Advertisement

ರೋಗಗಳ ಹತೋಟಿಗೆ ಸಂಗೀತವೇ ಮದ್ದು

11:00 PM Jun 10, 2019 | mahesh |

ಮನಸ್ಸು ಅದೆಷ್ಟೇ ತಳಮಳದಿಂದ ಕೂಡಿದ್ದರೂ ಕೊಂಚ ಹೊತ್ತು ಸಂಗೀತ ಕೇಳುವುದರಲ್ಲಿ ತಲ್ಲೀನವಾದರೆ ಎಲ್ಲ ಸಮಸ್ಯೆಗಳು ಮಾಯ. ಭಾವನೆಗಳನ್ನು ಹತೋಟಿಗೆ ತರುವಲ್ಲಿ ಉಳಿದೆಲ್ಲ ಕೆಲಸಗಳಿಗೆ ಹೋಲಿಸದರೇ ಸಂಗೀತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸಂಗೀತ ಕೂಡ ಅದ್ಭುತವನ್ನು ಮಾಡಬಲ್ಲದು ಎಂಬುದಕ್ಕೆ ಇತ್ತೀಚಿಗೆ 27 ದಿನಗಳ ಕಾಲ ಕೋಮ ಸ್ಥಿತಿಯಲ್ಲಿದ್ದ ಕೋಲ್ಕತ್ತದ ವ್ಯಕ್ತಿ ಮ್ಯೂಸಿಕ್‌ ಥೆರಪಿಯಿಂದಾಗಿ ಸಹಜ ಸ್ಥಿತಿ ಬಂದಿರುವ ಕಥೆ ಸ್ಪಷ್ಟ ಉದಾಹರಣೆ.

Advertisement

ಸಂಗೀತ ಕೇಳುವುದೇ ಒಂದು ಖುಷಿ. ಯಾವುದೇ ಒತ್ತಡದಲ್ಲಿದ್ದರೂ ಒಂದು ಕ್ಷಣ ಸಂಗೀತ ಕೇಳಿದರೆ ಮನಸ್ಸು ಶಾಂತಗೊಳ್ಳುತ್ತದೆ. ವೈದಕೀಯ ಕ್ಷೇತ್ರದಲ್ಲಿ ಈ ಸಂಗೀತ ಎಷ್ಟು ಮೋಡಿ ಮಾಡಿದೆ ಎಂದರೆ ಅನೇಕ ರೋಗಗಳಿಗೆ ಸಂಗೀತ ಕೂಡ ಮದ್ದು ಎಂಬುದು ಈಗಾಗಲೇ ಸಂಶೋಧನೆಗಳು ಬಹಿರಂಗಪಡಿಸಿವೆ.

ಸಂಗೀತ ಕೇಳುವುದರಿಂದ ರಕ್ತದೊತ್ತಡ, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಅದರೊಂದಿಗೆ ಖನ್ನತೆ, ಪಾರ್ಶ್ವವಾಯು ಮೊದಲಾದ ರೋಗಗಳನ್ನು ಹತೋಟಿಗೆ ತರಬಹುದು. ಸಂತೋಷ, ದುಃಖ ನವರಸಗಳನ್ನು ನಿಯಂತ್ರಿಸಲು ರಾಗಗಳು ನೆರವಾಗುತ್ತವೆ. ಸಂಗೀತ ಸಕಾರಾತ್ಮಕ ಯೋಚನೆ ಹುಟ್ಟುಹಾಕುತ್ತವೆ. ಇಂಪಾದ ಸಂಗೀತ ಕೇಳಿದೊಡನೆ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಮನಸ್ಸಿಗೆ ಉಂಟಾದ ನೋವನ್ನು ಮರೆಮಾಚುವ ಶಕ್ತಿ ಸಂಗೀತಕ್ಕಿದೆ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿರುವ ಸತ್ಯ. ಹಾಗಾಗಿ ಕೆಲವು ರೋಗಗಳನ್ನು ಸಂಗೀತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ನಿಯಂತ್ರಣಕ್ಕೆ ತರಲು ಸಾಧ್ಯವಿದೆ.

ಸಂಗೀತಕ್ಕೂ, ಮೆದುಳಿಗೂ ಅಂತರ್‌ ಸಂಬಂಧವಿದೆ. ಸಂಗೀತದ ಬೀಟ್‌ಗಳು ಮೆದುಳಿನ ಅಲೆಗಳನ್ನು ಉತ್ತೇಜಿಸುತ್ತವೆ. ಬಲವಾದ ಬೀಟ್‌ಗಳು ಯೋಚನಾ ಲಹರಿಯನ್ನು ಚುರುಕುಗೊಳಿಸುತ್ತವೆ. ನಿಧಾನವಾದ ಬೀಟ್‌ಗಳು ಮನಸ್ಸನ್ನು ಶಾಂತ, ಧ್ಯಾನದ ಸ್ಥಿತಿಗೆ ಕೊಂಡೊಯ್ಯುತ್ತವೆ. ಮೆದುಳಿನ ಅಲೆಗಳಲ್ಲಾಗುವ ಮಾರ್ಪಾಡುಗಳು ದೇಹದ ಇತರ ಭಾಗಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರುತ್ತವೆ ಎನ್ನುತ್ತಾರೆ ಮ್ಯೂಸಿಕ್‌ ಥೆರಪಿಸ್ಟ್‌ಗಳು.

ಮ್ಯೂಸಿಕ್‌ ಥೆರಪಿ ಎಂದರೇನು?
ಮ್ಯೂಸಿಕ್‌ ಥೆರಪಿ ಎಂದರೆ ಸಂಗೀತದ ಮೂಲಕ ರೋಗಿಯ ಮಾನಸಿಕ ಸ್ಥಿತಿಯನ್ನು ಹತೋಟಿಗೆ ತರುವುದು. ಮ್ಯೂಸಿಕ್‌ ಥೆರಪಿಸ್ಟ್‌ಗಳು ಆರೋಗ್ಯ ಸುಸ್ಥಿರವಾಗಿಟ್ಟುಕೊಳ್ಳಲು ಒಂದಷ್ಟು ಸಂಗೀತ ವಾದ್ಯಗಳಾದ ಗಿಟಾರ್‌, ಫಿಯಾನೋ, ಕೊಳಲು ಮುಂತಾದವುಗಳನ್ನು ಬೇರೆ ಬೇರೆಯಾಗಿ ನುಡಿಸಿ, ಸೂಕ್ಷ್ಮವಾಗಿ ಗಮನಿಸುತ್ತಾರೆ. ನೀವು ಯಾವುದಕ್ಕೆ ಹೆಚ್ಚು ಸ್ಪಂದಿಸುತ್ತೀರಿ ಎಂಬುದನ್ನು ಗಮನಿಸಿ ಅನಂತರ ಥೆರಪಿ ಮುಂದುವರಿಸುತ್ತಾರೆ. ಸಂಗೀತ ಕೇಳಲು ಇಷ್ಟವಿಲ್ಲದಿದ್ದರೆ, ಇತರೆ ಇಂಪಾದ ನಿನಾದ ಕೇಳಬಹುದು. ನಗರದಲ್ಲಿ ಮ್ಯೂಸಿಕ್‌ ಥೆರಪಿಸ್ಟ್‌ ಗಳ ಸಂಖ್ಯೆ ಕಡಿಮೆಯೇ ಇದೆ.

Advertisement

ಸಾಧ್ಯತೆ
ಮ್ಯೂಸಿಕ್‌ ಥೆರಪಿಯಿಂದ ರೋಗಗಳು ಸಂಪೂರ್ಣ ಗುಣಮುಖವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ರೋಗಗಳನ್ನು ಹತೋಟಿಗೆ ತರಬಹುದು. ಇದರೊಂದಿಗೆ ರೋಗಿಯ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಆಗಬಹುದು. ಒತ್ತಡದಿಂದ ಹೊರಬರಲು ಕೂಡ ಈ ಮ್ಯೂಸಿಕ್‌ ಥೆರಪಿ ಸಹಕಾರಿ.
– ಡಾ| ರೋಶನ್‌, ಸ್ಪೀಚ್‌ ಥೆರಪಿ ವೈದ್ಯರು

ಮ್ಯೂಸಿಕ್‌ನಿಂದ ಒತ್ತಡ ನಿರ್ವಹಣೆ
ಒತ್ತಡದ ಜೀವನವೇ ಇಂದು ಅನೇಕ ರೋಗಗಗಳಿಗೆ ಕಾರಣವಾಗಿದೆ . ಮ್ಯೂಸಿಕ್‌ ಥೆರಪಿ ದೈನಂದಿನ ಒತ್ತಡದಿಂದ ಮುಕ್ತಿ ಪಡೆಯಲು ಸಹಕಾರಿ. ಅದಕ್ಕಾಗಿ ಇದೇ ರೀತಿಯ ಮ್ಯೂಸಿಕ್‌ಗಳನ್ನು ಕೇಳಬೇಕು ಎಂದೇನಿಲ್ಲ. ನಿಮಗೆ ಇಷ್ಟವಾದ ಯಾವುದೇ ಮ್ಯೂಸಿಕ್‌ ಕೇಳಿದರೂ ಮನಸ್ಸು ಹಗುರವಾಗುವುದು. ಮನಸ್ಸು ಹಗುರವಾಗಿದ್ದರೆ ನಮ್ಮ ಆರೋಗ್ಯವು ಹತೋಟಿಯಲ್ಲಿರುತ್ತದೆ.

ಹೃದಯದ ಆರೋಗ್ಯಕ್ಕೆ ಸಂಗೀತ
ಮ್ಯೂಸಿಕ್‌ ಥೆರಪಿ ಹೃದಯದ ಆರೋಗ್ಯವನ್ನು ಸುಸ್ಥಿರವಾಗಿಡಲು ಸಹಕರಿಸುತ್ತದೆ. ಅಧ್ಯಯನಗಳ ಪ್ರಕಾರ ಹೃದಯಾಘಾತವನ್ನು ತಪ್ಪಿಸಲು ಸಂಗೀತ ನೆರವಾಗುತ್ತದೆ. ಮಾಧುರ್ಯ ತುಂಬಿದ ಹಾಡುಗಳನ್ನು ಕೇಳುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಮ್ಯೂಸಿಕ್‌ನಿಂದ ಏಕಾಗ್ರತೆ
ಸಂಗೀತಕ್ಕೆ ನೋವನ್ನು ನಿವಾರಿಸುವ, ನೀಗಿಸುವ ಶಕ್ತಿಯಿದೆ. ಕಿವಿಯಲ್ಲಿನ ನರಗಳು ಮೆದುಳಿಗೆ ಸಂಪರ್ಕ ಹೊಂದಿದ್ದು, ಸಂಗೀತ ಆಲಿಸುತ್ತಿದ್ದರೆ ಮೆದುಳಿನ ನರವ್ಯೂಹ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಏಕಾಗ್ರತೆ ವದ್ಧಿಸುವ ಶಕ್ತಿ ಸಂಗೀತಕ್ಕಿದೆ. ವಿಶೇಷವಾಗಿ ಮಕ್ಕಳು ಓದಿನತ್ತ ಗಮನಹರಿಸಲು ಓದಿಗಿಂತ ಮೊದಲು ಇಂಪಾದ ಸಂಗೀತವನ್ನು ಕೇಳಬೇಕು. ಅನಂತರ ಓದಿನತ್ತ ಗಮನಹರಿಸಿದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.

ಮಾನಸಿಕ ಅಸ್ವಸ್ಥತೆ ಚಿಕಿತ್ಸೆಯಲ್ಲಿ ಮ್ಯೂಸಿಕ್‌
ಈ ಚಿಕಿತ್ಸೆಯನ್ನು ಇತರ ಚಿಕಿತ್ಸಾ ವಿಧಾನಗಳಿಗೆ ಪೂರಕವಾಗಿ ಮಾನಸಿಕ ಅಸ್ವಸ್ಥತೆ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಒಬ್ಬ ವೃತ್ತಿಪರ ಸಂಗೀತ ಚಿಕಿತ್ಸಕ, ಸಮರ್ಪಕ ಸಂಗೀತ ಸಾಧನ ಆಯ್ಕೆ ಮಾಡುತ್ತಾರೆ. ವೈಯಕ್ತಿಕ ಹಾಗೂ ಸಾಂಸ್ಕೃತಿಕ ನಡತೆ ನೋಡಿಕೊಂಡು ಪರಿಣಾಮಕಾರಿ ಸಂಗೀತ ಚಿಕಿತ್ಸೆ ಆಯ್ಕೆ ಮಾಡುತ್ತಾರೆ. ಈ ಚಿಕಿತ್ಸೆ ಮುಖ್ಯವಾಗಿ ಆಟಿಸಂ, ಡೌನ್ಸ್‌ ಸಿಂಡ್ರೋಮ್‌, ಆತಂಕ, ಖನ್ನತೆ ಇನ್ನಿತರ ಸಮಸ್ಯೆಗಳನ್ನು ಹತೋಟಿಗೆ ತರಲು ಸಹಕರಿಸುತ್ತದೆ.

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next