Advertisement

ಮುರುಘಾ ಸ್ವಾಮೀಜಿ ಕೇಸ್‌: ಹೈಕೋರ್ಟ್‌ ನಿಗಾದಲ್ಲಿ ತನಿಖೆ ನಡೆಯಲಿ

08:27 PM Sep 01, 2022 | Team Udayavani |

ಬೆಂಗಳೂರು: ಚಿತ್ರದುರ್ಗದ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಪೊಲೀಸ್‌ ತನಿಖೆ ಹೈಕೋರ್ಟ್‌ ನಿಗಾದಲ್ಲಿ ನಡೆಯಬೇಕು ಎಂಬ ಕೂಗು ಎದ್ದಿದೆ.

Advertisement

ಈ ಕುರಿತು ಬೆಂಗಳೂರಿನ ಕೆಲ ವಕೀಲರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಲಿಖೀತ ಮನವಿ ಸಲ್ಲಿಸಿದ್ದು, ಪ್ರಕರಣದ ತನಿಖೆ ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಡೆಯುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ವಕೀಲರಾದ ಸಿದ್ಧಾರ್ಥ್ ಭೂಪತಿ, ಶ್ರೀರಾಮ್‌ ಟಿ. ನಾಯಕ್‌, ಬಿ.ಎಸ್‌. ಗಣೇಶ್‌ ಪ್ರಸಾದ್‌, ವಿ. ನಾಗೇಶ್‌ ಹಾಗೂ ಕೆ.ಎ ಪೊನ್ನಣ್ಣ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಗುರುವಾರ ಲಿಖಿತ ಮನವಿ ಸಲ್ಲಿಸಿದ್ದಾರೆ.

ಮುರುಘಾ ಶರಣರು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲಿಸರು ಇನ್ನೂ ಅವರನ್ನು ವಿಚಾರಣೆಗೆ ಕರೆದಿಲ್ಲ, ವಶಕ್ಕೆ ಪಡೆದಿಲ್ಲ. ಈ ಮಧ್ಯೆ, ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಠಕ್ಕೆ ಹೋಗಿ ಸ್ವಾಮೀಜಿಯನ್ನು ಭೇಟಿ ಮಾಡಿ ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆ ನಿಂತಿದ್ದಾರೆ. ಜೊತೆಗೆ, ರಾಜ್ಯದ ಗೃಹ ಸಚಿವರು “ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸರ್ಕಾರ ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿ ರಕ್ಷಣೆಗೆ ನಿಂತಿರುವುದು ಕಂಡು ಬರುತ್ತಿದೆ ಎಂದು ವಕೀಲರು ದೂರಿದ್ದಾರೆ.

ಆದ್ದರಿಂದ, ಈ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವ ಸಾಧ್ಯತೆ ಇಲ್ಲದಿರುವ ಕಾರಣ ಕೂಡಲೇ ಹೈಕೋರ್ಟ್‌ ಮಧ್ಯಪ್ರವೇಶ ಮಾಡಬೇಕು ಹಾಗೂ  ಮೇಲ್ವಿಚಾರಣೆಯಲ್ಲಿ ಇದರ ತನಿಖೆ ನಡೆಯುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಮುರುಘಾ ಶರಣರು ಮುರುಘಾ ಮಠದ ಹೈಸ್ಕೂಲ್‌ನಲ್ಲಿರುವ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 16 ವರ್ಷದ  ಬಾಲಕಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15ರ ಬಾಲಕಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕಳ ನೀಡಿದ್ದಾರೆ. ಈ ಸಂಬಂಧ ಎಫ್ಐಆರ್‌ ದಾಖಲಾಗಿದ್ದರೂ ಪೊಲೀಸರ ತನಿಖೆ ಸಂಪೂರ್ಣ ಲೋಪಗಳಿಂದ ಕೂಡಿದೆ ಎಂದು ವಕೀಲರು ಮನವಿಯಲ್ಲಿ ಅಕ್ಷೇಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next