ಭಟ್ಕಳ: ಮಹತೋಭಾರ ಮುರ್ಡೇಶ್ವರ ದೇವರ ವಾರ್ಷಿಕ ರಥೋತ್ಸವ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಅತ್ಯಂತ ಯಶಸ್ವೀಯಾಗಿ ಜರುಗಿತು. ಮುರ್ಡೇಶ್ವರ ರಥೋತ್ಸವದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಭಕ್ತರ ಜಯಘೋಷದ ನಡುವೆ ರಥೋತ್ಸವ ನಡೆದಿದ್ದು, ತಾಲೂಕಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ ಜನತೆ ಮನೆಯಲ್ಲಿಯೇ ಕುರಿತು ಜಾತ್ರಾ ಮಹೋತ್ಸವವನ್ನು ವೀಕ್ಷಿಸಿದರು.
ಈ ವರ್ಷ ಡಾ. ಆರ್. ಎನ್. ಶೆಟ್ಟಿಯವರ ಪುತ್ರ ಸುನಿಲ್ ಶೆಟ್ಟಿ ಮತ್ತು ಕುಟುಂಬದವರು ನೂತನ ಬ್ರಹ್ಮ ರಥವನ್ನು ಸಮರ್ಪಣೆ ಮಾಡಿದ್ದು ಕೋವಿಡ್‍ನಿಂದಾಗಿ ಬ್ರಹ್ಮ ರಥೋತ್ಸವ ನಡೆಯುವುದೇ ಅನುಮಾನವಾಗಿತ್ತು. ಆದರೆ ಎಲ್ಲರ ಸಹಕಾರದಿಂದ ಕೋವಿಡ್ ನಿಯಾಮವಳಿಗಳನ್ನು ಪಾಲಿಸುವ ಕಟ್ಟು ನಿಟ್ಟಿನ ಆದೇಶದೊಂದಿಗೆ ಬ್ರಹ್ಮ ರಥೋತ್ಸವ ಜರುಗಿದ್ದು ಪೊಲೀಸರು ಹಾಗೂ ತಾಲ್ಲೂಕು ಆಡಳಿತ ಅತ್ಯಂತ ನಿಗಾ ವಹಿಸಿತ್ತು.
ರಥೋತ್ಸವಕ್ಕೂ ಪೂರ್ವ ತಾಲೂಕಾ ಆಡಳಿತ 200 ಜನರಿಗೆ ಪಾಸ್‍ಗಳನ್ನು ನೀಡಿದ್ದು ಪಾಸ್ ಹೊಂದದೇ ಇರುವವರು ರಥೋತ್ಸವದ ಸ್ಥಳದಿಂದ ಹೊರ ಹೋಗುವಂತೆ ಪೊಲೀಸ್ ಪದೇ ಪದೇ ಮೈಕ್ ಮೂಲಕ ಹೇಳುತ್ತಿದ್ದುದು ಜನರನ್ನು ನಿಯಂತ್ರಿಸಲು ಸಹಕಾರಿಯಾಯಿತು.
ರಥೋತ್ಸವದ ವೇಳೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಳ್ ರಥೋತ್ಸವದ ವಿಧಿ ವಿಧಾನಗಳನ್ನು ಪೂರೈಸಿದರು. ಇನ್ನೋರ್ವ ಪ್ರಧಾನ ಅರ್ಚಕ ಶಿವರಾಮ ಅಡಿಗಳ್, ದೇವಸ್ಥಾನದ ರಥದಾನಿ ಸುನಿಲ್ ಆರ್. ಶೆಟ್ಟಿ ಹಾಗೂ ಕುಟುಂಬದವರು, ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಶಾಸಕ ಸುನಿಲ್ ನಾಯ್ಕ, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ನಾಗರೀಕ ಸೇವಾ ಸಮಿತಿಯ ಎಸ್. ಎಸ್. ಕಾಮತ್, ಕಾಸ್ಕಾರ್ಡ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಈಶ್ವರ ದೊಡ್ಮನೆ, ಜಯಂತ ನಾಯ್ಕ, ರಾಮದಾಸ ಶೇಟ್, ಗಜಾನನ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.
ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಹಾಗೂ ತಹಸೀಲ್ದಾರ್ ರವಿಚಂದ್ರ ಎಸ್. ಅವರು ಸ್ವತಹ ಹಾಜರಿದ್ದು ರಥೋತ್ಸವದ ಕಾರ್ಯಕ್ರಮ ವೀಕ್ಷಿಸುತ್ತಿದ್ದರು.
ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಸಿ.ಪಿ.ಐ. ಮಹಾಬಲೇಶ್ವರ ನಾಯ್ಕ, ಮುರ್ಡೇಶ್ವರ ಪಿ.ಎಸ್.ಐ. ರವೀಂದ್ರ ಬೀರಾದಾರ, ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ಭರತ್ ಕುಮಾರ್ ಸೇರಿದಂತೆ ಬೇರೆ ಬೇರೆ ಕಡೆಯಿಂದ ಸಬ್ ಇನ್ಸಪೆಕ್ಟರ್‍ಗಳು ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದ್ದು ರಥೋತ್ಸವ ನಡೆಯುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಮುಚ್ಚಲಾಗಿತ್ತು.