷ್ಟ್ಯ ಪೂರ್ಣ ಸ್ವರಪ್ರಸ್ತಾರಗಳಿಂದ ಗಮನ ಸೆಳೆಯಿತು. ಆದಿ ತಾಳದ ತ್ಯಾಗರಾಜರ ಮತ್ತೂಂದು ಕೃತಿ “ಮರಿವೇರೆ ದಿಕ್ಕೆವ್ವರೋ’ ಹಂತ ಹಂತವಾಗಿ ಸ್ವರ ಸಂಯೋಜನೆ ಮೆರುಗಿನೊಂದಿಗೆ ಆಕರ್ಷಣೀಯವಾಗಿ “ಲತಾಂಗಿ’ ರಾಗದಲ್ಲಿ ವಿಜೃಂಭಿಸಿತು.
ಕಲಾವಿದೆ ಪ್ರಧಾನವಾಗಿ ಭೈರವಿ ರಾಗವನ್ನು ಆಯ್ದುಕೊಂಡು ಸ್ಥಾಯಿತ್ವದ ಭದ್ರವಾದ ನೆಲೆಗಟ್ಟಿನಲ್ಲಿ ಸ್ವರಾಕ್ಷರಗಳನ್ನು ಅತ್ಯಂತ ನಾಜೂಕಾಗಿ ಸಂಯೋಜಿಸಿ, ರಾಗವನ್ನು ಪೋಷಿಸಿ ಪೂರ್ಣ ಪ್ರಮಾಣದಲ್ಲಿ ಅನಾವರಣಗೊಳಿಸುವ ಮೂಲಕ ತನ್ನ ವಿದ್ವತ್ತನ್ನು ಪ್ರಕಟಿಸಿದರು. ಇದನ್ನನುಸರಿಸಿ ಪುರಂದರದಾಸರ ಆದಿ ತಾಳದ “ಓಡಿ ಬಾರಯ್ಯ ವೈಕುಂಠಪತಿ’ ಕೀರ್ತನೆಯನ್ನು ಸಾಹಿತ್ಯ ಸ್ಪುಟತೆಯಿಂದ ಹಾಡಿದ್ದು, ನೋಡಿ ಮುದ್ದಾಡಿ ಎಂಬ ನೆರವಲ್ ಪ್ರಯೋಗದಲ್ಲಿನ ವೈವಿಧ್ಯ ಭಾವ ಪ್ರಕಟತೆ, ಅಂತೆಯೇ ಅನುಸರಿಸಿ ಬಂದ ಖಚಿತ ಲೆಕ್ಕಾಚಾರದ ಕಲ್ಪನಾ ಸ್ವರ ವಿನ್ಯಾಸದ ಪ್ರಸ್ತುತಿ ಮನಸೂರೆಗೊಂಡಿತು. ಸ್ವಾತಿ ತಿರುನಾಳ್‌ರವರ “ಅಳಿವೇಣಿ ಎಂದು ಚೈವು’ ಕೀರ್ತನೆ ಕುರುಂಜಿ ರಾಗ ಅದಿ ತಾಳದಲ್ಲಿ ಅತಿ ಶಾಂತತೆಯಿಂದ ಹೃದ್ಯವಾಗಿ ವಿಳಂಬ ಗತಿಯಲ್ಲಿ ರಸಿಕರಿಗೆ ಮುದ ನೀಡಿತು. “ನಾದನಾಮಕ್ರಿಯ’ ರಾಗದ ಢಂಗುರವಾ ಸಾರಿ ಹರಿಯ, ದೇವರ ನಾಮ ಮತ್ತು “ಹಂಸಾನಂದಿ ರಾಗದ’ ಸ್ವಾತಿ ತಿರುನಾಳ್ ಕೃತಿ ಶಂಕರ ಶ್ರೀ ಗಿರಿನಾಥ ಪ್ರಭೊ ಚೇತೋಹಾರಿಯಾಗಿ ಮೂಡಿಬಂತು. “ಯಮನ್ ಕಲ್ಯಾಣಿ’ಯ ಕೊಳಲನೂದುತ ಬಂದ ಮುದ ನೀಡಿದ್ದು, ಕಛೇರಿಯಲ್ಲಿ ವಿಶೇಷವಾಗಿ ಗಮನ ಸೆಳೆದ ಮಧುರೈ ಮಣಿ ಅಯ್ಯರ್‌ರವರ “ಶಂಕರಾಭರಣ ರಾಗದ’ ತಿಶ್ರ ನಡೆಯ ಇಂಗ್ಲೀಷ್ ನೋಟು ಕೃತಿ ಅತಿ ಚುರುಕಾದ ಸಂಚಾರಗಳಿಂದ ವಿಶೇಷ ಅನುಭವ ನೀಡಿತು. ಬಾಲ ಮುರಳಿಯವರ ಹಿಂದೋಳ ರಾಗದ ತಿಲ್ಲಾನ ಮತ್ತು ಮಂಗಳದೊಂದಿಗೆ ಕಚೇರಿ ಸಂಪನ್ನಗೊಂಡಿತು. ಕಾರ್ಯಕ್ರಮದುದ್ದಕ್ಕೂ ಪಿಟೀಲು ವಾದನದಿಂದ ಸಾಥ್‌ನೀಡಿದ ತಿರುವನಂತಪುರ ಸಂಪತ್ ಕುಮಾರ್ ಗಮನ ಸೆಳೆದರು. ಮೃದಂಗವಾದನದಲ್ಲಿ ಫಾಲ್ಗಾಟ್ ಮಹೇಶ್ ಕುಮಾರ್ ಮತ್ತು ಮೋರಿಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಉತ್ತಮ ಸಾಥ್ ನೀಡಿ ಕಚೇರಿಯ ಯಶಸ್ವಿಗೆ ಕಾರಣರಾದರು.
ಕೃಷ್ಣರಂಜಿನಿ