Advertisement
ಕುರುಕ್ಷೇತ್ರದ ರೂವಾರಿ ದುಬಾರಿ ನಿರ್ಮಾಪಕ ಮುನಿರತ್ನ ಮಾತನಾಡಿ, “ಬಹುಶಃ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಕಲಾವಿದರನ್ನು ಒಟ್ಟಿಗೆ ನೋಡುವ ಚಿತ್ರವಿದು. ನಮ್ಮ ಕಲಾವಿದರು ಅದ್ಭುತ ನಟನೆ ಮಾಡಿ ಶ್ರಮಿಸಿದ್ದಾರೆ. ಮೊದಲನೆಯದಾಗಿ ಎಲ್ಲರೂ ಕನ್ನಡ ಚಿತ್ರರಂಗದ ಹಿರಿಯ ನಟ, ಭೀಷ್ಮ ಪಾತ್ರ ಮಾಡಿದ ರೆಬಲ್ ಸ್ಟಾರ್ ದಿ. ಅಂಬರೀಶ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಚರಿತ್ರೆಯಲ್ಲಿ ಉಳಿಯುವ ಪಾತ್ರ ಮಾಡಿದ್ದಾರೆ. ನೋವೆಂದರೆ ಚಿತ್ರ ಬಿಡುಗಡೆ ವೇಳೆ ಇಲ್ಲ ಎಂಬ ಬೇಸರ ಇದೆ. ಆದರೆ, ಅವರು ನಮ್ಮೊಂದಿಗಿದ್ದಾರೆ. ಪ್ರಥಮ ಬಾರಿಗೆ ರವಿಚಂದ್ರನ್ ಕೃಷ್ಣನ ಪಾತ್ರ, ಅರ್ಜುನ್ ಸರ್ಜಾ ಕರ್ಣನ ಪಾತ್ರ, ದರ್ಶನ್ ದುರ್ಯೋಧನನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.
Related Articles
Advertisement
ನಟ ಶ್ರೀನಾಥ್ ಮಾತನಾಡಿ, “ಚಿತ್ರದಲ್ಲಿ ಧೃತರಾಷ್ಟ್ರನ ಪಾತ್ರ ಮಾಡಿದ್ದೇನೆ. ನಾನು ಕಪ್ಪು ಬಿಳುಪು ಸಿನಿಮಾ ಕಾಲದಿಂದಲೂ ಇರುವವನು. ತಾಂತ್ರಿಕವಾಗಿ ಈಗ ಚಿತ್ರರಂಗ ಶ್ರೀಮಂತವಾಗಿದೆ. ಈ ಕುರುಕ್ಷೇತ್ರ 3ಡಿ ಎಫೆಕ್ಟ್ಸ್ ಕೊಡುವಾಗ, ಅದ್ಭುತ ಎನಿಸಿತ್ತು. ಕಲಾವಿದರಾಗಿ ನಾವು ಈ ಚಿತ್ರದಲ್ಲಿದ್ದೇವೆ ಅದೇ ಖುಷಿ. ಮುನಿರತ್ನ ಧೈರ್ಯ ಮಾಡಿದ್ದಾರೆ. ಅವರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಧೃತರಾಷ್ಟ್ರನ ಪಾತ್ರ ಮಾಡುವಾಗ ಒಂದೊಂದು ಶಾಟ್ ಆದ ನಂತವೂ ಬಳಿ ಬರುತ್ತಿದ್ದ ನಿರ್ಮಾಪಕರು ಉತ್ಸಾಹ ತುಂಬುತ್ತಿದ್ದರು ಎಂದು ಚಿತ್ರೀಕರಣದ ಕ್ಷಣಗಳನ್ನು ಮೆಲುಕು ಹಾಕಿದರು.
ಚಿತ್ರದಲ್ಲಿ ದ್ರೋಣಾಚಾರ್ಯರ ಪಾತ್ರ ನಿರ್ವಹಿಸಿರುವ ನಟ ಶ್ರೀನಿವಾಸಮೂರ್ತಿ ಅವರು ಮಾತನಾಡಿ, ಬಹಳ ದಿನಗಳ ನಂತರ ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬರುತ್ತಿದೆ. ಕುರುಕ್ಷೇತ್ರ ಒಂದು ಅದ್ಭುತ ಚಿತ್ರ. ಇದಕ್ಕಾಗಿ ನಿರ್ಮಾಪಕ ಮುನಿರತ್ನ ಅವರನ್ನು ಅಭಿನಂದಿಸಬೇಕು. ದುರ್ಯೋಧನನ ಪಾತ್ರಕ್ಕೆ ದರ್ಶನ್ ಸರಿಯಾದ ಆಯ್ಕೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಎನ್.ಟಿ.ರಾಮರಾವ್ ನೆನಪಾಗುತ್ತಾರೆ. ಅವರನ್ನು ಮರೆಸುವ ನಟನೆಯನ್ನು ದರ್ಶನ್ ಮಾಡಿದ್ದಾರೆ ಎಂಬ ನಂಬಿಕೆ ನನ್ನದು ಎಂದು ಹೇಳಿದರು.
ರಾಕ್‌ಲೈನ್ ವೆಂಕಟೇಶ್ ಪುತ್ರ ಯತೀಶ್ ಮಾತನಾಡಿ, “ಕನ್ನಡ ಸಿನಿಮಾರಂಗಕ್ಕೆ ದಾಖಲೆ ಸಿನಿಮಾ ಇದು. ನಮ್ಮ ಮಾವನವರ ಸಿನಿಮಾವನ್ನು ನಾವು ವಿತರಣೆ ಮಾಡುತ್ತಿರುವುದೇ ಖುಷಿಯ ಸಂಗತಿ ಎಂದರು. ವಿಧುರನ ಪಾತ್ರ ಮಾಡಿರುವ ರಮೇಶ್ ಭಟ್ ಮಾತನಾಡಿ, ಈ ದಿನ ಸುದಿನ. ಕಾರಣ ಆಡಿಯೋ ಬಿಡುಗಡೆಗೆ ಇಷ್ಟು ಜನ ಬಂದಿದ್ದಾರೆ. ಸಿನಿಮಾಗೆ ಇನ್ನೆಷ್ಟು ಜನ ಬರುತ್ತಾರೆ ಎಂದು ಊಹೆ ಮಾಡೋಕೂ ಆಗಲ್ಲ. ಇದೊಂದು ಸದಾವಕಾಶ ಎಂದರು.
ಗೀತರಚನೆಕಾರ ನಾಗೇಂದ್ರ ಪ್ರಸಾದ್ ಮಾತನಾಡಿ, ಇಂತಹ ಪ್ರಯತ್ನ ಅಸಾಧ್ಯ. ಅದನ್ನು ಮುನಿರತ್ನ ಸಾಧ್ಯವಾಗಿಸಿದ್ದಾರೆ. ಅತಿರಥ ಮಹಾರಥರ ಜತೆ ಮಾಡಿದ ಕೆಲಸ, ಹಾಡು ಬರೆಯೋ ಅವಕಾಶ ಸಿಕ್ಕಿರುವುದು ಪುಣ್ಯದ ಫಲ. ಸಾಹೋರೆ ಸಾಹೋ ಹಾಡೊಂದೇ ಅಲ್ಲ, ಎಲ್ಲ ಹಾಡುಗಳ ಬಗ್ಗೆಯೂ ಒಂದೊಂದು ದಿನ ಹೇಳಬೇಕು. ಹಳಗನ್ನಡ, ಸಂಸ್ಕೃತ ಪದಗಳನ್ನು ಇಲ್ಲಿ ಕೇಳಬಹುದು. ದರ್ಶನ್ ಅವರ ಮೊದಲ ಚಿತ್ರಕ್ಕೆ ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೆ. ಐವತ್ತನೇ ಸಿನಿಮಾಗೂ ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಅವರ ನೂರನೇ ಸಿನಿಮಾಗೂ ನಾನೇ ಹಾಡು ಬರೆಯಬೇಕೆಂಬ ಬರೆಯಯವ ಆಸೆಯಿದೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಮೈಲಿಗಲ್ಲು ಎಂದರು.
ನಟ ರವಿಶಂಕರ್ ಮಾತನಾಡಿ, ಇಷ್ಟು ದಿನ “ಆರ್ಮುಗ’ ಅಂತ ಪ್ರೀತಿಯಿಂದ ಕರೆದ ಕನ್ನಡ ಸಿನಿ ಪ್ರೇಮಿಗಳು, ಕುರು ಕ್ಷೇತ್ರ ಚಿತ್ರ ನೋಡಿದ ನಂತರ ನನ್ನನ್ನು “ಶಕುನಿ ಮಾಮಾ’ ಅಂತಾರೆ. ಚಿಕ್ಕಂದಿನಲ್ಲಿ ರಾಮಾಯಣ, ಮಹಾಭಾರತ ನೋಡಿಕೊಂಡು ಬಂದವನು ನಾನು. ಇಂತಹ ಸಿನಿಮಾ ಮಾಡೋಕೆ ಧಮ್ ಬೇಕು. ಇವತ್ತು ಕರ್ನಾಟಕದಲ್ಲಿ ದುರ್ಯೋಧನ ಅಂದರೆ ದರ್ಶನ್. ಈ ಕಾಲಘಟ್ಟದಲ್ಲಿ ಈ ರೀತಿಯ ಪಾತ್ರವನ್ನು ಅವರು ಮಾಡಿದ್ದಾರೆ ಎಂದ ರವಿಶಂಕರ್, ಚಿತ್ರದ ಮುಖ್ಯವಾದ ಸನ್ನಿವೇಶದ ಡೈಲಾಗ್ ಹೇಳಿ ರಂಜಿಸಿದರು.
“ಕುರುಕ್ಷೇತ್ರ’ದಲ್ಲಿ ಪಾಂಡವರ ಅಗ್ರಜ ಧರ್ಮರಾಯನ ಪಾತ್ರದಾರಿ ಶಶಿಕುಮಾರ್, ಅರ್ಜುನ ಪಾತ್ರಧಾರಿ ಸೋನುಸೂದ್, ಭೀಮ ಡ್ಯಾನಿಶ್ ಅಖ್ತರ್, ನಕುಲ ಯಶಸ್, ಮಾಯ ಪಾತ್ರ ಮಾಡಿರುವ ಹರಿಪ್ರಿಯಾ ಚಿತ್ರದ ಅನುಭವ ಹಂಚಿಕೊಂಡರು. ಆಡಿಯೋ ಬಿಡುಗಡೆ ವೇಳೆ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಜರಿದ್ದರು. ನಟ ದರ್ಶನ್, ನಿಖಿಲ್, ರವಿಚಂದ್ರನ್, ಅವಿನಾಶ್ ಸೇರಿದಂತೆ ಅನೇಕ ನಟ, ನಟಿಯರು ಭಾಗವಹಿಸಿದ್ದರು.