Advertisement

ಮುಂದಿನ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು: ಸಚಿವ ಮುರುಗೇಶ ನಿರಾಣಿ

12:46 PM Jul 24, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ 120 ಜನ ಬಿಜೆಪಿ ಶಾಸಕರಿದ್ದೇವೆ. ಇದರಲ್ಲಿ ಒಂಭತ್ತು ಬಾರಿ ಆಯ್ಕೆಯಾದ ಉಮೇಶ ಕತ್ತಿ ಅವರಿಂದ ಹಿಡಿದು ಮೊದಲ ಸಲ ಆಯ್ಕೆಯಾದ ಶಾಸಕರು ಸೇರಿ ಎಲ್ಲರೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಆದರೆ, ಯಾರು ಮುಖ್ಯಮಂತ್ರಿಗಳು ಆಗಬೇಕೆಂಬುವುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಭೂ ಮತ್ತು ಗಣಿ ವಿಜ್ಞಾನ ಮತ್ತು ‌ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮರುಗೇಶ ನಿರಾಣಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಮತ ನೀಡಿದವರು ಜನತೆ.‌ ಅವರು ಸೇವೆ ಮಾಡಲು ನಾವು ಇದ್ದೇವೆ. ನನಗೆ ಕಲಬುರಗಿ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಜನರ ಸಮಸ್ಯೆ ಆಲಿಸಲು ಬಂದಿದ್ದೇನೆ ಎಂದರು.

ಬಿ.ಎಸ್.ಯಡಿಯೂರಪ್ಪನವರ ಅಧಿಕಾರಾವಧಿ‌ ಎರಡು ವರ್ಷ ಅಂತಾ ಮೊದಲೇ ನಿರ್ಧಾರವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ.‌ ಹಾಗೆ ನನ್ನನ್ನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಧ್ಯಮಗಳೇ ಸೃಷ್ಟಿಸಿವೆ. ನಾನು ಲಾಬಿ ಮೂಲಕ ಮುಖ್ಯಮಂತ್ರಿ ಮಾಡಿ ಎಂದು ಕೇಳಲು ಹೋಗುವುದಿಲ್ಲ. ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದು, ಯಾವ ಮಾನದಂಡದ‌ ಮೇಲೆ ಅವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕೂಡ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದರು. ‌

ಇದನ್ನೂ ಓದಿ:ಯಡಿಯೂರಪ್ಪ ಮುಂದುವರಿಯಲಿ, ಬದಲಾದರೆ ಈಶ್ವರಪ್ಪಗೆ ಅವಕಾಶ ಕೊಡಿ: ಕುರುಬ ಸಮಾಜ ಆಗ್ರಹ

ನಾನು ಪ್ರತಿ ತಿಂಗಳು ನಾನು ದೇವಸ್ಥಾನಗಳಿಗೆ ಹೋಗುತ್ತೇನೆ. ಈ ಹಿಂದೆ ಶ್ರೀಶೈಲ, ತಿರುಪತಿಗೆ ಹೋಗಿದ್ದೆ. ಹಾಗೆ ವಾರಣಾಸಿಗೂ ಹೋಗಿದ್ದೆ. ಮುಂದಿನ ತಿಂಗಳು ಮತ್ತೊಂದು ಕ್ಷೇತ್ರಕ್ಕೆ ಹೋಗುತ್ತೇನೆ. ನಾನು ಸಮಾಧಾನಕ್ಕಾಗಿ ದೇವಾಲಯಗಳಿಗೆ ಹೋಗುತ್ತೇನೆ.‌ ಇದರಲ್ಲಿ ವಿಶೇಷವೇನು ಇಲ್ಲ ಸ್ಪಷ್ಟನೆ ನೀಡಿದರು.

Advertisement

ಪ್ರವಾಹ ಪರಿಸ್ಥಿತಿ ಮೇಲೆ ನಿಗಾ: ರಾಜ್ಯದಲ್ಲಿ ಪ್ರವಾಹ ಎದುರಿಸಲು ಸರ್ಕಾರದ ಅಗತ್ಯ ಸಿದ್ಧತೆಯಲ್ಲಿ ಇದೆ. ಸದ್ಯ ಕೆಲ ಭಾಗಗಳಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿ ಕಂಡುಬರುತ್ತದೆ. ಹೀಗಾಗಿ ಪ್ರವಾಹ ಮತ್ತು ಜಲಾಶಯಗಳ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದರು.

ಮಹಾರಾಷ್ಟ್ರದಿಂದ ಬಿಡುಗಡೆಯಾಗುವ ನೀರಿನ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರ ಜಲಾಶಯಗಳು ಹಾಗೂ ನಮ್ಮ ರಾಜ್ಯದ ಜಲಾಶಯಗಳ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ. ಈಗಾಗಲೇ ಮಳೆಯಿಂದ ಹಾನಿಯಾದ ಬೆಳೆ ಸಮೀಕ್ಷೆಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಲಾಗುತ್ತದೆ. ಕಳಪೆ ಕಾಮಗಾರಿಯಿಂದ ನಾಲೆಗಳು ಹಾನಿಯಾಗಿದ್ದರೆ, ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next