Advertisement

ವೈಯಕ್ತಿಕ ಸಮಸ್ಯೆಗಳನ್ನು ಮೊದಲು ಹೇಳುವುದೇ ಬೊಮ್ಮಾಯಿಗೆ: ಸಚಿವ ನಿರಾಣಿ

01:21 PM Dec 26, 2021 | Team Udayavani |

ಬಾಗಲಕೋಟೆ: ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಮುಂದಿನ ಸಿಎಂ ನಾನೇ ಎಂದೂ ಎಲ್ಲೂ ಹೇಳಿಲ್ಲ. 2023ರವರೆಗೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ನನ್ನ ಹಿರಿಯ ಅಣ್ಣನಂತಿದ್ದಾರೆ. ಅವರಿಗೂ ನನಗೂ 30 ವರ್ಷಗಳ ಕುಟುಂಬದ ಸಂಬಂಧವಿದೆ. ಅವರೀಗ ಮುಖ್ಯಮಂತ್ರಿ ಆಗಿದ್ದಾರೆ. ನಾನು ಕಾರ್ಖಾನೆ ಕಟ್ಟುವುದಿರಲಿ, ನನ್ನ ವೈಯಕ್ತಿಕ
ಸಮಸ್ಯೆಗಳು ಏನೇ ಇದ್ರೂ ಸಹ ಮೊಟ್ಟ ಮೊದಲ ಬಾರಿಗೆ ನಾನು ಹೇಳುವುದೇ ಬೊಮ್ಮಾಯಿ ಅವರಿಗೆ. ನಾನು ಹುಬ್ಬಳ್ಳಿಗೆ ಹೋದರೆ ಅವರ ಮನೆಗೆ ಹೋಗಿ ಚಹಾ ಕುಡಿಯದೇ ಮುಂದೆ ಹೋಗಲ್ಲ. ಅವರು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬರುತ್ತಾರೆ.

Advertisement

ನನ್ನ ಮತ್ತು ಅವರ ಮಧ್ಯೆ ಒಳ್ಳೆಯ ಸಂಬಂಧ ಇದೆ. ಹೀಗಾಗಿ ಕಾಣದ ಶಕ್ತಿಗಳು ಈ ಸಂಬಂಧ ದೂರ ಮಾಡುವ ಕೆಲಸ ಮಾಡುತ್ತಿರಬಹುದು. ಆ ಕಾಣದ ಶಕ್ತಿಗಳು ನಮ್ಮ ಪಕ್ಷದಲ್ಲಿವೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.  ನಾನು ಈಗಾಗಲೇ ಎರಡು ಬಾರಿ ಆ ಕುರಿತು ಹೇಳಿದ್ದೇನೆ ಎಂದರು.

ಈಶ್ವರಪ್ಪ ಅವರು ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡಿದ ಕುರಿತು ನಾನು ಈಗಾಗಲೇ ಹೇಳಿದ್ದೇನೆ. ನಾನು ಎಲ್ಲೂ ಸಿಎಂ ಆಗುತ್ತೇನೆ ಎಂದು ಸ್ನೇಹಿತರ ಬಳಿ ಅಥವಾ ಪಕ್ಷದ ವೇದಿಕೆಯಲ್ಲೂ  ಹೇಳಿಲ್ಲ. ನಾನು ಸಿಎಂ ಆಕಾಂಕ್ಷಿಯಲ್ಲ. 2023ರವರೆಗೆ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶಿಗ್ಗಾವಿಯಲ್ಲಿ ಹೇಳಿದ್ದೇನೆ.  ಭವಿಷ್ಯದಲ್ಲಿ ಅವರಿಗೆ ಕೇಂದ್ರದಲ್ಲೂ ಉನ್ನತ ಸ್ಥಾನ ಸಿಗುತ್ತದೆ ಎಂದು ಹೇಳಿರುವೆ. 2023ರೊಳಗೆ ಸಿಗುತ್ತದೆ ಎಂದು ಹೇಳಿದ್ದೇನಾ? ಅಂತಹ ಮಾತು
ನನ್ನಿಂದ ಬಂದಿದ್ದರೆ ಹೇಳಬೇಕು. ನಾನು ಯಾವತ್ತೂ ಹೇಳಿಲ್ಲ. ಮಾಧ್ಯಮದವರು ದಯವಿಟ್ಟು ಬೇರೆಯವರ ಮನಸ್ಸಿಗೆ ನೋವು ಮಾಡಿ, ನೀವು ಆನಂದಪಡಬೇಡಿ ಎಂದು ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರ ವೈರಾಗ್ಯದ ಭಾಷಣದ ಕುರಿತು ಅವರನ್ನೇ ಕೇಳಿ. ನನಗೆ ಕೇಳಬೇಡಿ. ಸಿಎಂ ಬದಲಾವಣೆ ಆಗಲ್ಲ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ದೂರದೃಷ್ಠಿ ಇರುವವರು. ಅವರ ನೇತೃತ್ವದಲ್ಲಿ ಹಾಗೂ ಪಕ್ಷ ಮುಂದೆ ಯಾರ ನೇತೃತ್ವದಲ್ಲಿ ಹೇಳುತ್ತದೆಯೋ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು. ಸಚಿವ ಸಂಪುಟ ಪುನಾರಚನೆ ಕುರಿತು ನನಗೆ ಗೊತ್ತಿಲ್ಲ. ಸಿಎಂಗೆ ಪರಮಾಧಿಕಾರ ಇರೋದರಿಂದ ರಾಜ್ಯ ಮತ್ತು ರಾಷ್ಟ್ರ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವಾಗ ಮಾಡಬೇಕು, ಏನು ಮಾಡಬೇಕು ಎಂದು ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಮುಖ್ಯಮಂತ್ರಿ ಬೊಮ್ಮಾಯಿ ಚಿಕಿತ್ಸೆಗಾಗಿ ಹೊರ ದೇಶಕ್ಕೆ ಹೋಗುತ್ತಾರೆ ಎಂದು ಹೇಳಿದ್ದು ಯಾರು. ಈ ಬಗ್ಗೆ ಅವರು ಹೇಳಿದ್ದಾರಾ ? ನಾನು ಹೇಳಿದ್ದೇನಾ?  ನನಗೆ ಈಗಲೂ ಕಾಲು ನೋವು ಇದೆ. ಕೆಲವು ಬಾರಿ ಬಡಗಿ ಹಿಡಿದು ಹೋಗುತ್ತೇನೆ. ಹಾಗಂತ ಅಮೆರಿಕಕ್ಕೆ ಹೋಗುತ್ತೇನಾ ಎಂದು ಪ್ರಶ್ನಿಸಿದರು.

ಎಂಇಎಸ್‌ ವಿರುದ್ಧ ಡಿ.31ರಂದು ಬಂದ್‌ಗೆ ಕರೆ ನೀಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಂಇಎಸ್‌ ಬಗ್ಗೆ ಎರಡೂ ಸದನದಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದೆ. ಇದಕ್ಕೆ ವಿರೋಧ ಪಕ್ಷದ ನಾಯಕರು, ಆ ಪಕ್ಷಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಕಠಿಣ ಕಾನೂನು ಬಂದಿರುವುದರಿಂದ ಮುಂದೆ ಆ ರೀತಿಯ ಘಟನೆಗಳು ಆಗುವುದಿಲ್ಲ. ಕಾನೂನಿನ ಪ್ರಕಾರ ಎಲ್ಲ ನಿಯಂತ್ರಣ ಮಾಡಲು ಸಾಧ್ಯವಿದೆ. ಬಂದ್‌ ಬಗ್ಗೆ ನಮ್ಮ ಪಕ್ಷದ ಹಿರಿಯರು, ಮುಖ್ಯಮಂತ್ರಿಗಳು ಆ ಕಡೆ ಗಮನ ಹರಿಸುತ್ತಾರೆ ಎಂದು ತಿಳಿಸಿದರು. ಶಾಸಕ ಯತ್ನಾಳ ಟೀಕೆಗೆ ನಾನು ಉತ್ತರ ಕೊಡುವುದಿಲ್ಲ. ಕೆಲವು ದೊಡ್ಡವರ ಬಗ್ಗೆ ಪ್ರತಿಕ್ರಿಯೆ ಮಾಡುವುದಿಲ್ಲ. ಅವರು ನನಗಿಂತ ದೊಡ್ಡವರು ಎಂದಷ್ಟೇ ಹೇಳಿದರು.

Advertisement

ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಲಿಲ್ಲ , ಬೇಸರವಿದೆ
ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕದ ಬಗ್ಗೆ ಸುದೀರ್ಘ‌ ಚರ್ಚೆ ಆಗಲಿಲ್ಲ ಎಂಬ ಬೇಸರ ನನಗೂ ಇದೆ. ಸದನದಲ್ಲಿ ಮೂರು ದಿನ ಈ ಭಾಗದ ಬಗ್ಗೆ ಚರ್ಚೆಯ ವಿಷಯ ಇತ್ತು.
ವಿರೋಧ ಪಕ್ಷಗಳು ಸಹಕಾರ ನೀಡದೇ ಇರುವುದರಿಂದ ಸದನದ ಸಮಯ ವ್ಯರ್ಥ್ಯವಾಯಿತು. ಈ ಬಗ್ಗೆ ಸಚಿವನಾಗಿ ನನಗೂ ಬೇಸರವಿದೆ. ವಿರೋಧ ಪಕ್ಷಗಳಿಗೆ ವಿನಂತಿ ಮಾಡುವೆ. ಅಜೆಂಡಾ ಪ್ರಕಾರ ಸದನ ನಡೆಯಲು ಸಹಕಾರ ನೀಡಬೇಕು. ಮುಂದಿನ ಬಜೆಟ್‌ ಅಧಿವೇಶನದಲ್ಲಿ ಉತ್ತರಕರ್ನಾಟಕದ ಬಗ್ಗೆ ಚರ್ಚೆ ನಡೆಸಲಾಗುವುದು. ಆಡಳಿತ ಪಕ್ಷ- ವಿರೋಧ ಪಕ್ಷಗಳು ಆರೋಪ ಮಾಡುವುದು ಬೇಡ. ಇದರಿಂದಲೇ ನಾವು ಹಿಂದುಳಿಯಲು ಕಾರಣ. ಆಲಮಟ್ಟಿ ಡ್ಯಾಂಗೆ ಭೂಮಿಪೂಜೆ ಮಾಡಿ 55 ವರ್ಷಗಳೇ ಮುಗಿದು ಹೋಗಿವೆ. ಕಾಮಗಾರಿ ವೇಗ ಪಡೆದಿದ್ದು
20 ವರ್ಷಗಳಲ್ಲಿ. ಹಿಂದೆ 40 ವರ್ಷ ಸಿದ್ದರಾಮಯ್ಯ ಅವರ ಪಕ್ಷವೇ ಇತ್ತು. ಈಗ  ನಾವು ಆರೋಪ ಮಾಡುವುದಿಲ್ಲ. ಸಿದ್ದರಾಮಯ್ಯ ಹಿರಿಯರು. ರಾಜ್ಯದ ಸಂಪೂರ್ಣ ಮಾಹಿತಿ ಇದೆ. ಅವರು ಸಲಹೆ ಕೊಡಲಿ. ನಮ್ಮ ಸರ್ಕಾರ ಅನುಷ್ಠಾನಗೊಳಿಸಲು ಪ್ರಯತ್ನ ಮಾಡುತ್ತದೆ.

∙ಮುರುಗೇಶ ನಿರಾಣಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next