Advertisement

ಸುಳ್ಳು ಸುದ್ದಿ ಹಬ್ಬಿಸಿದ ಸೋಷಿಯಲ್ ಮೀಡಿಯಾಗಳ ವಿರುದ್ಧ ಅರ್ಜುನ್ ಜನ್ಯ ಗರಂ

01:27 PM Apr 17, 2021 | Team Udayavani |

ಬೆಂಗಳೂರು : ತಮ್ಮ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಸೋಷಿಯಲ್ ಮೀಡಿಯಾಗಳ ( ಯುಟ್ಯೂಬ್ ವಾಹಿನಿಗಳ) ವಿರುದ್ಧ ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಗರಂ ಆಗಿದ್ದಾರೆ. ಹಾಗೂ ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಅರ್ಜುನ್ ಜನ್ಯ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಈ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯನ್ನು ಕೆಲವು ಯುಟ್ಯೂಬ್ ಹಾಗೂ ವೆಬ್‍ ಸೈಟ್‍ಗಳು ವಿಡಂಭನೆ ಮಾಡಿದ್ದವು. ಅರ್ಜುನ್ ಜನ್ಯ ಹಾಗೂ ಅವರ ಕುಟುಂಬದ ಬಗ್ಗೆ ತಪ್ಪು ಮಾಹಿತಿ ಬಿತ್ತರಿಸಿದ್ದವು. ಇವುಗಳನ್ನು ಗಮನಿಸಿರುವ ಜನ್ಯ, ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶುಕ್ರವಾರ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಅರ್ಜುನ್ ಪತ್ರ :

‘ಎಲ್ಲರಿಗೂ ನಿಮ್ಮ ಅರ್ಜುನ್ ಜನ್ಯ ಮಾಡುವ ನಮಸ್ಕಾರಗಳು ಈ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಯೂಟ್ಯೂಬ್ ಚಾನೆಲ್‌ಗಳು ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ, ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ಸರಿ ಹೋಗಬಹುದು ಎಂದು ನಾನು ಸಮಾಧಾನವಾಗಿದ್ದೆ, ಆದರೆ ದಿನೆ ದಿನೇ ಇದು ಹೆಚ್ಚಾಗುತ್ತಿದೆ.

Advertisement

ಜನರಲ್ಲಿ ನಾನು ವಿನಂತಿಸಿಕೊಳ್ಳುವುದೇನೆಂದರೆ ಈ ಕೆಲವು ಯೂಟ್ಯೂಬ್ ಚಾನಲ್‌ಗಳು ನೀಡಿದ ಮಾಹಿತಿಗಳು ಅಪ್ಪಟ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ನನಗೆ ಕೋವಿಡ್ ಬಂದು ಗುಣಮುಖನಾಗಿ ವೈದ್ಯರ ಸಲಹೆಯಂತೆ ಈಗ ಮನೆಯಲ್ಲಿಯೇ ಹತ್ತು ದಿನದ ಐಸೋಲೇಶನ್‌ನಲ್ಲಿದ್ದೇನೆ. ಇದರಲ್ಲಿ ಈಗಾಗಲೇ ಆರು ದಿನಗಳು ಪೂರ್ಣಗೊಂಡಿವೆ, ಇನ್ನು ಉಳಿದ ನಾಲ್ಕೈದು ದಿನಗಳು ಕಳೆದ ನಂತರ ನನ್ನ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತೇನೆ. ಮತ್ತೊಮ್ಮೆ ಈ ರೀತಿಯ ಹೀನ ಕಾರ್ಯಗಳನ್ನು ಮಾಡುತ್ತಿರುವ ಯೂಟ್ಯೂಬ್‌ ಚಾನಲ್‌ಗಳನ್ನು ವಿನಂತಿಸಿಕೊಳ್ಳುತ್ತಿದ್ದೇನೆ.

ಇನ್ನು ಮುಂದಾದರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸದಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ. ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲ ಸಾಕ್ಷಿಗಳನ್ನು ಸೈಬರ್ ಪೊಲೀಸ್‌ಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವಿಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next