Advertisement

ಮುಷ್ತಾಕ್‌ ಅಲಿ: ಕರ್ನಾಟಕಕ್ಕೆ ಬೇಕಿದೆ ಅದೃಷ್ಟದ ಬಲ

11:20 PM Nov 21, 2021 | Team Udayavani |

ಹೊಸದಿಲ್ಲಿ: ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಕರ್ನಾಟಕ ಮತ್ತು ಹಾಲಿ ಚಾಂಪಿಯನ್‌ ತಮಿಳುನಾಡು ತಂಡಗಳು 2021-22ರ “ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20′ ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ. ಸೋಮವಾರ ಇಲ್ಲಿನ “ಅರುಣ್‌ ಜೇಟ್ಲಿ ಕ್ರೀಡಾಂಗಣ’ದಲ್ಲಿ ಈ ಬಹು ನಿರೀಕ್ಷೆಯ ಪಂದ್ಯ ನಡೆಯಲಿದೆ.

Advertisement

ಫೈನಲ್‌ನಲ್ಲಿ ಕರ್ನಾಟಕ ಅಜೇಯ
ಕರ್ನಾಟಕ ಈ ಟೂರ್ನಿಯಲ್ಲಿ ಈ ವರೆಗೆ ಎರಡು ಬಾರಿ ಫೈನಲ್‌ ಪ್ರವೇಶಿಸಿದ್ದು, ಎರಡು ಬಾರಿಯೂ ಚಾಂಪಿಯನ್‌ ಆಗಿ ಹೊರಹೊಮ್ಮಿದ ಹೆಗ್ಗಳಿಕೆ ಹೊಂದಿದೆ. ಅದರಂತೆ ಒಂದು ಫೈನಲ್‌ನಲ್ಲಿ ತಮಿಳುನಾಡನ್ನೇ ಮಣಿಸಿದೆ.

ಇನ್ನೊಂದೆಡೆ ತಮಿಳುನಾಡಿಗೆ ಇದು ಸತತ ಹ್ಯಾಟ್ರಿಕ್‌ ಫೈನಲ್‌ ಆಗಿದೆ. ಕಳೆದ ಬಾರಿ ಬರೋಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದೀಗ 2019-20ರ ಕರ್ನಾಟಕ ವಿರುದ್ಧದ ಫೈನಲ್‌ ಸೋಲಿಗೆ ಸೇಡು ತೀರಿಸಲು ಕಾದಿದೆ.

ಪಾಂಡೆಗೆ ಅದೃಷ್ಟದ ಬಲ
ಸ್ಟಾರ್‌ ಆಟಗಾರರ ಅನುಪಸ್ಥಿತಿಯ ನಡುವೆ ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ಮನೀಷ್‌ ಪಾಂಡೆ ಬಳಗ ಫೈನಲ್‌ ಪ್ರವೇಶಿಸಿದ್ದೇ ಒಂದು ಅಚ್ಚರಿ. ಬಲಿಷ್ಠ ತಂಡವಾದ ಬಂಗಾಲ ವಿರುದ್ಧದ ರೋಚಕ ಕ್ವಾರ್ಟರ್‌ ಫೈನಲ್‌ ಕದನವನ್ನು ಸೂಪರ್‌ ಓವರ್‌ನಲ್ಲಿ ಗೆದ್ದದ್ದು, ಕೂಟದ ಅಜೇಯ ತಂಡವಾಗಿದ್ದ ವಿದರ್ಭ ವಿರುದ್ಧ ಸೆಮಿಫೈನಲ್‌ನಲ್ಲಿ ರೋಚಕ 4 ರನ್‌ ಗೆಲುವು ಸಾಧಿಸಿದ್ದನ್ನು ಗಮಿನಿಸುವಾಗ ಅದೃಷ್ಟ ಕರ್ನಾಟಕದ ಪರ ಇದೆ ಎನ್ನಲಡ್ಡಿಯಿಲ್ಲ. ಫೈನಲ್‌ನಲ್ಲಿಯೂ ಈ ಅದೃಷ್ಟ ಮನೀಷ್‌ ಪಾಂಡೆ ಬಳಗಕ್ಕೆ ಒಲಿಯಬೇಕಿದೆ.

ಬೌಲಿಂಗ್‌ನಲ್ಲಿ ಸುಧಾರಣೆ ಅಗತ್ಯ
ಕರ್ನಾಟಕದ ಬೌಲಿಂಗ್‌ ಅಷ್ಟೇನೂ ಘಾತಕವಾಗಿ ಗೋಚರಿಸುತಿಲ್ಲ. ತಂಡ 170ರ ಗಡಿ ದಾಟಿದರೂ ಪಂದ್ಯವನ್ನು ಗೆಲ್ಲಲು ಹರಸಾಹಸ ಪಡುವಂತಹ ಸ್ಥಿತಿ ಎದ್ದುರಾಗುತ್ತಿದೆ. ಆದ್ದರಿಂದ ಬೌಲಿಂಗ್‌ ವಿಭಾಗದಲ್ಲಿ ಕ್ಷಿಪ್ರ ಸುಧಾರಣೆ ಅತ್ಯಗತ್ಯ. ಹಾಗೆಯೇ ಕರ್ನಾಟಕದ ಫೀಲ್ಡಿಂಗ್‌ ಕೂಡ ಕಳಪೆಯಾಗಿದೆ. ಇಲ್ಲಿಯೂ ದೊಡ್ಡ ಮಟ್ಟದ ಸುಧಾರಣೆ ಆಗಬೇಕಿದೆ.

Advertisement

ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ಮನೀಷ್‌ ಪಾಂಡೆ, ಆರಂಭಿಕ ಆಟಗಾರ ರೋಹನ್‌ ಕದಂ, ಕರುಣ್‌ ನಾಯರ್‌, ಅಭಿನವ್‌ ಮನೋಹರ್‌ ಉತ್ತಮ ಲಯದಲ್ಲಿರುವುದರಿಂದ ತಂಡದ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಗದು.

ತಮಿಳುನಾಡು ಬಲಿಷ್ಠ
ಸೆಮಿಫೈನಲ್‌ನಲ್ಲಿ ಹೈದರಾಬಾದ್‌ ತಂಡವನ್ನು 90ಕ್ಕೆ ಆಲೌಟ್‌ ಮಾಡಿ 8 ವಿಕೆಟ್‌ಗಳಿಂದ ಗೆದ್ದ ಆತ್ಮವಿಶ್ವಾಸದಲ್ಲಿರುವ ವಿಜಯ್‌ ಶಂಕರ್‌ ಸಾರಥ್ಯದ ತಮಿಳುನಾಡು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಸಮರ್ಥವಾಗಿದೆ. ವಿಜಯ್‌ ಶಂಕರ್‌ ಸೇರಿದಂತೆ ಶಾರೂಕ್‌ ಖಾನ್‌, ಎನ್‌. ಜಗದೀಶನ್‌, ಸಾಯಿ ಸುದರ್ಶನ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಬೌಲಿಂಗ್‌ನಲ್ಲಿ ಸಂದೀಪ್‌ ವಾರಿಯರ್‌, ಅನುಭವಿ ಮುರುಗನ್‌ ಅಶ್ವಿ‌ನ್‌, ಶ್ರವಣ ಕುಮಾರ್‌ ಕೂಡ ಘಾತಕವಾಗಿ ಪರಿಣಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next