Advertisement

ಮುರುಘಾ ಮಠದ ಸೊಬಗು ಪ್ರವಾಸಿಗರ ಬೆರಗು

05:57 PM Aug 16, 2022 | Team Udayavani |

ನಾಡಿನ ಮಠ ಪರಂಪರೆಗಳಲ್ಲಿ ಅಗ್ರ ಸ್ಥಾನದಲ್ಲಿರುವ ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠ ದಿನೇ-ದಿನೇ ಭಕ್ತರ ಜೊತೆಗೆ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗುತ್ತಿದೆ.

Advertisement

ಧಾರ್ಮಿಕ ನೇತೃತ್ವದ ಜೊತೆ ಜೊತೆಗೆ ಡಾ|ಶ್ರೀ ಶಿವಮೂರ್ತಿ ಮುರುಘಾ ಶರಣರು, ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಕ್ಕೆ ತರುತ್ತಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಕೋಟೆಯ ವೀಕ್ಷಣೆಗೆ ಬರುವ ಪ್ರವಾಸಿಗರು ಮುರುಘಾ ಮಠದ ಶ್ರೀಗಳ ಆಶೀರ್ವಾದ ಹಾಗೂ ಅದರ ಸೊಬಗ ಸವಿಯುವುದನ್ನು ಮರೆಯದಂತೆ ಮಠ ರೂಪುಗೊಂಡಿದೆ. ಶ್ರೀಗಳು ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುವ ವೇಳೆ ಉತ್ತಮ ಸಂಗತಿಗಳನ್ನು ಪಟ್ಟಿ ಮಾಡಿಕೊಂಡು ಬಂದು ಇಲ್ಲಿ ಅಳವಡಿಸುವ ಮೂಲಕ ಮಧ್ಯ ಕರ್ನಾಟಕದಲ್ಲಿರುವ ಹೆಮ್ಮೆಯ ಮುರುಘಾ ಮಠ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ.

ಮುರುಘಾ ಶ್ರೀ ಮ್ಯೂಸಿಯಂ: ಮುರುಘಾ ಶ್ರೀಗಳ ವಿಶಿಷ್ಟ ಆಲೋಚನೆಯ ಫಲವಾಗಿ ದೇಶದಲ್ಲೇ ಅತ್ಯುತ್ತಮ ಎನ್ನಿಸುವಂತಹ ವಸ್ತು ಸಂಗ್ರಹಾಲಯ ಮಠದ ಆವರಣದಲ್ಲಿ ಮೈದಳೆದು ನಿಂತಿದೆ. ಮಠದಲ್ಲಿದ್ದ ಹಾಗೂ ಶ್ರೀಗಳು ಪ್ರವಾಸದ ಸಂದರ್ಭದಲ್ಲಿ ಸಂಗ್ರಹಿಸಿದ ವಸ್ತುಗಳೂ ಒಳಗೊಂಡಂತೆ ಎಲ್ಲ ಪ್ರಾಚ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀಗಳು ರೂಪಿಸಿರುವ ಮ್ಯೂಸಿಯಂ ಒಂದು ಅಧ್ಯಯನ ಕೇಂದ್ರವೂ ಆಗಿದೆ.

ಕ್ರಿ.ಶ. 1 ರಿಂದ 16ನೇ ಶತಮಾನದವರೆಗಿನ ನಾಣ್ಯಗಳು, ಪಂಚಲೋಹದಲ್ಲಿ ತಯಾರಾದ ಶಿವ ಪಾರ್ವತಿಯರ ಜತೆಗೆ ಗಣೇಶನಿರುವ ಶಿಲ್ಪ, ದುರ್ಗಾದೇವಿ, ಸರಸ್ವತಿ, ಲಕ್ಷ್ಮೀ, ವಿಷ್ಣು, ಲಕ್ಷ್ಮೀ ನರಸಿಂಹ, ಕುದುರೆಗಳು, ಚಲಿಸುವ ಭಂಗಿಯ ಆನೆಗಳು, ವೀರಗಲ್ಲು, ಮಾಸ್ತಿಕಲ್ಲು, ನಂದಿ, ಸಪ್ತ ಮಾತೃಕೆಯರು, ಬೃಹತ್‌ ಗಾತ್ರದ ಬಾಗಿಲು, ಮಂಚ, ಹಿಂದಿನ ಶ್ರೀಗಳು ಬಳಕೆ ಮಾಡಿರುವ ಅಮೂಲ್ಯವಾದ ವಸ್ತುಗಳು, ಹಲವು ಹಸ್ತಪ್ರತಿಗಳು, ಆಯುಧಗಳು ಹೀಗೆ ನೂರಾರು ವಸ್ತುಗಳು ಮ್ಯೂಸಿಯಂನ ಅಂದವನ್ನು ಹೆಚ್ಚಿಸಿವೆ.

Advertisement

ಮುರುಘಾ ಮಠದ ಉದ್ಯಾನದಲ್ಲಿ ಆದಿ ಮಾನವನಿಂದ ಆಧುನಿಕ ಮಾನವನ ಹಂತದವರೆಗೆ ನಡೆದು ಬಂದ ವಿಕಾಸ ಪ್ರಕ್ರಿಯೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳನ್ನು ಸೃಷ್ಟಿಸಲಾಗಿದೆ. 2010ರ ದಸರೆಯಲ್ಲಿ ಔಪಚಾರಿಕವಾಗಿ ಉದ್ಘಾಟನೆಯಾದ ಮುರುಘಾ ವನಕ್ಕೆ ಈಗ ದಶಕ ತುಂಬಿದೆ. ಜೀವ ಸಂಕುಲದ ವಿಕಾಸ ಪಕ್ರಿಯೆ, ಶರಣ ಪರಂಪರೆ ಹಾಗೂ ಕಾಯಕ ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಕಲಾಕೃತಿಗಳ ಮೂಲಕ ನೂರಾರು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. “ಅಂದಿನಿಂದ-ಇಂದಿನವರೆಗೆ’ ಎಂಬ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಇಲ್ಲಿನ ಕಲಾಕೃತಿಗಳಲ್ಲಿ ಕ್ರಿಸ್ತ ಪೂರ್ವ ಮತ್ತು ನಂತರದ ಜೀವ ವಿಕಾಸದ ಬೆಳವಣಿಗೆಯ ಮಜಲುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಅವನತಿ ಹೊಂದಿದ ಪ್ರಾಣಿಗಳು (ಡೈನೋಸಾರ್‌) ಆದಿ ಮಾನವರ ಜೀವನ ಕ್ರಮಗಳನ್ನು ಬಿಂಬಿಸುವ ಸಿಮೆಂಟಿನ ಕಲಾಕೃತಿಗಳನ್ನು ನಿರ್ಮಿಸಿರುವ ಕಲಾವಿದರು ಅವುಗಳಿಗೆ ಜೀವ ತುಂಬಿದ್ದಾರೆ. ಮಾನವನ ಜೀವನ ವಿಕಾಸದ ವಿವಿಧ ಮಜಲುಗಳನ್ನು ಕಟ್ಟಿಕೊಡುವ ಸಿಮೆಂಟಿನ ಕಲಾಕೃತಿಗಳು ಇಲ್ಲಿ ಅತ್ಯಂತ ಆಕರ್ಷಕವಾಗಿವೆ. ಸಾವಿರಾರು ವರ್ಷಗಳ ಹಿಂದೆ ಇದ್ದ ದೈತ್ಯಾಕಾರದ ಡೈನೋಸಾರ್‌ಗಳು, ದನ ಕರುಗಳು, ಹಳ್ಳಿಕಾರ್‌ ತಳಿಯ ಹಾಲುಣಿಸುತ್ತಿರುವ ಹಸು, ಜಿಂಕೆ, ನವಿಲು, ಮೊಸಳೆ, ಜಿರಾಫೆ ಮತ್ತಿತರ ಪ್ರಾಣಿ, ಪಕ್ಷಿಗಳ ಜತೆಯಲ್ಲಿ ಸಹಜೀವನ ಸಂದೇಶ ಸಾರುವ ಹಾವುಗಳ ಹಲವಾರು ಕಲಾಕೃತಿಗಳಿವೆ. ಕದಳೀವನಕ್ಕೆ ಹೊರಟುನಿಂತ ಅಕ್ಕ ಮಹಾದೇವಿ, ಶರಣನೊಬ್ಬನ ಮಾತು ಕೇಳುತ್ತಿರುವ ಗ್ರಾಮೀಣ ಜನರು ಹಾಗೂ ಗ್ರಾಮೀಣ ದೈನಂದಿನ ಬದುಕನ್ನು ಬಿಂಬಿಸುವ ಹಲವು ಕಲಾಕೃತಿಗಳು ಉದ್ಯಾನದಲ್ಲಿ ನಿರ್ಮಾಣಗೊಂಡಿವೆ.

ಕೂಡಲಸಂಗಮದ ಐಕ್ಯಮಂಟಪ, ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡುತ್ತಿರುವ ಮೊಸಳೆ, ಪೆಂಗ್ವಿನ್‌, ನೀರಾನೆ ಹಾಗೂ ವಿವಿಧ ಪ್ರಭೇದಗಳ ಕೊಕ್ಕರೆಗಳನ್ನು ನಿರ್ಮಿ ಸಲಾಗಿದೆ. ಸಮೀಪದ ಮರದ ಮೇಲೆ ಗೂಬೆ, ಹದ್ದು, ಗಿಡುಗ, ಪಾರಿವಾಳ ಸೇರಿದಂತೆ ಪಕ್ಷಿಗಳ ಸಮೂಹವಿದೆ. ಇವೆಲ್ಲ ಜೀವಂತ ಹಕ್ಕಿಗಳೇನೋ ಎನ್ನಿಸುವಷ್ಟು ಸಹಜತೆಯಿಂದ ಈ ಕಲಾಕೃತಿಗಳು ಆಕರ್ಷಿಸುತ್ತವೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಕಲಾವಿದ ಸಂಗಮೇಶ ಕತ್ತಿ ಮತ್ತು ಅವರ ಸಂಗಡಿಗರಾದ ಹದಿನೈದು ಕಲಾವಿದರು ಕಳೆದ ಒಂದೂವರೆ ವರ್ಷ ನಿರಂತರವಾಗಿ ದುಡಿದು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಡಾ|ಶಿವಮೂರ್ತಿ ಮುರುಘಾ ಶರಣರ ಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ಈ ಕಲಾವಿದರು ಸಿಮೆಂಟಿನ ಕಲಾಕೃತಿ ರೂಪಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ನವ ಮುರುಘಾವನಕ್ಕೆ ದಶಕದ ಸಂಭ್ರಮ
ಚಿತ್ರದುರ್ಗದ ಮುರುಘಾ ಮಠವೆಂದರೆ ಅದು ಪ್ರಕೃತಿಯ ಮಧ್ಯದಲ್ಲಿರುವ ಪ್ರಶಾಂತ ತಾಣ. ಸದಾ ಹಚ್ಚ ಹಸಿರು ವಾತಾವರಣ. ಪ್ರಾಣಿ, ಪಕ್ಷಿಗಳ ಕಲರವ. ಮನಸ್ಸಿಗೆ ನೆಮ್ಮದಿ ನೀಡುವ ತಾಣ. ಇದೇ ಜಾಗಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಒಂದಿಷ್ಟು ಹೊಸ ಟಚ್‌ ಕೊಟ್ಟಿದ್ದು, ಈ ವಾತಾವರಣದಲ್ಲಿ ಓಡಾಡುತ್ತಾ ಮನಸ್ಸಿಗೆ ಮುದ ನೀಡುವ, ಮನುಷ್ಯನ ವಿಕಾಸವನ್ನು ಅಧ್ಯಯನ ಮಾಡುವ, ಮಕ್ಕಳಿಗೆ ಮನರಂಜನೆ ನೀಡುವ ಥೀಮ್‌ ಪಾರ್ಕ್‌ ರೂಪಿಸಿದ್ದಾರೆ.

-ತಿಪ್ಪೇಸ್ವಾಮಿ ನಾಕೀಕೆರೆ

 

Advertisement

Udayavani is now on Telegram. Click here to join our channel and stay updated with the latest news.

Next