Advertisement

ಮಳೆಗಾಲಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳದ ಪುರಸಭೆ

12:48 PM May 28, 2019 | Team Udayavani |

ಚನ್ನರಾಯಪಟ್ಟಣ: ಮುಂಗಾರು ಪ್ರಾರಂಭವಾಗಿದೆ. ಆದರೆ ಮಳೆ ಆಗಮನವಾಗಿಲ್ಲ ಒಂದು ವೇಳೆ ದಿಢೀರ್‌ ಧಾರಾಕಾರವಾಗಿ ವರುಣ ಆರ್ಭಟಿಸಿದರೆ ಮಳೆಗಾಲವನ್ನು ಎದುರಿಸಲು ಪುರಸಭೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೇ ಇರುವುದರಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳು ಗೋಚರವಾಗುತ್ತಿವೆ.

Advertisement

ಡಕ್‌ ಕೆಳಗೆ ಮಣ್ಣು: ಚನ್ನರಾಯಪಟ್ಟಣ ಪುರಸಭೆಯು 23 ವಾರ್ಡ್‌ಗಳನ್ನು ಹೊಂದಿದ್ದು ಕನಿಷ್ಠ ನೂರೈವತ್ತಕ್ಕೂ ಹೆಚ್ಚು ಪ್ರಮುಖ ಹಾಗೂ ಉಪರಸ್ತೆಗಳಿವೆ. ಇವುಗಳ ಅಂಚಿನಲ್ಲಿ ಒಳಚರಂಡಿ ಹಾಗೂ ಚರಂಡಿ ಕಾಮಗಾರಿ ನಡೆಸಲಾಗಿದೆ. ಕೆಲ ವಾರ್ಡ್‌ನಲ್ಲಿ ಈಗ ಚರಂಡಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಮಳೆ ಬಂದರೆ ನೀರು ನೇರವಾಗಿ ಮನೆ ಒಳಗೆ ನುಗ್ಗುತ್ತದೆ. ಇನ್ನು ಹಲವು ಡಕ್‌ಗಳ ಕೆಳಗೆ ಮಣ್ಣು ಕಟ್ಟಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯದೆ ಅಲ್ಲೇ ಶೇಖರಣೆಯಾಗಲಿದೆ.

ಯುದ್ಧಕಾಲೇ ಶಸ್ತ್ರಾಭ್ಯಾಸ: ಮಳೆ ನೀರಿನ ಪ್ರಮಾಣ ಹೆಚ್ಚಾದರೆ ಚರಂಡಿ ನೀರು ರಸ್ತೆಗೆ ಹರಿಯಲಿದೆ ಇದರಿಂದ ಇತ್ತೀಚೆಗೆ ನಿರ್ಮಾಣ ಆಗಿರುವ ಡಾಂಬರ್‌ ರಸ್ತೆಗಳು ಸಂಪೂರ್ಣ ಹಾಳಾಗಲಿವೆ. ಕೆಲ ವಾರ್ಡ್‌ ಗಳಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣ ಮಾಡಿದ್ದಾರೆ. ಅಲ್ಲಿನ ನೀರು ರಸ್ತೆ ಹಾಗೂ ಮನೆಗೆ ನುಗ್ಗುವ ಸಾಧ್ಯತೆಯಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ ಆದರೂ ಪುರಸಭೆ ಮಾತ್ರ ಈ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬ ನಾಣ್ಣುಡಿಯಂತೆ ಮಳೆ ಬಂದು ಸಾರ್ವಜನಿಕರು ತೊಂದರೆ ಅನುಭವಿಸಿದ ಮೇಲೆ ಪುರಸಭೆ ಎಚ್ಚೆತ್ತುಕೊಳ್ಳಲಿದೆ.

ಗೂಡಂಗಡಿ ತೆರವು ಮಾಡಿ: ಸರ್ಕಾರಿ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಒಳಚರಂಡಿ ಮೇಲೆ ಗೂಡಂಗಡಿ ನಿತ್ಯವೂ ತಲೆ ಎತ್ತುತ್ತಿವೆ ಅವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಚರಂಡಿಗೆ ತುಂಬಿದ್ದಾರೆ ಇದರಿಂದ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಆಸ್ಪತ್ರೆ ವೃತ್ತದಲ್ಲಿ ಚರಂಡಿ ಸಂಪೂರ್ಣವಾಗಿ ಮಣ್ಣಿನಿಂದ ತುಂಬಿಹೋಗಿದೆ ಇದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯಲಿದೆ.

ಕೆಲ ವಾರ್ಡ್‌ನಲ್ಲಿಯೂ ಸಮಸ್ಯೆ: ಕುವೆಂಪು ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕೆಲ ನಿವೇಶನದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಕೆರೆ ಬೀದಿಯಲ್ಲಿ ಮಳೆ ಬಂದರೆ ಮನೆಯ ಒಳಕ್ಕೆ ನೀರು ಹೋಗಲಿದೆ. ಕೊಳಚೆ ಪ್ರದೇಶ ಹೊಂದಿರುವ ವಾರ್ಡ್‌ ಗಳಲ್ಲಿ ಚರಂಡಿ ಸಂಪೂರ್ಣ ಹೂಳು ತುಂಬಿಕೊಂಡಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದಿರುವುದರಿಂದ ವಾರ್ಡ್‌ನ ವಾಸಿಗರು ತೊಂದರೆಗೆ ಒಳ ಪಡಲಿದ್ದಾರೆ.

Advertisement

ಹೌಸಿಂಗ್‌ ಬೋರ್ಡ್‌ನಲ್ಲಿ ಚರಂಡಿ ಅವ್ಯವಸ್ಥೆ: ಪಟ್ಟಣದ ಹೃದಯ ಭಾಗದಿಂದ ಎರಡು ಕಿ.ಮೀ. ದೂರದಲ್ಲಿ 30 ವರ್ಷದ ಹಿಂದೆ ಸರ್ಕಾರ ನಿರ್ಮಾಣ ಮಾಡಿರುವ ಹೌಸಿಂಗ್‌ ಬೋರ್ಡ್‌ ಕಾಲೋನಿಯ ಚರಂಡಿ ವ್ಯವಸ್ಥೆ ವೈಜ್ಞಾನಿಕವಾಗಿದೆ. ನಿತ್ಯವೂ ಕೊಳಚೆ ನೀರು ನಾಲೆ ಸೇರುತ್ತಿದೆ. ಬೇಸಿಗೆ ಹೊರತು ಪಡಿಸಿದರೆ ಮಳೆಗಾಲದಲ್ಲಿ ತೊಂದರೆ ಆಗುತ್ತಿದೆ ಹಾಗೂ ಹೇಮಾವತಿ ನಾಲೆಯಲ್ಲಿ ನೀರು ಹರಿಯುವಾಗ ಕೃಷಿ ಚಟುವಟಿಕೆಗೆ ಚಿಕ್ಕನಾಲೆಗೆ ನೀರು ಬಿಡಲಾಗುತ್ತದೆ ಈ ವೇಳೆ ಹೌಸಿಂಗ್‌ ಬೋರ್ಡ್‌ನಲ್ಲಿರುವ 450ಮಳೆಗಳ ಚರಂಡಿ ನೀರು ನಾಲೆಯಲ್ಲಿ ಹರಿಯುವ ನೀರಿನೊಂದಿಗೆ ಬೆರೆಯುತ್ತಿದೆ ಇದನ್ನು ತಪ್ಪಿಸಲು ಪುರಸಭೆ ಮುಂದಾಗಿಲ್ಲ.

ಮಾರ್ಗೋಪಾಯವೇನು?: ಮಳೆ ಬೀಳುವ ಮುನ್ನವೆ ಪುರಸಭೆ ವ್ಯಾಪ್ತಿಯಲ್ಲಿನ ಒಳಚರಂಡಿಯಲ್ಲಿ, ಡಕ್‌ ಕೆಳಗೆ ಶೇಖರಣೆ ಆಗಿರುವ ಮಣ್ಣು ತೆರವು ಮಾಡಬೇಕು. ಒಳಚರಂಡಿಗಳು ಕಟ್ಟಿಕೊಳ್ಳುವ ಮುನ್ನ ದುರಸ್ತಿ ಮಾಡಬೇಕು.

ಯಾವ ವಾರ್ಡ್‌ನಲ್ಲಿ ಚರಂಡಿ ಪೂರ್ಣವಾಗಿವೋ ಅವುಗಳನ್ನು ಪತ್ತೆ ಹಚ್ಚಿ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಕೊಳೆಗೇರಿ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next