ಹೊಸದಿಲ್ಲಿ : “ಒಂದೊಮ್ಮೆ ಆಯ್ಕೆಯ ಅವಕಾಶ ಕೊಟ್ಟರೆ ಕಾಶ್ಮೀರಿಗಳು ಸ್ವಾತಂತ್ರ್ಯವನ್ನೇ ಬಯಸುತ್ತಾರೆ ಎಂದು ಈ ಹಿಂದೆ ಪಾಕ್ ಸರ್ವಾಧಿಕಾರಿ ಪರ್ವೇಜ್ ಮುಶರ್ರಫ್ ಹೇಳಿರುವುದು ಸರಿ” ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಅವರು ಭಾರೀ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಸೋಜ್ ಅವರು ಬರೆದಿರುವ “ಕಾಶ್ಮೀರ್ : ಗ್ಲಿಂಪ್‌ಸಸ್ ಆಫ್ ಹಿಸ್ಟರಿ ಆ್ಯಂಡ್ ದ ಸ್ಟೋರಿ ಆಫ್ ಸ್ಟ್ರಗಲ್’ ಎಂಬ ಪುಸ್ತಕ ಮುಂದಿನ ವಾರ ಬಿಡುಗಡೆಯಾಗಲಿದ್ದು ಅದರಲ್ಲಿ ಅವರು “ಸ್ವಾತಂತ್ರ್ಯವೇ ಕಾಶ್ಮೀರಿಗಳ ಮೊದಲ ಆಯ್ಕೆ ಎಂದು ಮುಶರ್ರಫ್ ಸರಿಯಾಗಿಯೇ ಹೇಳಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕಾಶ್ಮೀರಿಗಳು ಪಾಕಿಸ್ಥಾನದ ಜತೆ ಸೇರುವುದನ್ನು ಬಯಸುವುದಿಲ್ಲ; ಅವರ ಮೊದಲ ಆಯ್ಕೆ ಸ್ವಾತಂತ್ರ್ಯ ಎಂದು ಮುಶರ್ರಫ್ ಹೇಳಿದ್ದುದು ಅಂದೂ ಸತ್ಯವಾಗಿತ್ತು; ಇಂದೂ ಸತ್ಯವಾಗಿಯೇ ಉಳಿದಿದೆ. ನಾನು ಕೂಡ ಹಾಗೆಯೇ ಹೇಳುತ್ತೇನೆ; ಆದರೆ ಅದು ಅಸಾಧ್ಯವೆಂದು ನನಗೆ ಗೊತ್ತಿದೆ” ಎಂದು ಸೋಜ್ ಎಎನ್‌ಐ ಜತೆಗೆ ಮಾತನಾಡುತ್ತಾ ಹೇಳಿದರು.
”ಕಾಶ್ಮೀರ ಕುರಿತಾದ ಈ ಮಾತುಗಳನ್ನು ಮುಶರ್ರಫ್ 2007ರಲ್ಲಿ ಉನ್ನತ ಮಟ್ಟ ಪಾಕ್ ಅಧಿಕಾರಿಗಳಿಗೆ ಹೇಳಿದ್ದರು. ಮ್ರಾವಲ್ಲದೆ ಕಾಶ್ಮೀರ ಪ್ರಶ್ನೆಗೆ ಇರುವ ಏಕೈಕ ಪರಿಹಾರವೆಂದರೆ ಕಾಶ್ಮೀರಿಗಳು ಬಯಸುವ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವುದು ಎಂದು ಮುಶರ್ರಫ್ ಪಾಕಿಸ್ಥಾನದ ಉನ್ನತ ಅಧಿಕಾರಿಗಳಿಗೆ ಬಹುತೇಕ ಮನವರಿಕೆ ಮಾಡಿದ್ದರು” ಎಂದು ಸೋಜ್ ಹೇಳಿದರು.
‘ಹೊಸದಿಲ್ಲಿಯಲ್ಲಿನ ಭಾರತ ಸರಕಾರಗಳು ಕಾಶ್ಮೀರ ವಿಷಯದಲ್ಲಿ ಪ್ರಮಾದಗಳನ್ನು ಮಾಡುತ್ತಲೇ ಬಂದಿದ್ದು ಒಟ್ಟು ಪರಿಣಾಮದಲ್ಲಿ ಅವು ಕಾಶ್ಮೀರವನ್ನು ಭಾರತದಿಂದ ದೂರ ಮಾಡಿವೆ’ ಎಂದು ಸೋಜ್ ಹೇಳಿದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ “1953ರಿಂದ ಭಾರತ ಸರಕಾರಗಳು ಕಾಶ್ಮೀರ ಪ್ರಶ್ನೆಗೆ ದೃಢವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿವೆ” ಎಂದು ಸೋಜ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ಸೋಜ್ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು “ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಮಾತುಕತೆಗಾಗಿಯಾದರೂ ಜೀವಂತ ಇಡಬೇಕಿತ್ತು’ ಎಂದಿದ್ದರಲ್ಲದೆ “ಜಮ್ಮು ಕಾಶ್ಮೀರ ಸಮಸ್ಯೆಗೆ ಭಾರತ ಅಲ್ಲ, ಪಾಕಿಸ್ಥಾನವೇ ಹೊಣೆ’ ಎಂದು ಹೇಳಿದ್ದರು.