ಲಂಡನ್: ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರು ಸದ್ಯ ಎಟಿಪಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರೂ ಮುಂದಿನ ವಾರ ಆರಂಭವಾಗಲಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಕೂಟದಲ್ಲಿ ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಏಳು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರಿಗೂ ಕೂಡ ಲಾಭವಾಗಿದೆ.
ವಿಂಬಲ್ಡನ್ ಟೆನಿಸ್ ಕೂಟದ ಶ್ರೇಯಾಂಕವನ್ನು ಬುಧವಾರ ಆಲ್ ಇಂಗ್ಲೆಂಡ್ ಕ್ಲಬ್ ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂಬರ್ ವನ್ ಆಟಗಾರ ಆ್ಯಂಡಿ ಮರ್ರೆ ಮತ್ತು ವನಿತೆಯರಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ.
ಪುರುಷರ ಸಿಂಗಲ್ಸ್ ಸಹಿತ ವಿಂಬಲ್ಡನ್‌ನಲ್ಲಿ ಶ್ರೇಯಾಂಕ ನೀಡುವಾಗ ವಿಶ್ವ ರ್‍ಯಾಂಕಿಂಗನ್ನು ಪರಿಗಣಿಸಲಾಗುವುದಿಲ್ಲ. ಬದಲಾಗಿ ಕಳೆದ ಎರಡು ವರ್ಷ ಹುಲ್ಲುಹಾಸಿನ ಅಂಗಣದಲ್ಲಿ ಆಟಗಾರರು ನೀಡಿದ ಫಾರ್ಮ್ನ ಆಧಾರದಲ್ಲಿ ವಿಶ್ವ ರ್‍ಯಾಂಕಿಂಗ್‌ನ ಅಗ್ರ 32 ಆಟಗಾರರಿಗೆ ಶ್ರೇಯಾಂಕ ನೀಡಲಾಗುತ್ತದೆ. ಉಳಿದ ಮೂರು ಗ್ರ್ಯಾನ್ ಸ್ಲಾಮ್‌ಗಳಲ್ಲಿ ವಿಶ್ವ ರ್‍ಯಾಂಕಿಂಗ್‌ಗೆ ಅನುಗುಣವಾಗಿ ಶ್ರೇಯಾಂಕ ನೀಡಲಾಗುತ್ತದೆ.
ಕಳೆದ ತಿಂಗಳು 10ನೇ ಫ್ರೆಂಚ್ ಓಪನ್ ಗೆದ್ದಿರುವ ಸ್ಪೇನ್‌ನ ರಫೆಲ್ ನಡಾಲ್ ಸದ್ಯ ಎಟಿಪಿ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೂ ವಿಂಬಲ್ಡನ್‌ನಲ್ಲಿ ನಾಲ್ಕನೇ ಶ್ರೇಯಾಂಕ ನೀಡಲಾಗಿದೆ. ಇದಕ್ಕೆ ಕಾರಣ ಇತ್ತೀಚೆಗಿನ ವರ್ಷಗಳಲ್ಲಿ ಹುಲ್ಲುಹಾಸಿನ ಅಂಗಣದಲ್ಲಿ ಅವರ ಸಾಧಾರಣ ನಿರ್ವಹಣೆಯೆ ಆಗಿದೆ. ಎರಡು ಬಾರಿ ಪ್ರಶಸ್ತಿ ಗೆದ್ದಿರುವ 31ರ ಹರೆಯದ ಅವರು 2011ರ ಬಳಿಕ ಇಷ್ಟರವರೆಗೆ ನಾಲ್ಕನೇ ಸುತ್ತಿಗಿಂತ ಮೇಲೇರಲಿಲ್ಲ.
ಪ್ರಶಸ್ತಿ ಗೆಲ್ಲುವ ಫೇವರಿಟ್ ಫೆಡರರ್ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದರೂ ಮೂರನೇ ಶ್ರೇಯಾಂಕ ನೀಡಲಾಗಿದೆ. ಇದರಿಂದಾಗಿ ಅವರು ಸೆಮಿಫೈನಲ್ ಮೊದಲು ಬಲಿಷ್ಠ ಎದುರಾಳಿಯೊಬ್ಬರನ್ನು ಎದುರಿಸುವ ಅಪಾಯ ತಪ್ಪಿಸಿಕೊಂಡಿದ್ದಾರೆ. ಸ್ವಿಸ್‌ನವರೇ ಆದ ಸ್ಟಾನ್ ವಾವ್ರಿಂಕ ಐದನೇ ಸ್ಥಾನಕ್ಕೆ ಜಾರಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಅವರು ಫ್ರೆಂಚ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು.
ಲಕ್ಸೆಂಬರ್ಗ್‌ನ ನುರಿತ ಹುಲ್ಲುಹಾಸಿನ ಆಟಗಾರ ಗೈಲ್ಸ್ ಮುಲ್ಲರ್ ಈ ನಿಯಮದಡಿ ಭಾರೀ ಲಾಭ ಪಡೆದ ಆಟಗಾರರಾಗಿದ್ದಾರೆ. ಡೆನ್ ಬಾಶ್ ಕೂಟದ ಪ್ರಶಸ್ತಿ ಗೆದ್ದಿರುವ ಅವರು ಕಳೆದ ವಾರ ನಡೆದ ಕ್ವೀನ್ಸ್ ಕ್ಲಬ್ ಕೂಟದಲ್ಲಿ ಸೆಮಿಫೈನಲ್ ತಲುಪಿದ್ದರು. ಎಟಿಪಿ ರ್‍ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿರುವ ಅವರಿಗೆ 16ನೇ ಶ್ರೇಯಾಂಕ ನೀಡಲಾಗಿದೆ.