Advertisement

ಕಾಲಿಯಾ ರಫೀಕ್‌ ಕೊಲೆ ಪ್ರಕರಣ: ತಲೆಮರೆಸಿದ್ದ ಆರೋಪಿ ಬಂಧನ

12:57 AM Oct 04, 2019 | mahesh |

ಮಂಗಳೂರು: ಎರಡೂವರೆ ವರ್ಷಗಳ ಹಿಂದೆ ಕೋಟೆಕಾರ್‌ನಲ್ಲಿ ನಡೆದಿದ್ದ ಕುಖ್ಯಾತ ರೌಡಿ ಕಾಲಿಯಾ ರಫೀಕ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ, ಕೇರಳದ ಕಾಸರಗೋಡು ಚಳಯಂಗೋಡ್‌ ಮೇಲ್ಪರಂಬ ನಿವಾಸಿ ಮಹಮ್ಮದ್‌ ನಜೀಬ್‌ ಯಾನೆ ಕಲ್ಲಟ್ರ ನಜೀಬ್‌ (46) ನನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ನೂರ್‌ ಅಲಿ, ರಶೀದ್‌ ಟಿ.ಎಸ್‌. ಹುಸೈನಬ್ಬ ಯಾನೆ ಹುಸೈನ್‌, ಮುತಾಸಿಂ ಯಾನೆ ತಸ್ಲಿಂ ಸಹಿತ ಹಲವರನ್ನು ಈ ಮೊದಲೇ ಬಂಧಿಸಲಾಗಿತ್ತು.

Advertisement

ಪ್ರಕರಣದ ವಿವರ
2017ರ ಫೆ. 14ರಂದು ಮಹಮ್ಮದ್‌ ಝಾಹಿದ್‌ ತನ್ನ ಸ್ನೇಹಿತ ಕಾಲಿಯಾ ರಫೀಕ್‌ನೊಂದಿಗೆ ಮುಜೀಬ್‌ ಹಾಗೂ ಫಿರೋಜ್‌ ಜತೆಯಲ್ಲಿ ರಾತ್ರಿ 11:30ಕ್ಕೆ ಮಾರುತಿ ರಿಟ್‌l ಕಾರಿನಲ್ಲಿ ಕಾಸರಗೋಡಿನ ಹೊಸಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಬಂದು ರಾತ್ರಿ 12 ಗಂಟೆಗೆ ಕೋಟೆಕಾರ್‌ ಪೆಟ್ರೋಲ್‌ ಪಂಪ್‌ ತಲುಪಿದ್ದರು. ಆ ಹೊತ್ತಿಗೆ ವಿರುದ್ಧ ದಿಕ್ಕಿನಿಂದ ರಾಂಗ್‌ ಸೈಡ್‌ನ‌ಲ್ಲಿ ವೇಗವಾಗಿ ಬಂದ ಆರೋಪಿಗಳಿದ್ದ ಟಿಪ್ಪರ್‌ ಢಿಕ್ಕಿ ಹೊಡೆದಿತ್ತು.

ಆರೋಪಿಗಳ ಪೈಕಿ ಚಾಲಕ ರಶೀದ್‌ ಹೊಂಚು ಹಾಕಿ ಪೆಟ್ರೋಲ್‌ ಬಂಕ್‌ ಬಳಿ ಟಿಪ್ಪರ್‌ ಲಾರಿಯನ್ನು ಮೊದಲೇ ತಂದು ನಿಲ್ಲಿಸಿದ್ದ. ಕಾಲಿಯಾ ರಫೀಕ್‌ ಇದ್ದ ಕಾರು ಬರುತ್ತಿದ್ದಂತೆ ಆರೋಪಿ ಏಕಾಏಕಿ ಟಿಪ್ಪರನ್ನು ಢಿಕ್ಕಿ ಹೊಡೆಸಿ ಕಾರನ್ನು ಅಡ್ಡಗಟ್ಟಿದ್ದ. ಏತನ್ಮಧ್ಯೆ, ಆರೋಪಿಗಳ ತಂಡದ ಮತ್ತೂಂದು ಎರ್ಟಿಕಾ ಕಾರು ಕಾಲಿಯಾ ರಫೀಕ್‌ನನ್ನು ಬೆನ್ನಟ್ಟಿಕೊಂಡು ಬಂದಿತ್ತು. ದುಷ್ಕರ್ಮಿಗಳ ಕೈಯಲ್ಲಿ ಸಿಕ್ಕಿ ಬೀಳುವುದು ಖಾತರಿಯಾಗುತ್ತಿದ್ದಂತೆ ಕಾಲಿಯಾ ರಫೀಕ್‌ ಮತ್ತು ಸಹಚರರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆಗ ನೂರ್‌ ಅಲಿ ಹಾಗೂ ಇನ್ನೋರ್ವ ಆರೋಪಿಯು ಪಿಸ್ತೂಲ್‌ನಿಂದ ಕಾಲಿಯಾ ರಫೀಕ್‌ಗೆ ಗುಂಡು ಹಾರಿಸಿದ್ದರು. ಅಲ್ಲದೆ, ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆಗೈದಿದ್ದರು ಎಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಿದ್ದ ಮಂಗಳೂರು ಪೊಲೀಸರು, ಇತರರ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದಾಗ ಕಾಲಿಯಾ ರಫೀಕ್‌ ಇದ್ದ ಕಾರು ಚಾಲಕ ಮಹಮ್ಮದ್‌ ನಜೀಬ್‌ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು. ಕೃತ್ಯದ ನಂತರ ಈತ ಮುಂಬಯಿ, ಬೆಂಗಳೂರು, ಎರ್ನಾಕುಳಂ ಮುಂತಾದೆಡೆ ತಲೆ ಮರೆಸಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಗುರುವಾರ ಬಂಧಿಸಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌ ಆರ್‌. ನಾಯ್ಕ, ಎಸ್‌ಐ ಕಬ್ಟಾಳ್‌ರಾಜ್‌ ಎಚ್‌.ಡಿ. ಹಾಗೂ ಸಿಸಿಬಿ ಸಿಬಂದಿ ಭಾಗವಹಿಸಿದ್ದರು.

Advertisement

ಹಲವು ಪ್ರಕರಣಗಳ ಆರೋಪಿ
ಆರೋಪಿ ಮಹಮ್ಮದ್‌ ನಜೀಬ್‌ ಪ್ರಕರಣದ ಪ್ರಮುಖ ಆರೋಪಿ ಝೀಯಾ ಹಾಗೂ ಇತರರೊಂದಿಗೆ ಸೇರಿ ಸಂಚು ರೂಪಿಸಿ ಕೊಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು, ಬೇಕಲ, ನೀಲೇಶ್ವರ ಠಾಣೆಗಳಲ್ಲಿ ಕಳ್ಳತನ, ವಂಚನೆ ಪ್ರಕರಣಗಳು ಸಹಿತ ಒಟ್ಟು 5 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next