Advertisement

ನನ್ನ ಬಗ್ಗೆ ನಾಲಿಗೆ ಹರಿಬಿಡುವ ಮುನ್ನ ಎಚ್ಚರಿಕೆ: ಯತ್ನಾಳ್ ವಿರುದ್ಧ ಸಚಿವ ನಿರಾಣಿ ಖಡಕ್ ಮಾತು

11:29 AM Jan 07, 2023 | Team Udayavani |

ವಿಜಯಪುರ: ನಮ್ಮ ತೇಜೋವಧೆ ಮಾಡುತ್ತಿದ್ದರೂ ಮೌನವಾಗಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ, ಸೌಜನ್ಯದಿಂದ ಸುಮ್ಮನಿದ್ದೇವೆ. ತಾಕತ್ತಿದ್ದರೆ ನಾನೂ ಚುನಾವಣೆ ಮಾಡುತ್ತೇನೆ, ನೀನೂ ಚುನಾವಣೆ ಮಾಡು, ನೋಡುತ್ತೇನೆ. ನಿಮ್ಮ ವರ್ತನೆಗೆ ಈ ಬಾರಿ ಜನರೇ ಉತ್ತರ ನೀಡಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಹಿರಂಗ ಸವಾಲು ಎಸೆದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳ ಪ್ರವಚನ ಕೇಳಿ ಕಲ್ಲುಗಳೆ ಬದಲಾಗುತ್ತವೆ. ಆದರೆ ಅವರ ಸನಿಹದಲ್ಲೇ ಇದ್ದ ನೀವಿನ್ನೂ ಬದಲಾಗಿಲ್ಲ ಎಂಬುದು ನೋಡಿದರೆ ನಾವಿನ್ನು ಸುಮ್ಮನಿರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಯತ್ನಾಳ ಹೆಸರು ಎತ್ತದೇ ಎಚ್ಚರಿಸಿದರು.

ಬಿಜೆಪಿ ಪಕ್ಷದಿಂದ ಗೆದ್ದು ಬಂದಿರುವ ನೀವು ಎರಡು ನಾಲಿಗೆ ಇದ್ದವರಂತೆ ಮಾತನಾಡುತ್ತಿದ್ದೀರಿ. ಅರುಣ್ ಸಿಂಗ್ ನಿಮ್ಮನ್ನು ಸೌಜನ್ಯಕ್ಕೆ ಭೇಟಿ ಮಾಡಿದ್ದನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತೀರಿ. ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ನಾನೂ ಸೇರಿದಂತೆ ಯಾರ ಬಗ್ಗೆಯೂ ಇನ್ನು ಹಗುರವಾಗಿ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಎಂದರು.

ಸಮಾಜ ಮತ್ತು ಪಕ್ಷ ನನಗೆ ತಾಯಿ ಸಮಾನ. ಸಮುದಾಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ವರ್ತನೆಗಳನ್ನು ಸೌಜನ್ಯಕ್ಕಾಗಿ ಪ್ರತಿಕ್ರಿಯಿಸದೇ ಮೌನ ವಹಿಸಿದ್ದೇನೆ. ಹೀಗಾಗಿ ನನ್ನ ಬಗ್ಗೆ ನಾಲಿಗೆ ಹರಿಬಿಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಎಚ್ಚರಿಸಿದರು.

ನಿಮ್ಮ ಅತಿರೇಕದ ಮಾತುಗಳಿಗೆ ಈವರೆಗಿನ ನಮ್ಮ ಮೌನ ದೌರ್ಬಲ್ಯವಲ್ಲ. ಇನ್ನು ನಿಮ್ಮ ನಡೆ, ನಾಲಿಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಮಗೆ ಬದ್ದತೆ ಇದೆ. ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿದ್ದನ್ನು ತಾಯಿ ಮೇಲೆ ಆಣೆ ಮಾಡಿದ್ದಾಗಿ ಸಾರ್ವಜನಿಕ ಹೇಳುವುದು ಸೌಜನ್ಯದ ನಡೆಯಲ್ಲ. ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕಲ್ಪಿಸುವ ವಿಷಯದಲ್ಲಿ ನಿಮಗಿಂತಲೂ ಹೆಚ್ಚಿನ ಬದ್ಧತೆ ನಮಗೂ ಇದೆ. ಆದರೆ ನಿಮ್ಮಂತೆ ಬೀದಿಯಲ್ಲಿ ನಿಂತು ಅನ್ಯರ ತೇಜೋವಧೆ ಮಾಡುವುದಿಲ್ಲ ಎಂದರು.

ಇದನ್ನೂ ಓದಿ:ಉಗ್ರರ ದಾಳಿಯಿಂದ ಕುಟುಂಬ,ನೆರೆಹೊರೆಯವರನ್ನು ರಕ್ಷಿಸಿದ ಸಾಕು ನಾಯಿ.!

ಇಷ್ಟಕ್ಕೂ ನನ್ನನ್ನು ಬಚ್ಚಾ ಎಂದು ನನ್ನ ತೇಜೋವಧೆ ಮಾಡುವ ನೀವು, ರಾಜಕಾರಣಕ್ಕೆ ಬರುವ ಮುನ್ನ ನೀವೇನು ಇದ್ದೀರಿ, ಯಾವ ರಸ್ತೆಯಲ್ಲಿ ಇದ್ದಿರಿ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನೂ ಇದೇ ನೆಲದಲ್ಲಿ ಹುಟ್ಟಿದ್ದು, ನಿಮ್ಮನ್ನು ಚನ್ನಾಗಿ ಬಲ್ಲೆ. ನಿಮಗಿಂತಲೂ ಕೆಟ್ಟ ಪದಗಳನ್ನು ಬಳಸಲು ನನಗೂ ತಿಳಿದಿದೆ. ಆದರೆ ಸೌಜನ್ಯದ ಎಲ್ಲೆ ಮೀರಲಾರೆ ಎಂದರು.

ಅಶ್ಲೀಲ ಸಿ.ಡಿ. ಬಗ್ಗೆ ಮಾತನಾಡುವ ಮುನ್ನ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದುದೇಕೆ ಏಕೆ ಎಂಬುದನ್ನು ಹೇಳಲಿ. ಇಂಥ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಸಮಯವಿದೆ, ನನಗೆ ಸಮಯವಿಲ್ಲ. ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವಲ್ಲಿ ನನ್ನ ಆದ್ಯತೆ ನೀಡುತ್ತಿದ್ದೇನೆ, ಅದರ ಬಗ್ಗೆ ಕೇಳಿ ಎಂದರು.

ನಾನು ಕೆಳಹಂತ ಹಾಗೂ ಪರಿಶ್ರಮದಿಂದ ಮೇಲೆ ಬಂದಿದ್ದೇನೆ. ನಾನು ಮಾಡಿದ ಸಾಲವನ್ನು ನಾನೇ ಪಾವತಿಸಿದ್ದೇನೆ. ನನ್ನ ಟ್ರಯಲ್ ರೆಕಾರ್ಡ್ ನೋಡಿಯೇ ಬ್ಯಾಂಕ್‍ಗಳು ನನಗೆ ಸಾಲ ನೀಡುತ್ತವೆ ಎಂದರು.

ನನ್ನ ಸ್ವಂತ ಪರಿಶ್ರಮದಿಂದ 21 ಫ್ಯಾಕ್ಟರಿ ಮೂಲಕ 72 ಸಾವಿರ ಜನಕ್ಕೆ ನಾನೂ ಉದ್ಯೋಗ ಕೊಟ್ಟಿದ್ದೇನೆ. ಮುಚ್ಚುವ ಯೋಜನೆಗೆ ಕೈ ಹಾಕುವುದಿಲ್ಲ, ಕೈ ಹಾಕಿದ ಯೋಜನೆಗಳನ್ನು ಮುಚ್ಚಿಲ್ಲ. ಇದು ನನ್ನ ಪರಿಶ್ರಮ ಹಾಗೂ ಸಾಧನೆ ಎಂದರು.

ನಿಮ್ಮಂತೆ ಹಾಲಿನ ಡೇರಿ ಮಾಡಿ ಶೇರುದಾರರಿಗೆ ಟೋಪಿ ಹಾಕಿಲ್ಲ, ವಸತಿ ಶಾಲೆಗಳನ್ನು ಕಟ್ಟಿ ಯಾರದೋ ಕೊರಳಿಗೆ ಕಟ್ಟಿ ಓಡಿ ಹೋಗಿಲ್ಲ ಎಂದು ಕುಟುಕಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶಟ್ಟಿ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಭೀಮಾಶಂಕರ ಹದನೂರು ಸೇರಿದಂತೆ ಇತರರು ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next