ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಟಿಕೆಟ್‌ನ್ನು ಈ ಬಾರಿ ಹಾಲಿ ಸಂಸದ ಮುನಿಯಪ್ಪ ಬದಲಾಗಿ ಯಾರಿಗೆ ಕೊಟ್ಟರೂ ನಾವು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ. ಮುನಿಯಪ್ಪಗೆ ಮಣೆ ಹಾಕಿದರೆ ನಾವು ಅವರ ಸೋಲಿಗೆ ಪಣತೊಡುತ್ತೇವೆ ಎಂದು ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಘೋಷಿಸಿದ್ದಾರೆ.
ಚಿಂತಾಮಣಿ ನಗರದ ಮಾಳಪಲ್ಲಿಯ ತಮ್ಮ ನಿವಾಸದಲ್ಲಿ ಗುರುವಾರ ತಮ್ಮ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಂತ್ರ, ಕುತಂತ್ರಗಳನ್ನು ಅನುಸರಿಸಿಯೇ ಏಳು ಬಾರಿ ಸಂಸದರಾಗಿರುವ ಮುನಿಯಪ್ಪ ಪಕ್ಷ ಸಂಘಟನೆಗಿಂತ ಪಕ್ಷ ನಿರ್ನಾಮ ಮಾಡಿದ್ದೇ ಹೆಚ್ಚು. ಅವರ ರಾಜಕೀಯ ಕುತಂತ್ರಕ್ಕೆ ನಾನು ಸೇರಿದಂತೆ ಅನೇಕ ಮುಖಂಡರ ಭವಿಷ್ಯ ಹಾಳಾಗಿದೆ. ಇಂತಹ ಕೆಟ್ಟ ರಾಜಕಾರಣಿಯನ್ನು ಈ ಬಾರಿ ಸೋಲಿಸಬೇಕಿದೆ ಎಂದು ಸಂಸದ ಮುನಿಯಪ್ಪ ವಿರುದ್ಧ ಸುಧಾಕರ್ ವಾಗ್ಧಾಳಿ ನಡೆಸಿದರು.
ಅಹಂ ಜಾಸ್ತಿ: ಕಾಂಗ್ರೆಸ್ ಪಕ್ಷದಲ್ಲಿ ಯಾರು ಇಲ್ಲದಿದ್ದರೂ ಇದ್ದರೂ ನಾನೇ ಗೆಲ್ಲುತ್ತೇನೆಂಬ ಅಹಂ ಮುನಿಯಪ್ಪಗೆ ಇದೆ. ಈ ಬಾರಿ ಪಕ್ಷದ ನಾಲ್ವರು ಶಾಸಕರೇ ಅವರಿಗೆ ವಿರೋಧ ಇದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಹೋರಾಟ ನಡೆಸುತ್ತಿದ್ದಾರೆ. ಮುನಿಯಪ್ಪಗೆ ಟಿಕೆಟ್ ತಪ್ಪಿ ಬೇರೆಯವರಿಗೆ ಟಿಕೆಟ್ ಕೊಟ್ಟರೆ ಖಂಡಿತ ನಾವು ಕಾಂಗ್ರೆಸ್ ಗೆಲುವುಗೆ ಶ್ರಮಿಸುತ್ತೇವೆ. ಇಲ್ಲದಿದ್ದರೆ ಅನಿರ್ವಾಯವಾಗಿ ಬಿಜೆಪಿ ಅಥವಾ ಮುನಿಯಪ್ಪ ವಿರುದ್ಧ ಇರುವ ಕಾಂಗ್ರೆಸ್‌ನ ಸಮಾನ ಮನಸ್ಕ ಶಾಸಕರು ನಿಲ್ಲಿಸುವ ಅರ್ಭರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದರು.
ತೊಲಗಿಸಬೇಕು: ಮುನಿಯಪ್ಪರ ಒಡೆದು ಆಳುವ ನೀತಿಗೆ ಅನೇಕ ನಾಯಕರು ಬಲಿಯಾಗಿದ್ದಾರೆ. ಪಕ್ಷದ ತತ್ವ, ಸಿದ್ಧಾಂತಗಳನ್ನು ನಾವು ಒಪ್ಪಿದ್ದೇವೆ. ಆದರೆ ಮುನಿಯಪ್ಪ ಅಣತಿಯಂತೆ ನಡೆಯುವ ಕಾಂಗ್ರೆಸ್ ನಮಗೆ ಬೇಡ. ನಾನು ಎರಡು ಬಾರಿ ಕ್ಷೇತ್ರದಲ್ಲಿ ಸೋತಿದ್ದೇನೆ, ರಾಷ್ಟ್ರ ರಾಜಕಾರಣದಲ್ಲಿ ಏನೇ ಗಾಳಿ ಇರಬಹುದು, ಯುವಕರು ಬಿಜೆಪಿ ಪರ ಒಲವು ಇರಬಹುದು. ಆದರೆ ಚಿಂತಾಮಣಿ ಕ್ಷೇತ್ರದಲ್ಲಿ ನಮ್ಮ ಅಸ್ತಿತ್ವ ಮುಖ್ಯ. ಇಂತಹ ಕೆಟ್ಟ ರಾಜಕಾರಣಿಯನ್ನು ನಾವು ತೊಲಗಿಸಬೇಕಿದೆ ಎಂದರು.
ಟಿಕೆಟ್ ಸಿಗುವುದೇ ಅನುಮಾನ: ಮುನಿಯಪ್ಪರ ಆಸ್ತಿ ವಿಚಾರ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಮೊದಲ ಬಾರಿಗೆ ಸಂಸದರಾಗಿದ್ದಾಗ ಎಷ್ಟು ಆಸ್ತಿ ಇತ್ತು, ಈಗ ಎಷ್ಟು ಆಸ್ತಿ ಆಗಿದೆ. ನಮ್ಮ ಕುಟುಂಬ ಅನೇಕ ವರ್ಷಗಳಿಂದ ರಾಜಕಾರಣದಲ್ಲಿ ಇದ್ದರೂ ಇದೇ ಮನೆಯಲ್ಲಿ ಇದ್ದೇವೆ. ಈ ಬಾರಿ ಕ್ಷೇತ್ರದಲ್ಲಿ ಪ್ರಬಲ ವಿರೋಧ ಇದ್ದು ಟಿಕೆಟ್ ಸಿಗುವುದೇ ಅನುಮಾನ ಎಂದರು. ಸಭೆಯಲ್ಲಿ ಕೋಚಿಮುಲ್ ನಿರ್ದೇಶಕ ಉಲವಾಡಿ ಬಾಬು, ಜಿಪಂ ಸದಸ್ಯ ಸ್ಕೂಲ್ ಸುಬ್ಟಾರೆಡ್ಡಿ ಮತ್ತಿತರರು ಸಂಸದ ಮುನಿಯಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಚಿಕ್ಕಬಳ್ಳಾಪುರ ಸುಧಾಕರ್ ವಿರುದ್ಧ ಕಿಡಿ: ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ಗೂ ಕೋಲಾರ ಲೋಕಸಭಾ ಕ್ಷೇತ್ರದ ರಾಜಕಾರಣಕ್ಕೂ ಏನು ಸಂಬಂಧ ಎಂದು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಪ್ರಶ್ನಿಸಿದರು. ಮುನಿಯಪ್ಪಗೆ ಟಿಕೆಟ್ ಬೇಕೆಂದು ಕೇಳಕ್ಕೆ ಅವರು ಯಾರು? ಎಂದು ವಾಗ್ಧಾಳಿ ನಡೆಸಿದರು. ಪಕ್ಷದ ಟಿಕೆಟ್‌ಗಾಗಿ ಮುನಿಯಪ್ಪ ಜೆಡಿಎಸ್ ಶಾಸಕರನ್ನು ದೆಹೆಲಿಗೆ ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ನಾವು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು. ಸ್ಪೀಕರ್ ರಮೇಶ ಕುಮಾರ್ ಹಾಗೂ ಮುನಿಯಪ್ಪ ವಿರೋಧಿ ಕಾಂಗ್ರೆಸ್ ಶಾಸಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕೆಂದು ಬೆಂಬಲಿಗರಿಗೆ ತಿಳಿಸಿದರು.