Advertisement

ಖಾಸಗಿ ವಿವಿ ವಿಶ್ರಾಂತ ಕುಲಪತಿ ಬರ್ಬರ ಹತ್ಯೆ

12:38 AM Oct 17, 2019 | Lakshmi GovindaRaju |

ಬೆಂಗಳೂರು: ಆನೇಕಲ್‌ ತಾಲೂಕಿನಲ್ಲಿರುವ ಅಲಯನ್ಸ್‌ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ರಾಜಕೀಯ ಮುಖಂಡ ಅಯ್ಯಪ್ಪ ದೊರೆ (54)ಯನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಎಚ್‌ಎಂಟಿ ಮೈದಾನದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ರಾತ್ರಿ 10 ಗಂಟೆ ಸುಮಾರಿಗೆ ಊಟ ಮುಗಿಸಿ ಮನೆ ಮಂಭಾಗದಲ್ಲಿರುವ ಮೈದಾನದಲ್ಲಿ ಒಬ್ಬರೇ ವಾಯುವಿಹಾರ ಮಾಡುತ್ತಿದ್ದರು. ಈ ವೇಳೆ ಕಡು ಕತ್ತಲೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಯ್ಯಪ್ಪ ದೊರೆಯ ಭುಜ, ಕುತ್ತಿಗೆ, ತಲೆ ಹಾಗೂ ಎದೆಗೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಅಲಯನ್ಸ್‌ ವಿವಿ ವಿವಾದ, ಹಣಕಾಸು ವ್ಯವಹಾರ ಹಾಗೂ ಹಳೆವೈಷಮ್ಯಕ್ಕೆ ಸುಫಾರಿ ನೀಡಿ ಅಯ್ಯಪ್ಪ ಅವರನ್ನು ಹತ್ಯೆ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕ್ಷಿಪ್ರ ತನಿಖೆ ನಡೆಸುತ್ತಿರುವ ಜೆ.ಸಿ ಉಪವಿಭಾಗ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಆರೋಪಿಗಳ ಬಗ್ಗೆ ಸುಳಿವು ಲಭ್ಯವಾಗಿದೆ. ಇತ್ತೀಚೆಗೆ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ಆರೋಪಿಯೊಬ್ಬ ಕೈವಾಡವೂ ಅಯ್ಯಪ್ಪ ಕೊಲೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಎಚ್‌ಎಂಟಿ ಮೈದಾನದ ಮುಂಭಾಗದ ಸ್ವಂತ ಮನೆಯಲ್ಲಿ ಪತ್ನಿ ಪಾವನಾ, ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗನ ಜತೆ ಅಯ್ಯಪ್ಪ ವಾಸವಾಗಿದ್ದಾರೆ.

ಪ್ರತಿನಿತ್ಯ ರಾತ್ರಿ 10.30ರ ಸುಮಾರಿಗೆ ಊಟ ಮುಗಿಸಿ ತಮ್ಮ ಬಳಿಯಿದ್ದ ಮತ್ತೂಂದು ಕೀ ಉಪಯೋಗಿಸಿ ಬೀಗ ಹಾಕಿಕೊಂಡು ಮೈದಾನದಲ್ಲಿ ಒಬ್ಬರೇ ಅರ್ಧ ಗಂಟೆಗೂ ಅಧಿಕ ಸಮಯ ವಾಯುವಿಹಾರ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕೂಡ ವಾಯುವಿಹಾರಕ್ಕೆಂದು ಹೋಗಿದ್ದಾರೆ. ಮತ್ತೂಂದೆಡೆ ಅವರ ಪತ್ನಿ ತಲೆನೋವು ಎಂದು ನೋವಿನ ಮಾತ್ರೆ ಸೇವಿಸಿ ಮಕ್ಕಳ ಜತೆ ಮಲಗಿದ್ದಾರೆ.

Advertisement

ಬುಧವಾರ ಮುಂಜಾನೆ 5.45ರ ಸುಮಾರಿಗೆ ಎಚ್ಚರಗೊಂಡ ಪತ್ನಿ ಪಾವನಾ ಅಯ್ಯಪ್ಪ ಮಲಗುತ್ತಿದ್ದ ಕೊಠಡಿ ಪರಿಶೀಲಿಸಿದ್ದಾರೆ. ಕಾಣದಾಗ ಆತಂಕಗೊಂಡು ಮನೆಯ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಕಂಡು ಬಂದಿಲ್ಲ. ಅದೇ ವೇಳೆ ಆರ್‌.ಟಿ.ನಗರ ಠಾಣೆಯ ಹೊಯ್ಸಳ ಸಿಬ್ಬಂದಿಗೆ ಮೈದಾನದಲ್ಲಿ ವಾಯುವಿಹಾರಕ್ಕೆಂದು ಆಗಮಿಸಿದ ಕೆಲ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಯ್ಯಪ್ಪರನ್ನು ಕಂಡು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸುತ್ತಿದ್ದರು. ಮತ್ತೂಂದೆಡೆ ಹತ್ತಾರು ಮಂದಿ ನಿಂತಿರುವುದನ್ನು ಕಂಡು ಸ್ಥಳಕ್ಕೆ ಓಡಿ ಬಂದ ಪಾವನಾ ಪತಿಯನ್ನು ಗುರುತಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಸುಪಾರಿ ಹಂತಕರಿಂದ ಕೃತ್ಯ: ಕೃತ್ಯದ ಮಾದರಿ ಗಮನಿಸಿದರೆ ಅಯ್ಯಪ್ಪ ದೊರೆ ಅವರ ಹತ್ಯೆಗೆ ಸುಪಾರಿ ಕೊಟ್ಟಿರುವುದು ಖಚಿತವಾಗಿದೆ. ಅಯ್ಯಪ್ಪ ವಿಶ್ವವಿದ್ಯಾಲಯದಿಂದ ದೂರ ಉಳಿದ ಬಳಿಕ ರಿಯಲ್‌ ಎಸ್ಟೇಟ್‌, ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಈ ವೇಳೆ ಕೆಲವರು ಅವರ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ.

ಮನೆ ಸಮೀಪದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ. ಆದರೆ, ಕೆಲ ದೃಶ್ಯಾವಳಿಗಳು ಅಸ್ಪಷ್ಟವಾಗಿವೆ. ಹೀಗಾಗಿ ಮೈದಾನ ಸುತ್ತ-ಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಹಾಗೂ ಅಯ್ಯಪ್ಪ ದೊರೆ ಮತ್ತು ಪತ್ನಿ ಪಾವನಾ ಅವರ ಮೊಬೈಲ್‌ಗೆ ಇತ್ತೀಚೆಗೆ ಒಳ ಮತ್ತು ಹೊರ ಕರೆಗಳ ಬಗ್ಗೆ ಸಿಡಿಆರ್‌ ಸಂಗ್ರಹಿಸಲಾಗುತ್ತಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಸರೂರು ಗ್ರಾಮದ ಅಯ್ಯಪ್ಪ ದೊರೆ 18-20 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಇಲ್ಲಿಯೇ ಕಾಲೇಜು ಶಿಕ್ಷಣ ಮುಗಿಸಿದ್ದರು. ಬಳಿಕ ಶಿಕ್ಷಣ ತಜ್ಞರು ಎಂದು ಗುರುತಿಸಿಕೊಂಡಿದ್ದ ಅವರು, ನಂತರದ ದಿನಗಳಲ್ಲಿ ಆನೇಕಲ್‌ ತಾಲೂಕಿನಲ್ಲಿರುವ ಅಲಯನ್ಸ್‌ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಹುದ್ದೆ ತೊರೆದಿದ್ದರು. ಬಳಿಕ ಪತ್ನಿ ಪಾವನಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಪ್ರಸ್ತುತ ವಿವಿಯಲ್ಲಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

ವಿವಿ ವಿವಾದ: ಅಲಯನ್ಸ್‌ ವಿಶ್ವವಿದ್ಯಾಲಯದ ಮಾಲೀಕತ್ವ ಕುರಿತು ಮಧುಕರ್‌ ಅಂಗೂರ್‌ ಹಾಗೂ ಸಹೋದರ ಸುಧೀರ್‌ ಅಂಗೂರು ನಡುವೆ ವಾಜ್ಯ ನಡೆಯುತ್ತಿದ್ದು, ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ. ಅದಕ್ಕೂ ಮೊದಲು ಅಲಯನ್ಸ್‌ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಅಯ್ಯಪ್ಪ ದೊರೆ ಕೊಡುಗೆ ಪ್ರಮುಖವಾಗಿತ್ತು. ವಿದೇಶದಲ್ಲಿ ವಾಸವಾಗಿದ್ದ ಮಧುಕರ್‌ ಅಂಗೂರು ಸೂಚನೆ ಮೇರೆಗೆ ವಿಶ್ವವಿದ್ಯಾಲಯ ಆಡಳಿತವನ್ನು ಸುಧೀರ್‌ ಅಂಗೂರ್‌ ಜತೆ ಸೇರಿ ಅಯ್ಯಪ್ಪ ಉತ್ತಮವಾಗಿ ನಡೆಸುತ್ತಿದ್ದರು.

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ಮಧುಕರ್‌ ಅಂಗೂರ್‌ ತಮ್ಮ ಸಹೋದರ ಸುಧೀರ್‌ ಅಂಗೂರ್‌ ನಡುವೆ ವಿವಿ ಮಾಲೀಕತ್ವ ಕುರಿತು ವಾಗ್ವಾದ ನಡೆಯುತ್ತಿತ್ತು. ಅಯ್ಯಪ್ಪ ಸಹೋದರರ ನಡುವೆ ರಾಜಿಸಂಧಾನಕ್ಕೂ ಮುಂದಾಗಿದ್ದರು. ಆದರೂ ಇಬ್ಬರು ಸಮಾಧಾನಗೊಂಡಿರಲಿಲ್ಲ. ಈ ಮಧ್ಯೆ 3-4 ವರ್ಷಗಳ ಕಾಲ ವಿವಿಯ ಕುಲಪತಿಗಳಾಗಿ ಅಯ್ಯಪ್ಪ ದೊರೆ ನೇಮಕಗೊಂಡಿದ್ದರು. ಬಳಿಕ ಪತ್ನಿ ಪಾವನಾ ಅವರನ್ನು ಕುಲಪತಿಯಾಗಿ ನೇಮಸಿ, ದೂರ ಉಳಿದಿದ್ದರು. ಇತ್ತೀಚೆಗೆ ಸರ್ಕಾರ ಮಧ್ಯ ಪ್ರವೇಶದಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಸಾಮಾಜಿಕ ಕಾರ್ಯಕರ್ತರಾಗಿದ್ದ ಅಯ್ಯಪ್ಪ: ಈ ಮಧ್ಯೆ ಅಯ್ಯಪ್ಪ ದೊರೆ ಪ್ರಚಲಿತ ವಿಚಾರ ಕುರಿತು ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಸಂಗ್ರಹಿಸಿ ಕೆಲ ಮುಂಖಡರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ರೈತ ಪರ ಹೋರಾಟಗಳಲ್ಲಿಯೂ ತೊಡಗಿಕೊಂಡಿದ್ದರು.

ರಾಜಕೀಯ ಪಕ್ಷ ಸ್ಥಾಪನೆ: ಕಳೆದ (2018)ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಳಸಾ ಬಂಡೂರಿ ಹೋರಾಟಗಾರನ್ನು ಸೇರಿಸಿ “ಜನಸಾಮಾನ್ಯರ ಪಾರ್ಟಿ’ ಸ್ಥಾಪನೆ ಮಾಡಿದ್ದ ಅಯ್ಯಪ್ಪ ದೊರೆ, ಕೂಡಲಸಂಗಮದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಪಕ್ಷದ ಚಿಹ್ನೆ “ಉಳುವೆ ಮಾಡುವ ಟ್ರ್ಯಾಕ್ಟರ್‌’ ಬಿಡುಗಡೆ ಮಾಡಿದ್ದರು. ಬಳಿಕ ಮುದ್ದೇಬಿಹಾಳ ಮತಕ್ಷೇತ್ರದಿಂದ ಸ್ಫರ್ಧಿಸಿ ಸೋಲು ಕಂಡಿದ್ದರು.

ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದೂರು: 2008-11ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಶಿವರಾಮಕಾರಂತ ಬಡಾವಣೆಯಲ್ಲಿ ನೂರಾರು ಎಕರೆ ಡಿನೋಟಿಫಿಕೇಷನ್‌ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ 2017ರಲ್ಲಿ ಅಯ್ಯಪ್ಪ ದೊರೆ ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪ್ರಕರಣವನ್ನು ರದ್ದುಗೊಳಿಸಿತ್ತು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಉತ್ತರ ವಿಭಾಗ ಡಿಸಿಪಿ ಎನ್‌.ಶಶಿಕುಮಾರ್‌ ಹಾಗೂ ಇತರೆ ಅಧಿಕಾರಿಗಳು ಪರಿಶೀಲಿಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಅಯ್ಯಪ್ಪ ದೊರೆ ಅಲಯನ್ಸ್‌ ವಿವಿಯಲ್ಲಿ ಕುಲಪತಿಗಳಾಗಿದ್ದರು. ವಾಜ್ಯಗಳು ಇದ್ದು, ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ರಾತ್ರಿ ದುಷ್ಕರ್ಮಿಗಳು ಅಯ್ಯಪ್ಪ ದೊರೆಯನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು.

ಕುಟುಂಬಕ್ಕೆ ರಾಜಕೀಯ ಮುಖಂಡರ ಸಾಂತ್ವನ: ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅಯ್ಯಪ್ಪ ದೊರೆ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ರಾಜಕೀಯ ಮುಖಂಡರು, ಸಂಬಂಧಿಕರು ಹಾಗೂ ಆಪ್ತರು ಆರ್‌.ಟಿ.ನಗರ ಮನೆ ಬಳಿ ಆಗಮಿಸಿದರು. ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶೆಪ್ಪನವರ್‌ ಹಾಗೂ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮುತ್ತಪ್ಪ ಕೊಮಾರ್‌ ಆಗಮಿಸಿ ಅಯ್ಯಪ್ಪ ದೊರೆ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಬಿಗಿ ಭದ್ರತೆ: ಭೀಕರ ಹತ್ಯೆ ವಿಚಾರ ಬಹಿರಂಗ ಆಗುತ್ತಿದ್ದಂತೆ ಸಾರ್ವಜನಿಕರು ಆತಂಕಗೊಂಡಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇತ್ತು. ಹೀಗಾಗಿ ಭಾರೀ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಅಲ್ಲದೆ, ಸುತ್ತ-ಮುತ್ತಲ ನಿವಾಸಿಗಳು ಮನೆ ಬಳಿ ಬಂದು ತಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದ ವ್ಯಕ್ತಿಗೆ ಈ ರೀತಿ ಕೊಲೆ ಮಾಡಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಪಿಸುತ್ತಿದದ್ದು ಕಂಡು ಬಂತು.

ಪ್ರಕರಣ ಸಂಬಂಧ ಅಯ್ಯಪ್ಪ ದೊರೆ ಅವರ ಹಣಕಾಸು ವ್ಯವಹಾರ ಹಾಗೂ ಇತರೆ ವಿಚಾರಗಳ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
-ಎನ್‌.ಶಶಿಕುಮಾರ್‌, ಉತ್ತರ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next