ವೆಳ್ಳಂಗರಿ(ಕೊಯಮತ್ತೂರು): ವೆಳ್ಳಂಗಿರಿ ತಪ್ಪಲಿನಲ್ಲಿ ಧ್ಯಾನಸ್ಥ ಹಸನ್ಮುಖೀ ಆದಿಯೋಗಿ ಶಿವ ದೇಶ-ವಿದೇಶಗಳ ಸಹಸ್ರಾರು ಭಕ್ತರ ಮನದಲ್ಲಿ ಭಕ್ತಿ-ಭಾವ ಬಡಿದೆಬ್ಬಿಸಿದ್ದ. ಆಹ್ಲಾದಕರ ತಂಪು ವಾತಾವರಣಕ್ಕೆ ಇಂಪಾದ ಸಂಗೀತ, ಸದ್ಗುರುವಿನ ದರ್ಶನ ನೆರೆದ ಜನರನ್ನು ಎದ್ದು ಕುಣಿಯುವಂತೆ ಮಾಡಿತ್ತು. ಹರ ಹರ ಮಹಾದೇವ, ಶಂಭೋ ಶಂಕರ ಘೋಷ ಗಿರಿತಟದಲ್ಲಿ ಮಾರ್ದನಿಸುವ ಮೂಲಕ ವೆಳ್ಳಂಗಿರಿಯಲ್ಲಿ ಕೈಲಾಸವೇ ಧರೆಗಿಳಿದಂತೆ ಭಾಸವಾಗುತ್ತಿತ್ತು.
ಸದ್ಗುರು ಆದಿಯೋಗಿ ಸನ್ನಿಧಾನದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಸಾರಥ್ಯದಲ್ಲಿ ಈಶಾ ಫೌಂಡೇಷನ್ ಆಯೋಜಿಸಿದ್ದ ಮಹಾಶಿವರಾತ್ರಿ ಆಚರಣೆಗೆ ಆದಿಯೋಗಿ ಶಿವನ ಮೂರ್ತಿ ಹಾಗೂ ಸದ್ಗುರು ಜಗ್ಗಿ ವಾಸುದೇವ ಅವರು ಆಕರ್ಷಣೆ ಕೇಂದ್ರ ಬಿಂದು.
112 ಅಡಿ ಎತ್ತರದ ಶಾಂತ ಸ್ವರೂಪದ ಆದಿಯೋಗಿಯ ಮೂರ್ತಿ, ಸುಮಾರು 21ಅಡಿ ಎತ್ತರದ ನಂದಿ ಸಮ್ಮುಖದಲ್ಲಿ ನಿರ್ಮಾಣಗೊಂಡ ಭವ್ಯ ವೇದಿಕೆ ಧರೆಗಿಳಿದಂತಿದ್ದ ಕೈಲಾಸಕ್ಕೆ ಮುದ ನೀಡುವಂತಿತ್ತು. ಹಾಡು, ನೃತ್ಯ, ರೂಪಕಗಳ ಸಾಂಸ್ಕೃತಿಕ ಲೋಕವೇ ಮೈದಳೆದಿತ್ತು. ಹರ ಹರ ಮಹಾದೇವ ಹಾಡು, ಗಾಯಕ ಸಂದೀಪ ನಾರಾಯಣ್ ಅವರ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ..ಎಂಬ ಕನ್ನಡದ ಹಾಡು ಸಹಿತ ವಿವಿಧ ಹಾಡುಗಳಿಗೆ ಸದ್ಗುರು ಜಗ್ಗಿ ವಾಸುದೇವ ಹಾಗೂ ನೆರೆದ ಸಹಸ್ರಾರು ಭಕ್ತರು ಕುಣಿದು ಕುಪ್ಪಳಿಸಿದರು.
ಕಾವೇರಿ ಉಳಿವಿಗೆ ಅಭಿಯಾನ
ಸದ್ಗುರು ಬರೆದಿರುವ ಕಾವೇರಿ ತಾಯೆ.. ಹಾಡನ್ನು ಶಂಕರ ಮಹಾದೇವನ್, ಸದ್ಗುರು ಹಾಗೂ ಸಂದೀಪ ನಾರಾಯಣ್ ಸೇರಿ ಹಾಡಿದ್ದು, ಭಕ್ತರೂ ಧ್ವನಿಗೂಡಿಸಿ ದರು. ಹಾಡು ಮುಗಿಯುತ್ತಿದ್ದಂತೆಯೇ ಕಾವೇರಿ ಉಳಿವಿಗೆ ಅಭಿಯಾನ ಕೈಗೊಂಡಿದ್ದ ಸದ್ಗುರು ಕಣ್ಣಂಚಿಗೆ ನೀರು ಹರಿಯಿತು. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಚಿಸಿದ ದೇವಾದಿ ದೇವಾ ಹಾಡನ್ನು ಮೊದಲ ಬಾರಿಗೆ ಶಂಕರ ಮಹಾದೇವನ್ ಹಾಡುವ ಮೂಲಕ ಕೇವಲ ರಾಜಕಾರಣಿಯಾಗಿ ಕಂಡಿದ್ದ ಫಡ್ನವೀಸ್ ಅವರೊಳಗೊಬ್ಬ ಕವಿ ಇದ್ದಾನೆ ಎಂಬುದನ್ನು ಪರಿಚಯಿಸಿದರು. ಶಂಕರ ಮಹಾದೇವನ್ ಅವರ ಪುತ್ರ ಅಂದರ್ ಕಾಲಾ, ಬಾಹಾರ್ ಕಾಲಾ ಹಿಂದಿ ಹಾಡು, ಪಂಜಾಬಿ ಕಲಾವಿದ ಗುರುದತ್ತ ಮಾನ್, ವಿದೇಶಿ ಕಲಾವಿದರಿಂದ ಹಾಡು, ಈಶಾ ಫೌಂಡೇಶನ್ ಪ್ರೊಜೆಕ್ಟ್ ಸಂಸ್ಕೃತಿ ನೃತ್ಯ ಗಮನ ಸೆಳೆಯಿತು.
ವೆಳ್ಳಂಗಿರಿ ಶುಕ್ರವಾರ ಒಂದು ಪುಟ್ಟ ವಿಶ್ವದಂತೆ ಗೋಚರಿಸಿತು. ವೇದಿಕೆ ಬೆನ್ನಿಗೆ ಹೊಂದಿಕೊಂಡಂತಿರುವ ವೆಳ್ಳಂಗಿರಿ ಬೆಟ್ಟದ ಮೇಲಿನ ದೇವಸ್ಥಾನ ದರ್ಶನಕ್ಕೆ ರಾತ್ರಿಯಲ್ಲಿಯೇ ಅನೇಕರು ಮೊಬೈಲ್, ಟಾರ್ಚ್ ಬೆಳಕಲ್ಲೇ ಬೆಟ್ಟ ಹತ್ತುತ್ತಿದ್ದುದು ಕಂಡು ಬಂತು. ಉತ್ಸವದ ಹಾಡು, ನೃತ್ಯ ನಡುವೆಯೇ ಸದ್ಗುರು ಚಿಂತನೆ, ನದಿ, ಮಣ್ಣು ಸಂರಕ್ಷಣೆಗೆ ಜಗ್ಗಿ ವಾಸುದೇವ ಕೈಗೊಂಡ ಸುಮಾರು 35 ಸಾವಿರ ಕಿ.ಮೀ. ಬೈಕ್‌ಯಾತ್ರೆ, ಪ್ರೊಜೆಕ್ಟ್ ಸಂಸ್ಕೃತಿ, ಯೋಗ ಕೇಂದ್ರ ಮಾಹಿತಿ ಹಾಗೂ ಮಹತ್ವ, ಈಶಾ ಫೌಂಡೇಶನ್ ವಿವಿಧ ಸೇವಾ ಕಾರ್ಯಗಳ ಪ್ರದರ್ಶನ ಕೈಗೊಳ್ಳಲಾಯಿತು.