Advertisement

ಕೋವಿಡ್‌ ನಿಯಮಾವಳಿಯಂತೆ 20ರಂದು ಮುರುಡೇಶ್ವರ ದೇವರ ರಥೋತ್ಸವ

03:50 PM Jan 12, 2022 | Team Udayavani |

ಭಟ್ಕಳ: ಮುರುಡೇಶ್ವರದ ಓಲಗ ಮಂಟಪದಲ್ಲಿ ಜ.20 ರಂದು ಮಹತೋಭಾರ ಶ್ರೀ ಮುರುಡೇಶ್ವರ ದೇವರ ರಥೋತ್ಸವಕ್ಕೆ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ನಡೆಸಲು ಅನುಮತಿಸಲಾಯಿತು.

Advertisement

ಈ ಬಾರಿಯ ಮುಡೇìಶ್ವರ ದೇವರ ಜಾತ್ರೆ ಅತ್ಯಂತ ವಿಶೇಷವಾಗಿದ್ದು ಸುಮಾರು 400 ವರ್ಷಗಳ ನಂತರ ಆರ್‌.ಎನ್‌. ಶೆಟ್ಟಿಯವರ ಕುಟುಂಬದವರು ನೀಡಿದ ಹೊಸ ಬ್ರಹ್ಮರಥದಲ್ಲಿ ದೇವರು ಕುಳಿತುಕೊಳ್ಳಲಿದ್ದಾರೆ. ಈ ಒಂದು ಕ್ಷಣಕ್ಕಾಗಿ ಊರ ನಾಗರಿಕರು, ಭಕ್ತರು ಕಾತರದಿಂದ ಕಾಯುತ್ತಿದ್ದಾರೆ ಎಂದು ತಿಳಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್‌. ಮಾತನಾಡಿ, ಸರಕಾರ ಈಗಾಗಲೇ ಹಲವಾರು ನಿರ್ಬಂಧ ವಿಧಿಸಿದೆ, ಯಾವುದೇ ಜಾತ್ರೆ, ಸಭೆ ಸಮಾರಂಭವನ್ನು ಮಾಡಲು ಸರಕಾರ ಅನುಮತಿ ನೀಡುತ್ತಿಲ್ಲ. ಇಲ್ಲಿ ಜಾತ್ರೆಯಲ್ಲಿ
ಸಾವಿರಾರು ಜನ ಸೇರುವುದರಿಂದ ಕೋವಿಡ್‌ ಹರಡುವಿಕೆಗೆ ಕಾರಣವಾಗಬಹುದು ಎಂದರು.

ಇದರಿಂದ ಸಮಾಧಾನಗೊಳ್ಳದ ನಾಗರಿಕರು ಯಾವುದೇ ಕಾರಣಕ್ಕೂ ಈ ವರ್ಷದ ಜಾತ್ರೆ ನಿಲ್ಲಿಸಲು ಸಾಧ್ಯವಿಲ್ಲ, ಸರಕಾರ ಯಾವುದೇ ಷರತ್ತು ವಿಧಿಸಿದರೂ ಸಹ ಅದರಂತೆಯೇ ನಡೆದುಕೊಂಡು ಜಾತ್ರೆ ನಡೆಸಲು ನಾವು ಸಿದ್ಧರಿದ್ದೇವೆ. ಜನರು ಸೇರಬಾರದು ಎನ್ನುವ ಕುರಿತು ಸಾಕಷ್ಟು ಪ್ರಚಾರ ಪಡಿಸುತ್ತೇವೆ. ಜಾತ್ರೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸಿ
ಧಾರ್ಮಿಕ ವಿಧಿ-ವಿಧಾಗಳ ಮೂಲಕ ಆಚರಿಸುತ್ತೇವೆ. ತಾವು ಸರಕಾರದ ನಿಯಮಾವಳಿಗಳನ್ನೇ ಮುಂದಿಟ್ಟು ಜಾತ್ರೆಗಳನ್ನು ಬಂದ್‌ ಮಾಡುವುದು ಸರಿಯಲ್ಲ, ಇಲ್ಲಿ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದರಲ್ಲದೇ ರಾಜಕೀಯ ಸಭೆ ಸಮಾರಂಭಗಳಿಗೆ ಸರಕಾರ ಅವಕಾಶ ನೀಡುವಾಗ ಜಾತ್ರೆಗೆ ನಿಬಂಧನೆಯೊಂದಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಉಪ ವಿಭಾಗಾಧಿಕಾರಿಗಳು ಜಾತ್ರೆಯ ವಿಧಿ ವಿಧಾನಗಳನ್ನು ಆರಂಭಿಸಿ ಜಾತ್ರೆಯನ್ನು ನಡೆಸಲು ಅನುಮತಿಸಲಾಗುವುದು. ಆದರೆ ಜಾತ್ರೆಯಲ್ಲಿ ನೂರು ಜನರಿಗಷ್ಟೇ ಅವಕಾಶ ಮಾಡಿಕೊಡಬೇಕು ಎನ್ನುವ ಶರತ್ತನ್ನು ವಿಧಿಸಿದರು. ಇದಕ್ಕೂ ಕೂಡಾ ಆಕ್ಷೇಪ ವ್ಯಕ್ತಪಡಿಸಿದ ಸಭೆಯಲ್ಲಿ ಒಮ್ಮೆ ಗೊಂದಲ ಮೂಡಿತು. ಜಾತ್ರೆಯಲ್ಲಿ 100 ಜನರಿಗಷ್ಟೇ ಅವಕಾಶ ಎಂದರೆ ಹೇಗೆ?  ನಾವು ಜನರನ್ನು ಹೇಗೆ ತಡೆಯುವುದು, ಕೇವಲ ಗ್ರಾಪಂ ಸದಸ್ಯರು, ಊರಿನ ಹಿರಿಯರು ಸೇರಿದರೆ ನೂರರ ಗಡಿ ದಾಟುವಾಗ ನಿಯಂತ್ರಣ ಕಷ್ಟ ಸಾಧ್ಯ ಎನ್ನುವ ಮಾತು
ಕೇಳಿ ಬಂತು. ಕೊನೆಗೂ ಜನರ ಒತ್ತಡಕ್ಕೆ ಮಣಿದ ಅಧಿಕಾರಿಗಳು ರಥೋತ್ಸವದ ವೇಳೆ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಅಗತ್ಯಕ್ಕೆ ತಕ್ಕಷ್ಟು ಜನ ಮಾತ್ರ ಜಾತ್ರೆ ಸಮಯದಲ್ಲಿದ್ದು ಉಳಿದವರು ದರ್ಶನ ಮಾಡಿ ತಕ್ಷಣ ಹೊರಡುವುದು ಇತ್ಯಾದಿ ಶರತ್ತನ್ನ ಪಾಲಿಸುವಂತೆ ಸೂಚಿಸಿ ಸಭೆಯನ್ನು ಮುಕ್ತಾಯ ಗೊಳಿಸಿದರು.

ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ, ಗ್ರಾಮಾಂತರ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹಾಬಲೇಶ್ವರ ನಾಯ್ಕ, ಮುರ್ಡೇಶ್ವರ ಸಬ್‌ ಇನ್ಸ್‌ಪೆಕ್ಟರ್‌ ರವೀಂದ್ರ ಬಿರಾದಾರ, ತಹಶೀಲ್ದಾರ್‌ ಎಸ್‌. ರವಿಚಂದ್ರ,
ರೆವೆನ್ಯೂ ಇನ್ಸ್‌ಪೆಕ್ಟರ್‌ ಶ್ರೀನಿವಾಸ ಎಂ., ಮಾವಳ್ಳಿ-1 ಗ್ರಾಪಂ ಅಧ್ಯಕ್ಷೆ ಮಾದೇವಿ ಮೊಗೇರ, ಮಾವಳ್ಳಿ-2ರ ಅಧ್ಯಕ್ಷ ಮಹೇಶ ನಾಯ್ಕ, ಸದಸ್ಯ ಕೃಷ್ಣಾ ನಾಯ್ಕ, ರಿಕ್ಷಾ ಚಾಲಕರ ಸಂಘದ ಅಧಕ್ಷ ಸತೀಶ ನಾಯ್ಕ, ಶಂಕರ ದೇವಾಡಿಗ, ತಿಮ್ಮಪ್ಪ ನಾಯ್ಕ ಸೇರಿದಂತೆ ಗ್ರಾಪಂ ಸದಸ್ಯರು, ಊರಿನ ಹಿರಿಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next