ಬೆಂಗಳೂರು: ಕಳೆದ ವಿಧಾನಸಭೆ ಚನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ಅವರು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಕುರಿತ ತೀರ್ಪನ್ನು ಹೈಕೋಟ್ ಶುಕ್ರವಾರ ಪ್ರಕಟಿಸಲಿದೆ.
ಈ ಕುರಿತು ಪಿ.ಎಂ.ಮುನಿರಾಜುಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ, ಕಲಬುರಗಿ ಪೀಠದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ಪ್ರಕಟಿಸಲಿದೆ.
2018ರ ಮೇ 28ರಂದು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಆಯ್ಕೆಯಾಗಿದ್ದರು. ಆದರೆ, 2018ರ ಮೇ 9ರಂದು ಜಾಲಹಳ್ಳಿಯ ಫ್ಲಾಟ್ ಒಂದರಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಈ ಸಂಬಂಧ ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಸೇರಿ 10 ಜನರ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ಮನಿರಾಜುಗೌಡ ಆರೋಪಿಸಿದ್ದಾರೆ.
ಮುನಿರತ್ನ ಅವರು ಚುನಾವಣಾ ಪ್ರಚಾರಕ್ಕೆ ನಿಗದಿಪಡಿಸಿದ್ದ 25 ಲಕ್ಷ ರೂ.ಗಳಿಗಿಂತ ಹೆಚ್ಚುವರಿ 3.38 ಲಕ್ಷ ಹಣ ವೆಚ್ಚ ಮಾಡಲಾಗಿದೆ. ಮತದಾರರಿಗೆ ಸೀರೆ, ಕುಕ್ಕರ್‌ಗಳನ್ನು ಹಂಚುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಚುನಾವಣೆಯಲ್ಲಿ ಮುನಿರತ್ನ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಬೇಕು.
ಎರಡನೇ ಸ್ಥಾನ ಪಡೆದ ತಮ್ಮನ್ನು ವಿಜೇತ ಅಭ್ಯರ್ಥಿ ಎಂಬುದಾಗಿ ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.