ಚಾಮರಾಜನಗರ: ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲೂ ಖಾತಾ ಆಂದೋಲನ ನಡೆಸಿ, ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ನಗರಸಭಾ ಸದಸ್ಯರು ಆಗ್ರಹಿಸಿದರು.
ನಗರದ ನಗರಸಭಾ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಬಸವಣ್ಣ ಮಾತನಾಡಿ, ಈಗಾಗಲೇ ಖಾತಾ ಆಂದೋಲನವನ್ನು 7ನೇ ವಾರ್ಡ್‌ನಲ್ಲಿ ನಡೆಸಲಾಗಿದೆ. ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆ ಸಮಸ್ಯೆ ಇರುವ ಕಡೆಗಳಲ್ಲಿ ಆಂದೋಲನ ಮಾಡಬೇಕು ಎಂದು ಹೇಳಿದರು. ಆಂದೋಲನ ನಡೆಸಿಲ್ಲ: 1 ರಿಂದ 31 ವಾರ್ಡ್ ಗಳಲ್ಲೂ ಮಾಡಬೇಕಿತ್ತು. ಆದರೆ, 7ನೇ ವಾರ್ಡ್ ನಲ್ಲಿ ಮಾತ್ರ ಮಾಡಿ, ಆ ನಂತರ ಬೇರೆ ಯಾವುದೇ ವಾರ್ಡ್‌ಗಳಲ್ಲಿ ಆಂದೋಲನ ನಡೆಸಿಲ್ಲ. ಹಲವು ವಾರ್ಡ್‌ಗಳಲ್ಲಿ 60-70 ವರ್ಷಗಳಿಂದ ಖಾತೆಗಳಾಗಿಲ್ಲ. ಸರ್ವೆ ಮಾಡಿಸಿ ಖಾತಾ ಆಂದೋಲನ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಮತ್ತೋರ್ವ ಸದಸ್ಯ ಕಲೀಲ್ ಉಲ್ಲಾ, ಈಗಾಗಲೇ ಇ ಸ್ವತ್ತು ಮಾಡಿಸಲು ನಗರಸಭೆಗೆ ಅರ್ಜಿ ಸಲ್ಲಿಸಿರುವುದನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ಖಾತೆ ಮಾಡಬೇಕು ಎಂದರು.
ಸಮಸ್ಯೆ ಇರುವ ಕಡೆ ಮಾಡಿ: ಸದಸ್ಯ ಚಂದ್ರಶೇಖರ್ ಮಾತನಾಡಿ, 2019ರಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಇಲ್ಲಿಯ ತನಕ ಖಾತೆ ಮಾಡಿಲ್ಲ. ಎಲ್ಲ ದಾಖಲೆಗಳು ಸರಿ ಇರುವ ಕಡೆ ಆಂದೋಲನ ಮಾಡಿದರೆ ಏನು ಪ್ರಯೋಜನ? ಸಮಸ್ಯೆ ಇರುವ ಕಡೆ ಮಾಡುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎಸ್.ವಿ.ರಾಮದಾಸ್, ಈಗಾಗಲೇ 7ನೇ ವಾರ್ಡ್ ನಲ್ಲಿ ಪ್ರಾಯೋಗಿಕವಾಗಿ ಖಾತಾ ಆಂದೋಲನ ಮಾಡಲಾಗಿದೆ. ನಗರಸಭಾ ವ್ಯಾಪ್ತಿಯ 31 ವಾರ್ಡ್ ಗಳಲ್ಲೂ ಆಂದೋಲನ ನಡೆಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಸದಸ್ಯ ಸುದರ್ಶನಗೌಡ ಮಾತನಾಡಿದರು. ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಿ.ಸುಧಾ, ಪೌರಾಯುಕ್ತ ಎಸ್.ವಿ.ರಾಮದಾಸ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Related Articles
ಮೂಲ ಸೌಲಭ್ಯ ಕಲ್ಪಿಸಿ :
ಚಾಮರಾಜನಗರ: ನಗರಸಭಾ ವ್ಯಾಪ್ತಿಯ 3ನೇ ವಾರ್ಡ್‌ನಲ್ಲಿರುವ ಆಶ್ರಯ ಬಡಾವಣೆಗೆ ಸೂಕ್ತ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸದಸ್ಯ ಮಹಮ್ಮದ್ ಅಮೀಕ್ ಸಾಮಾನ್ಯ ಸಭೆಯಲ್ಲಿ ಪ್ರತಿಭಟಿಸಿದರು.
ಇದಕ್ಕೆ ಇತರೆ ಸದಸ್ಯರಾದ ಎಂ.ಮಹೇಶ್, ತೌಸಿಯಾ ಬಾನು, ಕಲೀಲ್ ಉಲ್ಲಾ ಇತರರು ಬೆಂಬಲ ಸೂಚಿಸಿದರು. ಸದಸ್ಯ ಮಹಮ್ಮದ್ ಅಮೀಕ್ ಮಾತನಾಡಿ, ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರು ಒದಗಿಸಲು ಪೈಪ್‌ಲೈನ್ ಮಾಡಿ 4 ವರ್ಷವೇ ಕಳೆದು ಹೋಗಿದೆ. ಆದರೆ, ಇಲ್ಲಿಯ ತನಕ ಕುಡಿಯುವ ನೀರಿನ ಪೂರೈಕೆ ಆಗಿಲ್ಲ. ಅಲ್ಲದೇ, ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ನಿವಾಸಿಗಳಿಗೆ ಅನಾನುಕೂಲವಾಗಿದೆ ಎಂದು ದೂರಿದರು. ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು