ಬಂಗಾರಪೇಟೆ: ಪಕ್ಷದ ಭದ್ರಕೋಟೆಯಾಗಿರುವ ಬಂಗಾರಪೇಟೆ ಪುರಸಭೆ ಚುನಾವಣೆಯಲ್ಲಿ ಈ ಬಾರಿಯೂ 27 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಬೇರೆ ಯಾವುದೇ ಪಕ್ಷಗಳು ಪೈಪೋಟಿ ನೀಡುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.
ತಾವು ಸ್ಪರ್ಧಿಸಲಿರುವ ಪಟ್ಟಣದ ವಿಜಯನಗರ ಪೂರ್ವ ವಾರ್ಡ್ ನಂ.16ರಲ್ಲಿ ಯುವ ಮತದಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಹಲವು ದಶಕಗಳಿಂದ ಬಂಗಾರಪೇಟೆ ಪುರಸಭೆಯಲ್ಲಿ ಸುಭದ್ರ ಆಡಳಿತ ನಡೆಸುತ್ತಿದೆ. ಆದ್ದರಿಂದ ಮತದಾರರು ಪ್ರತಿ ಬಾರಿಯೂ ಪಕ್ಷದ ಪರವಾಗಿಯೇ ಮತ ಹಾಕುತ್ತಿದ್ದು, ಈ ಬಾರಿಯೂ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ: ಬಂಗಾರಪೇಟೆ ಪುರಸಭೆಯ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷದ ಬಹುತೇಕ ಹಾಲಿ ಸದಸ್ಯರಿಗೆ ಸೂಕ್ತ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲು ಕ್ರಮಕೈಗೊಳ್ಳಲಾಗಿದೆ.
ಉಳಿದಂತೆ ಕೆಲವು ಸದಸ್ಯರಿಗೆ ಕ್ಷೇತ್ರಗಳಲ್ಲಿನ ಮೀಸಲಾತಿ ಕೊರತೆಯಿಂದ ಸ್ಪರ್ಧಿಸಲು ಸಾಧ್ಯವಾಗದೇ ಇರುವ ಕಾರಣ ಹಾಗೂ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದರು.
ಕಳೆದ ಐದು ವರ್ಷಗಳಿಂದ ಪಟ್ಟಣದಲ್ಲಿ ಪುರಸಭೆ ಆಡಳಿತ ಮಂಡಳಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಹಯೋಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಆಗ್ಗಿಂದಾಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಶಾಸಕರು ಸಮಾಲೋಚನೆ ಮಾಡಿ ಬಗೆಹರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಹೇಳುವವರೇ ಇಲ್ಲದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.
ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡುವುದರ ಮೂಲಕ ಪುರಸಭೆಯಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಜನರು ಆರ್ಶಿವಾದ ಮಾಡಿದ್ದ ರೀತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಪುರಸಭೆಯ ಎಲ್ಲಾ 27 ವಾರ್ಡ್‌ಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲುವು ಸಾಧಿಸಲು ಎಲ್ಲಾ ಮತದಾರರು ಪಣತೊಡಬೇಕೆಂದು ಮನವಿ ಮಾಡಿದರು.
ಪುರಸಭೆ ಹಾಲಿ ಸದಸ್ಯ ಜಿ.ವೆಂಕಟೇಶಗೌಡ, ವಾರ್ಡ್ ನಂ. 12ರ ಅಭ್ಯರ್ಥಿ ಬಾಳೆಹಣ್ಣು ವೆಂಕಟೇಶ್, ಕರವೇ ಚಲಪತಿ, ಭರತ್, ಜನಿ, ದಿವಾಕರರೆಡ್ಡಿ, ರಾಹುಲ್ರೆಡ್ಡಿ, ನರಸಾರೆಡ್ಡಿ ಉಪಸ್ಥಿತರಿದ್ದರು.