Advertisement

ಬಗೆಹರಿಯದ ನಗರಸಭೆ ಮೀಸಲಾತಿ ಗೊಂದಲ

01:32 PM Sep 04, 2020 | Suhan S |

ಮಂಡ್ಯ: ಇಲ್ಲಿನ ನಗರಸಭೆ ಚುನಾವಣೆ ನಡೆದು ಎರಡು ವರ್ಷ ಕಳೆಯುತ್ತಾ ಬಂದರೂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಮರೀಚಿಕೆಯಾಗಿದೆ.

Advertisement

2018ರ ಆ.31ರಂದು ಚುನಾವಣೆ ನಡೆದು, ಸೆ.3ರಂದು ಫ‌ಲಿತಾಂಶ ಪ್ರಕಟವಾಗಿತ್ತು. ಒಟ್ಟು 35 ವಾರ್ಡ್‌ಗಳ ಪೈಕಿ ಜೆಡಿಎಸ್‌ ಪಕ್ಷ 18, ಕಾಂಗ್ರೆಸ್‌ 10, ಬಿಜೆಪಿ 2 ಹಾಗೂ ಪಕ್ಷೇತರ 5 ಮಂದಿ ಸದಸ್ಯರು ಚುನಾಯಿತರಾಗಿದ್ದರು. ಜೆಡಿಎಸ್‌ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್‌ನಿಂದ ಅಧಿಕಾರಕಸಿದುಕೊಂಡಿದೆ. ಆದರೂ, ಇನ್ನೂ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ.

ಕೋರ್ಟ್‌ ಮೆಟ್ಟಿಲು: ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬಿ) ಮಹಿಳೆಗೆ ನಿಗದಿಪಡಿಸಿ ಸರ್ಕಾರ ಪ್ರಕಟಿಸಿತ್ತು. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಸಲ್ಲಿಸಿದ ಪರಿಣಾಮ ಗೊಂದಲ ಉಂಟಾಯಿತು. ನಂತರ ಹೈಕೋರ್ಟ್‌ ಸರ್ಕಾರದ ಮೀಸಲಾತಿ ಎತ್ತಿ ಹಿಡಿದಿತ್ತು. ಆದರೆ ,ಮತ್ತೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದ್ದು, ಇದು ವಿಚಾರಣೆ ಹಂತದಲ್ಲಿದೆ.

7 ವರ್ಷ ಸದಸ್ಯತ್ವ: ಸದಸ್ಯರಾಗಿ 2 ವರ್ಷಗಳು ಕಳೆದಿದೆ. ಮೊದಲ ಸಾಮಾನ್ಯ ಸಭೆ ನಡೆದ ದಿನದಿಂದ ಸದಸ್ಯರಿಗೆ ಅಧಿಕಾರ ಸಿಗಲಿದೆ. ಆದರೆ, ಇನ್ನೂ ಸಭೆ ನಡೆದಿಲ್ಲ. ಇದೇ ವರ್ಷ ಮೀಸಲಾತಿ ಗೊಂದಲ ಮುಗಿದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಸಭೆ ನಡೆದರೆಮುಂದಿನ 5 ವರ್ಷ ಅಧಿಕಾರ ಸಿಗಲಿದೆ. ಈಗಾಗಲೇ 2 ವರ್ಷ ಮುಗಿದಿದೆ. ಇದರಿಂದ ಈಗಿನ ಸದಸ್ಯರು 7 ವರ್ಷ ಸದಸ್ಯರಾಗಲಿದ್ದಾರೆ.

ಅಧಿಕಾರಿಗಳದ್ದೇ ದರ್ಬಾರು: ಸದ್ಯ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಕಾಮಗಾರಿಗಳಿಗೆ ಅನುಮೋದನೆಗೆ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ, ಇತರೆ ನಗರದ ಯೋಜನೆಗಳಿಗೆ ಆಡಳಿತ ಮಂಡಳಿ ಅನುಮೋದನೆ ಅಗತ್ಯವಾಗಿದ್ದು, ಇದರಿಂದ ನಗರದ ಅಭಿವೃದ್ಧಿಗೆ ಕುಂಠಿತವಾಗಿದೆ. ಅಲ್ಲದೆ, ನಗರಸಭೆಯಲ್ಲಿ ಅಧಿಕಾರಿಗಳ ದರ್ಬಾರ್‌ ಜೋರಾಗಿದ್ದು, ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ. ಯಾವ ಕೆಲಸಗಳು ನಡೆಯುತ್ತಿಲ್ಲ ಎಂದು ನಗರಸಭೆ ಸದಸ್ಯರು ಆರೋಪಿಸಿದ್ದಾರೆ.

Advertisement

ಜನಪ್ರತಿನಿಧಿಗಳಿಗೆ ಶಾಪ: ನಗರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಇದಕ್ಕಾಗಿ ಆಯಾ ವಾರ್ಡ್‌ಗಳ ಸದಸ್ಯರಿಗೆ ಸಾರ್ವಜನಿಕರು ಮನವಿ ಮಾಡುತ್ತಾರೆ. ನಾಯಿಗಳ ಕಾಟ ಹೆಚ್ಚಾಗಿದೆ. ಆದರೆ, ನಗರಸಭೆಯಲ್ಲಿ ಅಧಿಕಾರಿಗಳು ಸದಸ್ಯರ ಮಾತಿಗೆ ಮನ್ನಣೆ ನೀಡದ ಪರಿಣಾಮ ಯಾವ ಕೆಲಸಗಳು ಆಗುತ್ತಿಲ್ಲ. ಇದರ ವಾಸ್ತವ ಅರಿಯದ ಸಾರ್ವಜನಿಕರು ಸದಸ್ಯರಿಗೆ ಹಿಡಿಶಾಪ ಹಾಕುತ್ತಾರೆ ಎಂದು 17ನೇ ವಾರ್ಡ್‌ನ ಸದಸ್ಯೆ ಎಂ.ಬಿ.ಶಶಿಕಲಾಪ್ರಕಾಶ್‌ ಹೇಳುತ್ತಾರೆ.

ಚುರುಕುಗೊಳ್ಳದ ಕಾಮಗಾರಿ: ನಗರಕ್ಕೆ 24 ಗಂಟೆ ಕಾಲ ನೀರು ಸರಬರಾಜು ಮಾಡುವ ಅಮೃತ್‌ ಯೋಜನೆ ಕುಂಟುತ್ತಾ ಸಾಗಿದೆ. ಎಲ್ಲ ವಾರ್ಡ್‌ಗಳಲ್ಲೂ ಪೈಪ್‌ಲೈನ್‌ ಅಳವಡಿಸಲು ಕಾಮಗಾರಿಗಾಗಿ ರಸ್ತೆ ಅಗೆದಿದ್ದಾರೆ. ಇದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ ಎಂದು ನಗರದ ನಿವಾಸಿ ಕುಮಾರ್‌ ಅಳಲು. ಈ ಸಮಸ್ಯೆಗೆ ಪರಿಹಾರ ಏನು ಎಂಬುದು ಮತದಾರರ ಪ್ರಶ್ನೆ ಆಗಿದೆ.

ಸರ್ಕಾರದ ವೈಫ‌ಲ್ಯದಿಂದ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ. ನ್ಯಾಯಾಲಯ ಮತ್ತೂಮ್ಮೆ ಪರಿಶೀಲಿಸಿ ಎಂದು ಸರ್ಕಾರಕ್ಕೆ ಹೇಳಿದ್ದರೂ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ. ಕೆಲವು ರಾಜಕೀಯ ಪ್ರಭಾವಿಗಳು ಇದನ್ನು ತಡೆ ಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ಸಹ ಸದಸ್ಯರನ್ನು ಕರೆದು ಮಾತನಾಡಿಲ್ಲ. ಅಧಿಕಾರಿಗಳು ನಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಕೆಲವು ಸದಸ್ಯರ ಪರಿಸ್ಥಿತಿಯಂತೂ ಮೂರಾಬಟ್ಟೆಯಾಗಿದೆ. ಒಟ್ಟಾರೆ ಸದಸ್ಯರನ್ನು ಕೈಕಟ್ಟಿ ಕೂರುವಂತೆ ಮಾಡಿದ್ದಾರೆ.  ನಾಗೇಶ್‌, ಜೆಡಿಎಸ್‌ ಸದಸ್ಯ, 1ನೇ ವಾರ್ಡ್‌.

ಸರ್ಕಾರದಿಂದ ಬಂದಿರುವ ಅನುದಾನ ಬಳಸಲು ಸಾಧ್ಯವಾಗುತ್ತಿಲ್ಲ. ನಗರದ ಅಭಿವೃದ್ಧಿ ಕುಂಠಿತವಾಗಿದೆ. 50 ಕೋಟಿ ರೂ. ಅನುದಾನ ಬಂದಿದೆ. ಆದರೆ, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಒಂದು ಬಾರಿಯೂ ಸಭೆ ನಡೆಸಿಲ್ಲ. ಅನುದಾನ ಬಳಸದಿದ್ದರೆ ವಾಪಸ್‌ ಹೋಗಲಿದೆ. ನಗರದ ಅಭಿವೃದ್ಧಿಗಳಿಗೆ ಸ್ಪಂದಿಸುತ್ತಿಲ್ಲ. ಸಾರ್ವಜನಿಕರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ.   ಟಿ.ಕೆ.ರಾಮಲಿಂಗಯ್ಯ, ಕಾಂಗ್ರೆಸ್‌ ಸದಸ್ಯ, 27ನೇ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next